ಕಲಬುರಗಿ: ಪಿಎಂ ಸ್ವನಿಧಿ ಯೋಜನೆಯಡಿ ಸಣ್ಣ ವ್ಯಾಪಾರಿಗಳಿಗೆ ಮಂಜೂರಾದ ₹ 10 ಸಾವಿರ ಸಾಲವನ್ನು ಬಿಡುಗಡೆ ಮಾಡಲು ₹ 7,500 ಹಣವನ್ನು ಫೋನ್ ಪೇ ಮೂಲಕ ಪಡೆಯುತ್ತಿದ್ದ ವಾಡಿ ಪುರಸಭೆ ಯೋಜನಾಧಿಕಾರಿ ಚಂದ್ರಕಾಂತ ಗುರುಪಾದಪ್ಪ ಪಾಟೀಲ ಎಂಬುವವರು ಲೋಕಾಯುಕ್ತ ಪೊಲೀಸರ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಪಿಎಂ ಸ್ವನಿಧಿ ಅಡಿ ಸಾಲವನ್ನು ವಿತರಣೆ ಮಾಡಲು ಪ್ರತಿಯೊಬ್ಬರಿಂದ ತಲಾ ₹ 750ರಂತೆ ₹ 18 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದ ಬೇಸತ್ತಿದ್ದ ಫಲಾನುಭವಿ ಮೊಹಮ್ಮದ್ ರಫೀಕ್ ಜಲಾಲುದ್ದೀನ್ ಅನೂರಿ (42) ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚದ ಹಣದ ಭಾಗವಾಗಿ ₹ 7,500 ಅನ್ನು ಫೋನ್ ಪೇ ಮೂಲಕ ಚಂದ್ರಕಾಂತ ಖಾತೆಗೆ ವರ್ಗಾವಣೆ ಮಾಡಿದ್ದರು. ಅಲ್ಲಿಯೇ ಇದ್ದ ಲೋಕಾಯುಕ್ತ ಸಿಬ್ಬಂದಿ ಯೋಜನಾಧಿಕಾರಿಯನ್ನು ವಶಕ್ಕೆ ಪಡೆದರು.
ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ರಾಜಶೇಖರ ಹಳಗೋದಿ, ಸಿಬ್ಬಂದಿಯಾದ ಶರಣು, ಪ್ರದೀಪ, ಅನಿಲ್, ಮಂಜುನಾಥ್, ಸಿದ್ದು ಬಿರಾದಾರ, ಹಣಮಂತ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.