ADVERTISEMENT

ಲಾಕ್‌ಡೌನ್‌: ನೆರವಿನ ನಿರೀಕ್ಷೆಯಲ್ಲಿ ಲಾರಿ ಚಾಲಕರು, ಕ್ಲೀನರ್‌ಗಳು

ಲಾಕ್‌ಡೌನ್‌ ಕಾರಣ ಸಂಚಾರ ಕುಸಿತ, ಲೋಡಿಂಗ್‌– ಅನ್‌ಲೋಡಿಂಗ್‌ ಇಲ್ಲದೇ ಹಮಾಲರೂ ಸಂಕಷ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 9:25 IST
Last Updated 10 ಜೂನ್ 2021, 9:25 IST
ಎಸ್‌.ಡಿ.ದೇಗಾಂವ
ಎಸ್‌.ಡಿ.ದೇಗಾಂವ   

ಕಲಬುರ್ಗಿ: ಲಾಕ್‌ಡೌನ್‌ ಕಾರಣದಿಂದ ಕಳೆದ ಒಂದೂವರೆ ತಿಂಗಳಿಂದ ಲಾರಿ ಚಾಲಕರು, ಕ್ಲೀನರ್‌ಗಳು ಹಾಗೂ ಹಮಾಲಿ ಕೆಲಸ ಮಾಡುವವರ ಬದಕು ಕೂಡ ಸಂಕಷ್ಟಕ್ಕೆ ಸಿಲುಕಿದೆ. ಸಹಜವಾಗಿಯೇ ಈ ಕುಟುಂಬಗಳು ಸರ್ಕಾರದ ನೆರವಿನ ನಿರೀಕ್ಷೆಯಲ್ಲಿವೆ.

ಸರಕು ಸಾಗಣೆ ವಾಹನಗಳಿಗೆ ಅನುಮತಿ ನೀಡಲಾಗಿದೆ ಆದರೂ ಮಾರುಕಟ್ಟೆ, ಹೋಟೆಲ್‌, ನಿರ್ಮಾಣ ಕಾರ್ಯಗಳು ಅಷ್ಟಾಗಿ ನಡೆಯದ ಕಾರಣ ಲಾರಿಗಳ ಓಡಾಟ ಶೇ 70ರಷ್ಟು ನಿಂತುಹೋಗಿದೆ.

ಜಿಲ್ಲೆಯಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಚಾಲಕ ಹಾಗೂ ಕ್ಲೀನರ್‌ಗಳು ಇದ್ದಾರೆ. ಇವರ ಕುಟುಂಬಗಳೆಲ್ಲ ಲಾರಿಗಳ ಓಡಾಟವನ್ನೇ ಅವಲಂಬಿಸಿವೆ. ಅದರಲ್ಲೂ ಅರ್ಧದಷ್ಟು ಕಾರ್ಯಾಚರಣೆ ಮಹಾರಾಷ್ಟ್ರ ರಾಜ್ಯದ ಮುಖಾಂತರವೇ ಆಗುತ್ತದೆ. ಮಾರ್ಚ್‌ ಆರಂಭದಲ್ಲೇ ಮುಂಬೈ ಸೇರಿಂದತೆ ಇಡೀ ಮಹಾರಾಷ್ಟ್ರದಲ್ಲಿ ಸೋಂಕು ಅತಿಯಾಗಿ ವ್ಯಾಪಿಸಿದ್ದರಿಂದ ಲಾರಿಗಳ ಓಡಾಟ ಕಡಿಮೆಯಾಗುತ್ತ ಬಂದಿತು. ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆಯಾದ ಮೇಲಂತೂ ನೂರಾರು ಲಾರಿ ಚಾಲಕರು ಹಾಗೂ ಕ್ಲೀನರ್‌ಗಳು ಕೆಲಸವಿಲ್ಲದೇ ಕುಳಿತುಕೊಳ್ಳುವಂತಾಗಿದೆ.

ADVERTISEMENT

ಕಾರ್ಮಿಕರಿಗೆ ರಾಜ್ಯ ಸರ್ಕಾರ ನೀಡುವ ಆರ್ಥಿಕ ನೆರವನ್ನು ತಮಗೂ ನೀಡಬೇಕು. ಕನಿಷ್ಠ ಮೂರು ತಿಂಗಳಿಗೆ ಸಾಲುವಷ್ಟು ಧಾನ್ಯ ನೀಡಬೇಕು ಎಂಬ ನಿರೀಕ್ಷೆ ಈ ಕುಟುಂಬಗಳದ್ದು.

ತೊಗರಿ ಬೇಳೆ, ಹಣ್ಣು, ತರಕಾರಿ, ಹೂವು, ಪರ್ಸಿ, ಸಿಮೆಂಟ್‌, ಉಸುಕು ಸೇರಿದಂತೆ ಹಲವು ಸಾಮಗ್ರಿಗಳು ಜಿಲ್ಲೆಯಿಂದ ದೇಶದ ವಿವಿಧೆಡೆ ರವಾನೆಯಾಗುತ್ತವೆ. ಅದರಲ್ಲೂ ಬೆಂಗಳೂರು, ಮೈಸೂರು, ಪುಣೆ, ಮುಂಬೈ, ದೆಹಲಿ, ಚೆನ್ನೈ, ಜಮ್ಮು– ಕಾಶ್ಮೀರ ಹಾಗೂ ನೇಪಾಳದ ಪ್ರಮುಖ ಸ್ಥಳಗಳಿಗೂ ಇಲ್ಲಿಂದ ನೇರ ಸಂಪರ್ಕವಿದೆ.

ಒಮ್ಮೆ ಲಾರಿ ಲೋಡ್‌ ಮಾಡಿಕೊಂಡು ಹೊರಟರೆ ಚಾಲಕರು ಹಾಗೂ ಕ್ಲೀನರ್‌ಗಳು 10ರಿಂದ 20 ದಿನ ಸಂಚಾರದಲ್ಲೇ ಕಳೆಯಬೇಕಾಗುತ್ತದೆ. ಇದರಿಂದ ಅವರ ವೈಯಕ್ತಿಕ ಖರ್ಚುಗಳೂ ಹೆಚ್ಚು. ಲಾಕ್‌ಡೌನ್‌ಗಿಂತ ಮುಂಚೆ ಲಾರಿ ಮಾಲೀಕರು ಪ್ರತಿ ತಿಂಗಳಿಗೆ ಅಂದಾಜು ₹ 10 ಸಾವಿರದಿಂದ ₹ 12 ಸಾವಿರ ಸಂಬಳ ಕೊಡುತ್ತಿದ್ದರು. ಇದರೊಂದಿಗೆ ಪ್ರತಿ ದಿನ ₹ 550ರ ಬಾಟಾ ಖರ್ಚು ಕೂಡ ಸಿಗುತ್ತಿತ್ತು. ಆದರೆ, ಕಳೆದ ವರ್ಷದ ಲಾಕ್‌ಡೌನ್‌ ಕಾರಣ ಮಾಲೀಕರು ಸಂಬಳವನ್ನು ₹ 8 ಸಾವಿರಕ್ಕೆ ಇಳಿಸಿದ್ದಾರೆ. ಈಗ ಮತ್ತೊಂದು ಲಾಕ್‌ಡೌನ್‌ ಕಾರಣ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಲೋಡಿಂಗ್‌ ಹಾಗೂ ಅನ್‌ಲೋಡಿಂಗ್‌ ಕೆಲಸಗಳೂ ನಿಂತಿದ್ದರಿಂದ ಹಮಾಲಿ ಕೆಲಸ ಮಾಡುವ ನೂರಾರು ಮಂದಿಯ ಕುಟುಂಬಗಳು ಕೂಡ ದೈನಂದಿನ ಖರ್ಚು– ವೆಚ್ಚಕ್ಕೆ ಪರದಾಡುವಂತಾಗಿದೆ.

ಮಾಲೀಕರೂ ನಷ್ಟದಲ್ಲಿದ್ದಾರೆ: ಲಾಕ್‌ಡೌನ್‌ ಕಾರಣ ಲಾರಿಗಳ ಹಲವು ಮಾಲೀಕರು ಕೂಡ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಲೋಡ್‌ ಬಾರದ ಕಾರಣ ಲಾರಿಗಳು ಮನೆ ಮುಂದೆ ನಿಲ್ಲುವುದು ಅನಿವಾರ್ಯವಾಗಿದೆ.

ಲಾರಿಗಳ ವಿಮೆ ದರವನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ ₹ 45 ಸಾವಿರ ಇದ್ದ ವಿಮೆದರ ಈಗ ₹ 56 ಸಾವಿರಕ್ಕೆ ಏರಿಸಿದ್ದಾರೆ. ಏಕಾಏಕಿ ₹ 11 ಸಾವಿರ ಹೆಚ್ಚಳ ಮಾಡಿದ್ದು ತಮಗೆ ಹೊರೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಟೋಲ್‌ ದರವನ್ನು ಶೇ 10ರಷ್ಟು ಏರಿಸಲಾಗಿದೆ. ಇದರಿಂದ ನಾವೂ ನಷ್ಟಕ್ಕೆ ಸಿಲುಕಿದ್ದೇವೆ. ಚಾಲಕರಿಗೆ ಸಂಬಳ ಕೊಡಲಾಗುತ್ತಿಲ್ಲ ಎಂಬುದು ಜಿಲ್ಲಾ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಯೂನುಸ್‌ ಖಾನ್‌ ಹೇಳಿಕೆ.

ಅಂಕಿ ಅಂಶ

ಜಿಲ್ಲೆಯ ಲಾರಿಗಳ ನೋಟ

13,000

ಜಿಲ್ಲೆಯಲ್ಲಿರುವ ಒಟ್ಟು ಲಾರಿಗಳ ಸಂಖ್ಯೆ

26,000

ಜಿಲ್ಲೆಯ ಚಾಲಕ, ಕ್ಲೀನರ್‌ಗಳ ಸಂಖ್ಯೆ


75 ಸಾವಿರ ಟನ್

ಜಿಲ್ಲೆಯಿಂದ ಲಾರಿಗಳಲ್ಲಿ ಸರಬರಾಜು ಆಗುವ ಸಿಮೆಂಟ್

500 ಟನ್‌

ದಿನವೂ ಸರಬರಾಜು ಆಗುವ ಬೇಳೆಕಾಳು

3 ಲಕ್ಷ

ಲಾರಿಗಳನ್ನೇ ನಂಬಿಕೊಂಡವರ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.