ADVERTISEMENT

ಜೆಸ್ಕಾಂ ವ್ಯಾಪ್ತಿಯಲ್ಲಿ ಹೆಚ್ಚುತ್ತಿವೆ ಜೀವಹಾನಿ: ಅವಘಡ ತಡೆಗೆ ಬೇಕಿದೆ ಜಾಗೃತಿ

ಬಸೀರ ಅಹ್ಮದ್ ನಗಾರಿ
Published 18 ಡಿಸೆಂಬರ್ 2023, 5:25 IST
Last Updated 18 ಡಿಸೆಂಬರ್ 2023, 5:25 IST
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿರುವ ಟಿ.ಸಿ ಸುತ್ತಲೂ ಸುರಕ್ಷತೆ ನಿರ್ಲಕ್ಷಿಸಿ ವ್ಯಾಪಾರದ ಸರಕು ಇಟ್ಟಿರುವುದು –ಪ್ರಜಾವಾಣಿ ಚಿತ್ರ
ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿರುವ ಟಿ.ಸಿ ಸುತ್ತಲೂ ಸುರಕ್ಷತೆ ನಿರ್ಲಕ್ಷಿಸಿ ವ್ಯಾಪಾರದ ಸರಕು ಇಟ್ಟಿರುವುದು –ಪ್ರಜಾವಾಣಿ ಚಿತ್ರ   

ಕಲಬುರಗಿ: ಒಂದೆಡೆ ತಂತಿಬೇಲಿ ಇಲ್ಲದ ಟಿ.ಸಿಗಳು, ಜೋತುಬಿದ್ದ ತಂತಿಗಳು, ಅಪಾಯ ಆಹ್ವಾನಿಸುವ ಸ್ವಿಚ್‌ ಬೋರ್ಡ್‌ಗಳು... ಮತ್ತೊಂದೆಡೆ ವಿದ್ಯುತ್‌ ಕಂಬಕ್ಕೆ ಹೊಂದಿಕೊಂಡೇ ಇರುವ ಗೂಡಂಗಡಿಗಳು, ಕಂಬಕ್ಕೆ ವೈರ್‌ ಕಟ್ಟಿ ಬಟ್ಟೆ ಒಣಹಾಕುವ, ಜಾನುವಾರು ಕಟ್ಟುವ ಜನ...

ಇದು ಜಿಲ್ಲೆಯಲ್ಲಿ ಕಂಡುಬರುವ ಚಿತ್ರಣ. ಇದರ ಫಲವಾಗಿ ಸಂಭವಿಸುವ ಅವಘಡಗಳು ಜನ–ಜಾನುವಾರುಗಳ ಜೀವ ಬಲಿಪಡೆಯಬಲ್ಲವು ಎಂಬುದು ದಿಟ. ಇತ್ತೀಚೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಬೆಂಗಳೂರಿನಲ್ಲಿ ತಾಯಿ–ಮಗು ಮೃತಪಟ್ಟಿದ್ದು ಇದಕ್ಕೊಂದು ನಿದರ್ಶನ.

ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ (ರಾಮಮಂದಿರ ವೃತ್ತದ ತನಕ) ಎರಡೂ ಬದಿಗೆ ಸುಮಾರು 22 ವಿದ್ಯುತ್‌ ಪರಿವರ್ತಕ (ಟಿ.ಸಿ)ಗಳಿವೆ. ಈ ಪೈಕಿ 6 ಟಿ.ಸಿ.ಗಳ ಸುತ್ತಲೂ ಸುರಕ್ಷಾ ತಂತಿಬೇಲಿಯೇ ಇಲ್ಲ. ಇದ್ದರೂ ಅದು ಸುರಕ್ಷತೆಯ ಖಾತ್ರಿಯಿಲ್ಲದಷ್ಟು ಶಿಥಿಲವಾಗಿದೆ. ಈಶ್ವರ ದೇವಸ್ಥಾನಕ್ಕೆ ಹೊಂದಿಕೊಂಡ ಹಾಪ್‌ಕಾಮ್ಸ್ ಮಳಿಗೆ ಮೇಲೆಯೇ ವಿದ್ಯುತ್‌ ತಂತಿಗಳು ಹಾದುಹೋಗಿವೆ. ಅದರ ಎದುರಿನ ರಾಜೀವ್ ಗಾಂಧಿ ಕಾಲೇಜ್‌ ಆಫ್‌ ಫಾರ್ಮಸಿ ಪಕ್ಕದಲ್ಲಿ ಬೆಳೆದ ಗಿಡ–ಮರ–ಬಳ್ಳಿಗಳು ವಿದ್ಯುತ್‌ ತಂತಿಗಳನ್ನು ಮುತ್ತಿಕ್ಕಿ ಅಪಾಯಕ್ಕೆ ಆಹ್ವಾನಿಸುತ್ತಿವೆ. ಇದೇ ಮುಖ್ಯರಸ್ತೆಯ ಅಕ್ಕ–‍ಪಕ್ಕದ ಬಡಾವಣೆಗಳಲ್ಲೂ ಇಂಥದ್ದೇ ಸ್ಥಿತಿಯಿದೆ. ಕೊಠಾರಿ ಭವನ ಸಮೀಪದ ಮಹಾವೀರ ನಗರ ಫೀಡರ್‌ ಟಿ.ಸಿಗೆ ಅಳವಡಿಸಿರುವ ತಂತಿಬೇಲಿ ಬರೀ ಲೆಕ್ಕಕ್ಕಷ್ಟೇ. ಚಿಕ್ಕಮಕ್ಕಳ ಕೈಗೂ ಸ್ವಿಚ್‌ ಬೋರ್ಡ್‌ ಎಟುಕುವಂತಿದೆ.

ADVERTISEMENT

ಜಿಲ್ಲೆಯಲ್ಲಿ 2023ರ ಏಪ್ರಿಲ್‌ನಿಂದ ನವೆಂಬರ್‌ ತನಕ ಇಂಥ 335 ಅಪಾಯಕಾರಿ ಸ್ಥಳಗಳನ್ನು ಜೆಸ್ಕಾಂ ಗುರುತಿಸಿದೆ. ಅವುಗಳ 298 ಸ್ಥಳಗಳಲ್ಲಿ ಸುರಕ್ಷತಾ ಕ್ರಮವಹಿಸಿದೆ. 2022ರಲ್ಲಿ379 ಹಾಗೂ 2021ರಲ್ಲಿ 472 ಅಪಾಯಕಾರಿ ಸ್ಥಳಗಳನ್ನು ಜೆಸ್ಕಾಂ ಗುರುತಿಸಿತ್ತು.

ಸರ್ವೆ ಸಾಮಾನ್ಯ!

ಚಿಂಚೋಳಿ: ತಾಲ್ಲೂಕಿನಲ್ಲಿ ವಿದ್ಯುತ್ ಅವಘಡಗಳು ರಸ್ತೆ ಅಪಘಾತದಷ್ಟೇ ಮಾಮೂಲಾಗಿವೆ. ಸೇನೆಗೆ ಆಯ್ಕೆಯಾಗಿದ್ದ ಮುಕರಂಬಾ ಗ್ರಾಮ ಯುವಕ ತಂದೆ–ತಾಯಿ ಜತೆಗೆ ಹೊಲಕ್ಕೆ ಹೋದಾಗ ವಿದ್ಯುತ್ ತಗುಲಿ ಅಸುನೀಗಿದ್ದು, ಚಿಂಚೋಳಿಯಲ್ಲಿ ದನಗಳಿಗೆ ಮೇವು ಹಾಕಲು ಹೋಗಿ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ತಾಯಿ, ಇಬ್ಬರು‌ ಮಕ್ಕಳು ಸತ್ತಿದ್ದು, ಭಿಕ್ಕು ನಾಯಕ (ಎತೆಬಾರಪೂರ) ತಾಂಡಾದಲ್ಲಿ ಆಟೊದಲ್ಲಿ ಬರುವಾಗ ರಸ್ತೆಗೆ ಅಡ್ಡಲಾಗಿ ನೇತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ವ್ಯಕ್ತಿ ಅಸುನೀಗಿದ್ದೆಲ್ಲ ಇದಕ್ಕೆ ಕೆಲ ಉದಾಹರಣೆಗಳು.

ತಾಲ್ಲೂಕಿನಲ್ಲಿ ಬಹುತೇಕ ವಿದ್ಯುತ್ ಅವಘಡ ತಂತಿ ತುಂಡಾಗಿ ಸಂಭವಿಸಿವೆ. ಹೀಗಾಗಿ ಹಳೆಯ ತಂತಿಗಳು, ಅದಕ್ಕೆ ಅಳವಡಿಸಿರುವ ಅವಧಿ ಮೀರಿದ ಇನ್ಸುಲೇಟರ್‌ ಬದಲಿಸಬೇಕು. ಜೋತು ಬಿದ್ದ ವಿದ್ಯುತ್‌ ತಂತಿಗಳನ್ನು ಆದ್ಯತೆ ಮೇಲೆ ಬಿಗಿಯಲು ಕ್ರಮವಹಿಸಬೇಕಿದೆ ಎಂಬುದು ರೈತ ಮುಖಂಡರ ಆಗ್ರಹ.

ಜೋತು ಬಿದ್ದ ವಿದ್ಯುತ್ ತಂತಿ

ಚಿತ್ತಾಪುರ: ಹೊಲದಲ್ಲಿ ದುಡಿದು ಮನೆಗೆ ಬರುತ್ತಿದ್ದ ಕರದಾಳ ಗ್ರಾಮದ ರೈತ ಬಸವರಾಜ ಹೆಗಲೇರಿ (24) ಹಾಗೂ ಆತನ ಒಂದು ಎತ್ತು ಜುಲೈನಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗೆ ಬಲಿಯಾಗಿದ್ದರು. ಹೊಲದಲ್ಲಿ ಜೋತು ಬಿದ್ದ ತಂತಿ ಬಿಗಿಯುವಂತೆ ರೈತರು ಮಾಡಿದ್ದ ಮನವಿಯನ್ನು ಜೆಸ್ಕಾಂ ನಿರ್ಲಕ್ಷಿಸಿದ್ದೇ ಪ್ರಾಣಕ್ಕೆ ಎರವಾಗಿತ್ತು. ಈಗಲೂ ಚಿತ್ತಾಪುರ ಪಟ್ಟಣದಿಂದ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ನೂರಾರು ವಿದ್ಯುತ್ ಕಂಬಗಳಿಗೆ ತಂತಿ ಜೋತು ಬಿದ್ದಿವೆ! ಸುರಕ್ಷತೆ ಈಗಲೂ ಮರೀಚಿಕೆಯಾಗಿದೆ.

ಮತ್ತೊಂದೆಡೆ, ಅನೇಕ ವಿದ್ಯುತ್ ಪರಿವರ್ತಕಗಳನ್ನು ಮುಳ್ಳಿನ ಗಿಡ–ಗಂಟಿಗಳು ಆವರಿಸಿವೆ. ಗಿಡ–ಗಂಟಿ ತೆರವು ಮಾಡಲು ಜೆಸ್ಕಾಂ ನಿರ್ಲಕ್ಷಿಸುತ್ತಿದೆ ಎಂಬ ಆರೋಪಗಳಿವೆ.‌

ಅಪಾಯಕ್ಕೆ ಆಹ್ವಾನ

ಅಫಜಲಪುರ: ಪಟ್ಟಣದ ಕೆಲವೆಡೆ ವಿದ್ಯುತ್ ತಂತಿಗಳು ಜೋತುಬಿದ್ದರೆ, ಮತ್ತೆ ಕೆಲವೆಡೆ ವಿದ್ಯುತ್‌ ಕಂಬಗಳನ್ನು ಗಿಡ–ಗಂಟಿಗಳು–ಬಳ್ಳಿಗಳು ಆವರಿಸಿದ್ದು, ಅಪಾಯ ಆಹ್ವಾನಿಸುತ್ತಿವೆ.

ಹೊಲಗದ್ದೆಗಳಲ್ಲಿ ಜೋತು ಬಿದ್ದ ವಿದ್ಯುತ್ ತಂತಿಯ ನಿರ್ವಹಣೆ ಕೊರತೆಯಿಂದ, ಪ್ರತಿ ವರ್ಷ ಕಬ್ಬಿನ ಗದ್ದೆಗಳಲ್ಲಿ ಅಗ್ನಿ ಅವಘಡ ಸಂಭವಿಸುವುದು ತಪ್ಪಿಲ್ಲ ಎಂದು ಕಬ್ಬು ಬೆಳೆಗಾರರು ಹೇಳುತ್ತಾರೆ. ‘ಜೇವರ್ಗಿ (ಬಿ) ಗ್ರಾಮದ ಟಿ.ಸಿಗೆ ತಂತಿ ಬೇಲಿಯನ್ನೂ ಹಾಕಿಲ್ಲ. ಜೆಸ್ಕಾಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂಬುದು ಗ್ರಾ.ಪಂ. ಮಾಜಿ ಅಧ್ಯಕ್ಷ ಶರಣಬಸಪ್ಪ ಬಿರಾದಾರ ಅಸಮಾಧಾನ.

‘ಗ್ರಾಮೀಣ ಭಾಗದ ವಿದ್ಯುತ್ ಕಂಬಗಳು ಹಾಗೂ ತಂತಿಯು ಹಲವು ದಶಕಗಳಷ್ಟು ಹಳೆಯವು. ಈಗ ಅವು ಶಿಥಿಲಗೊಂಡಿವೆ. ಗಾಳಿ–ಮಳೆಗೆ ತುಂಡಾಗಿ ದುರಂತಕ್ಕೆ ಕಾರಣವಾಗುತ್ತಿವೆ. ಅವುಗಳನ್ನು ಬದಲಿಸಬೇಕು’ ಎಂಬುದು ರೈತ ಮುಖಂಡರಾದ ಶ್ರೀಮಂತ ಬಿರಾದಾರ, ಲಕ್ಷ್ಮಣ ಕಟ್ಟಿಮನಿ ಮತ್ತು ಸಿದ್ದರಾಮ ಧಣ್ಣೂರ ಅವರ ಆಗ್ರಹ.

ಸಂಚಾರಕ್ಕೂ ಆತಂಕ

ಆಳಂದ: ಪಟ್ಟಣದ ಶ್ರೀರಾಮ ಮಾರುಕಟ್ಟೆಯ ಏಕಾಂತರಾಮಯ್ಯ ಮಂದಿರ, ಸುಲ್ತಾನಪುರ ಗಲ್ಲಿಯ ಮುಖ್ಯರಸ್ತೆ, ಆಯಾ ಜಂಗಲ್‌ ಬಡಾವಣೆ, ಮಟಕಿ ರಸ್ತೆ ಮತ್ತಿತರ ಸ್ಥಳಗಲ್ಲಿನ ವಿದ್ಯುತ್‌ ಪರಿವರ್ತಕಗಳು ಮುಖ್ಯರಸ್ತೆ ಮೇಲೇ ಇವೆ. ಮಕ್ಕಳ ಕೈಗೆ ಎಟುಕುವಷ್ಟು ಕೆಳಗಿವೆ. ಜಾನುವಾರುಗಳಿಗೂ ಅಪಾಯ ತಪ್ಪಿದಲ್ಲ. ಸುಲ್ತಾನಪುರಗಲ್ಲಿ, ಶರಣನಗರ, ಅನ್ಸಾರಿ ಮೊಹಲ್ಲಾದಲ್ಲಿ ವಿದ್ಯುತ್‌ ಕಂಬದ ತಂತಿಗಳು ಜೋತು ಬಿದ್ದಿವೆ. ಈಚೆಗೆ ಸುಲ್ತಾನಪುರಗಲ್ಲಿಯಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿ ಆತಂಕ ಸೃಷ್ಟಿಸಿತ್ತು.

‘ಸಂಗೋಳಗಿ ಜಿ, ಹಿತ್ತಲ ಶಿರೂರು, ಧಂಗಾಪುರ ಮತ್ತಿತರೆಡೆ ವಿದ್ಯುತ್‌ ತಂತಿ ಸ್ಪರ್ಶಿಸಿ ಸಾವು–ನೋವುಗಳಾಗಿವೆ. ಜೆಸ್ಕಾಂನಿಂದ ಪರಿಹಾರವೂ ಸಿಕ್ಕಿದೆ. ಆದರೂ, ಇಂಥ ದುರ್ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಜೆಸ್ಕಾಂ ಹಿಂದೇಟು ಹಾಕುತ್ತಲೇ ಇದೆ. ನರೇಗಾ ಯೋಜನೆಯಡಿ ವಿದ್ಯುತ್‌ ಪರಿವರ್ತಕಗಳಿಗೆ ತಡೆಗೋಡೆ ನಿರ್ಮಾಣ, ಸ್ವಚ್ಛತೆ ಕೈಗೊಂಡರೆ ಸಣ್ಣಪುಟ್ಟ ವಿದ್ಯುತ್‌ ಅವಘಡಗಳು ತಡೆಗಟ್ಟಲು ಸಾಧ್ಯವಿದೆ’ ಎನ್ನುತ್ತಾರೆ ರೈತ ಮುಖಂಡ ಕಲ್ಯಾಣಿ ತುಕ್ಕಾಣಿ.

ತಂತಿಬೇಲಿಯೂ ಇಲ್ಲ...

ಕಮಲಾಪುರ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಸ್‌ಬಿಐ, ಕೆಜಿಬಿ ಬ್ಯಾಂಕ್‌ ಎದುರಿನ ವಿದ್ಯುತ್‌ ಪರಿವರ್ತಕಕ್ಕೆ ಕನಿಷ್ಠ ತಂತಿಬೇಲಿಯೂ ಇಲ್ಲ. ಇಂಥ ಜನನಿಬಿಡ ಪ್ರದೇಶದಲ್ಲಿ ಈ ಟಿ.ಸಿ ಅಪಾಯ ಆ‌ಹ್ವಾನಿಸುವಂತಿದೆ.

ಕಮಲಾಪುರ ಬಳಿಯ ಬೆಳಕೋಟಾ ಪುನರ್ವಸತಿ ಕೇಂದ್ರದಲ್ಲಿ ಅಳವಡಿಸಿದ ಬಹುತೇಕ ಕಂಬಗಳು ಬಾಗಿವೆ.

‘ನವನಿಹಾಳ, ಬೆಳಕೋಟಾ, ಮಹಾಗಾಂವ, ಸೊಂತ ಮತ್ತಿತರ ಕಡೆಗಳಲ್ಲಿ ರಸ್ತೆಯ ಮೇಲೆ ಹಾಗೂ ರೈತರ ಜಮೀನುಗಳಲ್ಲಿ ಹಾದು ಹೋದ ಕೆಲ ವಿದ್ಯುತ್‌ ತಂತಿಗಳು ಜೋತು ಬಿದ್ದು, ಕಬ್ಬಿನ ಲೋಡ್‌ ಹೊತ್ತ ಲಾರಿಗಳಿಗೆ ತಾಕುತ್ತಿವೆ. ಪ್ರತಿ ಲೋಡ್‌ಗೂ ಲಾರಿ ಜೊತೆ ರೈತರು ಕಟ್ಟಿಗೆ ಹಿಡಿದು ಅವುಗಳನ್ನು ಮೇಲೆತ್ತುವ ಸ್ಥಿತಿಯಿದೆ’ ಎಂದು ರೈತರಾದ ವಿಜಯಕುಮಾರ ಸುಗೂರ, ಸಂತೋಷ ಕಲ್ಯಾಣ ಹೇಳುತ್ತಾರೆ.

‘ಗಮನಕ್ಕೆ ತಂದರೂ ಪ್ರಯೋಜನವಿಲ್ಲ’

ಕಾಳಗಿ: ಪಟ್ಟಣದ ಭರತನೂರ ರಸ್ತೆಯ ಅಜಿಂಕೆ ಗ್ಯಾರೇಜ್ ಎದುರಿನ ಟಿ.ಸಿಗೆ ತಂತಿಬೇಲಿಯೂ ಇಲ್ಲ. ‘ಈ ಟಿ.ಸಿ ಬೇರೆಡೆ ಸ್ಥಳಾಂತರಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ಯಾರೇಜ್ ಮಾಲೀಕ ಬಂಡು ಬೊಮ್ಮಾಣಿ.

ಸುಂಠಾಣ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಅಂಗನವಾಡಿ ಕೇಂದ್ರ ಮತ್ತು ಮನೆಗಳ ಮೇಲೆಯೇ ಹಾದು ಹೋಗಿವೆ. ಗುಂಡಿಗೆ ಗಟ್ಟಿಯಿದ್ದರಷ್ಟೇ ಚಾವಣಿ ಏರುವ ಸ್ಥಿತಿಯಿದೆ. ತಂತಿಗಳನ್ನು ಸ್ಥಳಾಂತರಿಸುವಂತೆ ಹಲವು ಬಾರಿ ಜೆಸ್ಕಾಂ ಅಧಿಕಾರಿಗಳನ್ನು ಕೋರಲಾಗಿದೆ. ಆದರೆ, ಅವರು ₹ 25 ಸಾವಿರ ಕೊಟ್ಟರೆ ಮಾತ್ರ ತಂತಿ ತೆಗೆದು ಬೇರೆಡೆ ಹಾಕುವುದಾಗಿ ಹೇಳುತ್ತಿದ್ದಾರೆ’ ಎಂಬುದು ಸ್ಥಳೀಯರ ಆರೋಪ.

ಪೂರಕ ಮಾಹಿತಿ:

ಜಗನ್ನಾಥ ಡಿ.ಶೇರಿಕಾರ, ಮಲ್ಲಿಕಾರ್ಜುನ ಮುಡಬೂಳಕರ್, ಶಿವಾನಂದ ಹಸರಗುಂಡಗಿ, ವೆಂಕಟೇಶ ಹರವಾಳ, ಸಂಜಯ ಪಾಟೀಲ, ತೀರ್ಥಕುಮಾರ ಬೆಳಕೋಟಾ, ಗುಂಡಪ್ಪ ಕರೆಮನೋರ.

ಕಲಬುರಗಿಯ ಸೂಪರ್‌ ಮಾರ್ಕೆಟ್‌ ಪ್ರದೇಶದಲ್ಲಿರುವ ಕಂಬದ ಸುತ್ತಲೂ ಸುರಕ್ಷತೆ ನಿರ್ಲಕ್ಷಿಸಿ ವ್ಯಾಪಾರದಲ್ಲಿ ತೊಡಗಿರುವುದು –‍ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ಚಿಂಚೋಳಿ ತಾಲ್ಲೂಕಿನ ಕೊರಡಂಪಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿಯೇ ವಿದ್ಯುತ್ ಪರಿವರ್ತಕ ಸುರಕ್ಷತಾ ಕ್ರಮವಿಲ್ಲದೇ ಅಪಾಯ ಆಹ್ವಾನಿಸುತ್ತಿದೆ
ಆಳಂದ ಪಟ್ಟಣದ ಮುಖ್ಯರಸ್ತೆ ಪಕ್ಕದ ವಿದ್ಯುತ್‌ ಪರಿವರ್ತಕ ದಾರಿಹೋಕರಿಗೆ ಅಪಾಯ ಆಹ್ವಾನಿಸುವಂತಿದೆ
ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಯುವರೈತ ಬಸವರಾಜ ಹೆಗಲೇರಿ ಹಾಗೂ ಅವರ ಎತ್ತು ಹೊಲದಲ್ಲಿನ ಜೋತುಬಿದ್ದ ತಂತಿಗೆ ಬಲಿಯಾದ ನೋಟ...– ಪ್ರಜಾವಾಣಿ ಸಂಗ್ರಹ ಚಿತ್ರ
ಕೋಟ್ಯಂತರ ರೂಪಾಯಿ ಖರ್ಚು
ಜೀವಹಾನಿಗೆ ಕಾರಣವಾಗಬಲ್ಲ ಅಪಾಯಕಾರಿ ಸ್ಥಳಗಳನ್ನು ಪತ್ತೆ ಮಾಡಿ ಅಲ್ಲಿ ಸುರಕ್ಷಾ ಕ್ರಮಗಳು ಕೈಗೊಳ್ಳುವ ಕೆಲಸವನ್ನು ನಿಯಮಿತವಾಗಿ ನಡೆಸಲಾಗುತ್ತಿದೆ. ನಿತ್ಯವೂ ನಿಯಂತ್ರಣ ಕೊಠಡಿಗಳಿಗೆ ಬರುವ ಕರೆಗಳು ಹಾಗೂ ಗಸ್ತು ಸಿಬ್ಬಂದಿ ಗುರುತಿಸುವ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ) ಅಧಿಕಾರಿಗಳು ಹೇಳುತ್ತಾರೆ.
332 ಜನ–ಜಾನುವಾರಿಗೆ ಹಾನಿ
‘ವಿದ್ಯುತ್‌ ಅವಘಡಗಳಿಂದ ಜೆಸ್ಕಾಂ ವ್ಯಾಪ್ತಿಯಲ್ಲಿ 2023–24ನೇ ಸಾಲಿನಲ್ಲಿ ಅಕ್ಟೋಬರ್‌ ಅಂತ್ಯದವರೆಗೆ 105 ಜನರಿಗೆ ಹಾಗೂ 227 ಜಾನುವಾರುಗಳಿಗೆ ಹಾನಿಯಾಗಿದೆ. ಈ ಪೈಕಿ ಜೆಸ್ಕಾಂ ನಿರ್ಲಕ್ಷ್ಯದಿಂದ ಮೂವರು ಅಸುನೀಗಿದ್ದು 61 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ವಯಂಕೃತ ನಿರ್ಲಕ್ಷ್ಯದಿಂದ 18 ಮಂದಿ ವಿದ್ಯುತ್‌ ಅವಘಡಗಳಿಗೆ ಬಲಿಯಾಗಿದ್ದು 23 ಮಂದಿ ಗಾಯಗೊಂಡಿದ್ದಾರೆ. ಇನ್ನುಳಿದಂತೆ 227 ಜಾನುವಾರುಗಳಿಗೆ ಹಾನಿಯಾಗಿದೆ’ ಎಂದು ಜೆಸ್ಕಾಂ ಕಾರ್ಪೊರೇಟ್‌ ಕಚೇರಿ ಮಾಹಿತಿ ನೀಡಿದೆ. ತಮ್ಮ ಕಡೆಯಿಂದಾದ ನಿರ್ಲಕ್ಷ್ಯಗಳಿಗೆ ಪ್ರಕರಣಗಳ ಗಂಭೀರತೆ ಅನುಗುಣವಾಗಿ ಪರಿಹಾರವನ್ನೂ ಜೆಸ್ಕಾಂ ನೀಡಿದೆ.
ವಿದ್ಯುತ್ ಅವಘಡ ಯಾಕೆ ತಗ್ಗುತ್ತಿಲ್ಲ?
ಅಪಾಯಕಾರಿ ಸ್ಥಳಗಳಲ್ಲಿ ಸುರಕ್ಷತಾ ಕ್ರಮಕೈಗೊಳ್ಳಲು ಜೆಸ್ಕಾಂ ಪ್ರತಿವರ್ಷ ಕೋಟ್ಯಂತರ ರೂಪಾಯಿ ವೆಚ್ಚಮಾಡುತ್ತಿದೆ. ಆದರೂ ಅವಘಡಗಳ ಪ್ರಮಾಣ ಯಾಕೆ ತಗ್ಗುತ್ತಿಲ್ಲ? ಹೀಗಾಗಿ ಜೆಸ್ಕಾಂನವರು ಮೂರನೇ ವ್ಯಕ್ತಿಯಿಂದ ಸುರಕ್ಷತಾ ಆಡಿಟ್‌ ಮಾಡಿಸಿ ಅವರು ಗುರುತಿಸುವ ಅಪಾಯಕಾರಿ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಸುರಕ್ಷತಾಕ್ರಮ ಕೈಗೊಳ್ಳಬೇಕು. ದೀಪಕ್ ಗಾಲಾ ಸಾಮಾಜಿಕ ಹೋರಾಟಗಾರ ಕಲಬುರಗಿ
ದುರಸ್ತಿಗೆ ಮೊದಲ ಆದ್ಯತೆ
ಜೇವರ್ಗಿ ಉಪ ವಿಭಾಗದ 84 ಹಳ್ಳಿಗಳ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಲ್ಲಿ ವಿದ್ಯುತ್ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಟಿ.ಸಿಗಳಿಗೆ ಮತ್ತು ಕಂಬಗಳಿಂದ ತಂತಿಗಳು ಜೋತು ಬಿದ್ದ ಬಗ್ಗೆ ಮಾಹಿತಿ ನೀಡಿದರೆ ಮೊದಲ ಆದ್ಯತೆಯಲ್ಲಿ ದುರಸ್ತಿಗೊಳಿಸಲಾಗುತ್ತಿದೆ. ರಾಜೇಂದ್ರ ಕಟ್ಟಿಮನಿ ಜೆಸ್ಕಾಂ ಎಇಇ ಜೇವರ್ಗಿ ತಾಲ್ಲೂಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.