ADVERTISEMENT

‘ಎಸ್ಟಿ ಪಟ್ಟಿಗೆ ಕೋಲಿ, ಕಬ್ಬಲಿಗ ಕೇಂದ್ರದ ಪ್ರಸ್ತಾವದಲ್ಲಿ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 6:51 IST
Last Updated 12 ಡಿಸೆಂಬರ್ 2023, 6:51 IST
ಡಾ. ಉಮೇಶ ಜಾಧವ
ಡಾ. ಉಮೇಶ ಜಾಧವ   

ಕಲಬುರಗಿ: ಗಂಗಾಮತ ಮತ್ತು ಸಮನಾರ್ಥಕ ಪದಗಳಾದ ಕೋಲಿ ಮತ್ತು ಕಬ್ಬಲಿಗ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದಲ್ಲಿದೆ ಎಂದು ಸಂಸದ ಡಾ. ಉಮೇಶ ಜಾಧವ ಅವರ ಪ್ರಶ್ನೆಗೆ ಕೇಂದ್ರ ಬುಡಕಟ್ಟು ಸಚಿವಾಲಯ ಲಿಖಿತ ಉತ್ತರ ನೀಡಿದೆ.

ಲೋಕಸಭೆಯಲ್ಲಿ ಸೋಮವಾರ ಸಂಸದ ಡಾ. ಜಾಧವ ಅವರು ಕೇಂದ್ರ ಸರ್ಕಾರಕ್ಕೆ ಕೋಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಯಾವುದಾದರೂ ಪ್ರಸ್ತಾವ ಬಂದಿದೆಯೇ ಮತ್ತು 2014ರಿಂದ ಕರ್ನಾಟಕ ರಾಜ್ಯದಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾದ ಸಮುದಾಯಗಳು ಯಾವ್ಯಾವು ಎಂದು ಬುಡಕಟ್ಟು ಸಚಿವಾಲಯಕ್ಕೆ ಪ್ರಶ್ನೆ ಕೇಳಿದರು.

ಇದಕ್ಕೆ ಉತ್ತರಿಸಿರುವ ಕೇಂದ್ರ ಬುಡಕಟ್ಟು ಸಚಿವರು, ‘ಕೋಲಿ ಮತ್ತು ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸುವ ಯಾವುದೇ ಪ್ರಸ್ತಾವ ಇಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರದಿಂದ ಗಂಗಾಮತ ಮತ್ತು ಅದರ ಸಮನಾರ್ಥಕ ಪದಗಳಾದ ಕೋಲಿ ಮತ್ತು ಕಬ್ಬಲಿಗ ಪದಗಳಿಗೆ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಪ್ರಸ್ತಾವ ನೀಡಿದೆ‘ ಎಂದು ಉತ್ತರ ನೀಡಿದ್ದಾರೆ.

ADVERTISEMENT

2014ರಿಂದ ಪರಿಶಿಷ್ಟ ಪಂಗಡಕ್ಕೆ ಸೇರಿರುವ ನಾಯಕ ಸಮನಾರ್ಥಕ ಪದಗಳಾದ ಪರಿವಾರ, ತಳವಾರ ಹಾಗೂ , ಧಾರವಾಡ, ಬೆಳಗಾವಿ ಜಿಲ್ಲೆಯಲ್ಲಿರುವ ಸಿದ್ದಿ ಜನಾಂಗದವರನ್ನು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವ ಸಿದ್ದಿ ಜನಾಂಗದೊಂದಿಗೆ ಸೇರ್ಪಡಿಸಲಾಗಿದೆ. ಹಾಗೆಯೇ ಬೆಟ್ಟ ಕುರುಬ ಸಮನಾರ್ಥಕ ಪದವಾಗಿ ಕಾಡು ಕುರುಬ ಪದವನ್ನು ಸೇರಿಸಲಾಗಿದೆ ಎಂದು ಉತ್ತರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.