ADVERTISEMENT

ಲೋಕಾಯುಕ್ತ ದಾಳಿ: ಬಸವರಾಜ ಮಗಿ ಮನೆಯಲ್ಲಿ ₹23 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 16:12 IST
Last Updated 12 ಜುಲೈ 2024, 16:12 IST
ಬಸವರಾಜ ಮಗಿ ಅವರ ತವರು ಗ್ರಾಮ ಪಾಳಾದ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ
ಬಸವರಾಜ ಮಗಿ ಅವರ ತವರು ಗ್ರಾಮ ಪಾಳಾದ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ   

ಕಲಬುರಗಿ: ಬಿಬಿಎಂಪಿ ಮಹದೇವಪುರ ವಿಭಾಗದ ಕಂದಾಯ ಅಧಿಕಾರಿ ಬಸವರಾಜ ಮಗಿ ಅವರ ತವರು ಗ್ರಾಮ ಪಾಳಾದ ಮನೆಯ ಅಲ್ಮೇರಾದಿಂದ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ₹23 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಬಸವರಾಜ ಅವರಿಗೆ ಸಂಬಂಧಿಸಿದ ನಾಲ್ಕು ಕಡೆಗಳಲ್ಲಿ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಅವುಗಳ ಪೈಕಿ ಎಂಬಿ ನಗರದ ನಿವಾಸದಲ್ಲಿ ಕ್ಯಾಸಿನೊ ಕಾಯಿನ್‌ಗಳು ಪತ್ತೆಯಾಗಿದ್ದವು. ಉಳಿದ ಕಡೆಗಳಲ್ಲಿ ಕೆಲ ದಾಖಲಾತಿಗಳು ಸಿಕ್ಕಿದ್ದವು.‌

ಪಾಳಾದ ಮನೆಯ ಅಲ್ಮೇರಾಕ್ಕೆ ಬೀಗ ಹಾಕಲಾಗಿತ್ತು. ಅದರ ಬೀಗ ತರುವಂತೆ ಬಸವರಾಜ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ, ಬೆಂಗಳೂರಿನಲ್ಲಿದ್ದ ಬಸವರಾಜ ಅವರ ತಾಯಿ ಕೀ ತೆಗೆದುಕೊಂಡು ಶುಕ್ರವಾರ ಬೆಳಿಗ್ಗೆ ಪಾಳಾದ ಮನೆಗೆ ಬಂದರು. ಅಲ್ಮೇರಾದ ಕೀ ತೆರೆದು ನೋಡಿದಾಗ 352 ಗ್ರಾಂ. ಚಿನ್ನ (₹20.09 ಲಕ್ಷ) ಹಾಗೂ 4.87 ಕೆ.ಜಿ ಬೆಳ್ಳಿ (₹2.91 ಲಕ್ಷ) ಸೇರಿ ಒಟ್ಟು ₹23 ಲಕ್ಷ ಮೌಲ್ಯದ ಚಿನ್ನಾಭರಣ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಗುರುವಾರ ಬೆಳಿಗ್ಗೆ ದಾಳಿ ಮಾಡಿದ ಅಧಿಕಾರಿಗಳು ತಪಾಸಣೆ ಮುಗಿಯುವವರೆಗೂ ಪಾಳಾದ ಮನೆಯಲ್ಲಿ ಉಳಿದುಕೊಂಡಿದ್ದರು. ಶುಕ್ರವಾರ ಸಂಜೆ 4 ಗಂಟೆವರೆಗೂ ಕಾರ್ಯಾಚರಣೆ ಮಾಡಿದ್ದಾರೆ.

ದಾಳಿಯ ತಂಡದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಹಣಮಂತ ಸಣ್ಣಮನಿ, ಕಾನ್‌ಸ್ಟೆಬಲ್‌ಗಳಾದ ಸರಸ್ವತಿ, ಜಯಶ್ರೀ, ‌ಗಂಗಾಧರ ಇದ್ದರು.

ಬಸವರಾಜ ಮಗಿ ಅವರ ತವರು ಗ್ರಾಮ ಪಾಳಾದ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.