ADVERTISEMENT

ಧರ್ಮ ರಕ್ಷಣೆಗಾಗಿ ದೇವಾಲಯಗಳೇ ಅಡ್ಡೆಯಾಗಲಿ: ಮಾಧವಿ ಲತಾ ಪ್ರತಿಪಾದನೆ

ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಬಿಜೆಪಿ ನಾಯಕಿ ಹೈದರಾಬಾದ್‌ನ ಮಾಧವಿ ಲತಾ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:55 IST
Last Updated 24 ಸೆಪ್ಟೆಂಬರ್ 2024, 16:55 IST
   

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಹಿಂದುತ್ವ, ಸನಾತನ ಧರ್ಮದ ಬಗ್ಗೆ ಯೋಚಿಸುವವರು ಕಡಿಮೆಯಾಗುತ್ತಿದ್ದು, ನಮ್ಮ ಆಚಾರ ವಿಚಾರಗಳು ನಶಿಸಿ ಹೋಗುತ್ತಿವೆ. ಇವುಗಳನ್ನು ಪುನರುತ್ಥಾನಗೊಳಿಸಲು ಎಲ್ಲ ಹಿಂದೂಗಳು ದೇವಾಲಯಗಳನ್ನೇ ಅಡ್ಡೆಯಾಗಿ ಮಾಡಿಕೊಳ್ಳಬೇಕು. ಆ ಮೂಲಕ ದೇವಾಲಯಗಳ ರಕ್ಷಣೆ ಮಾಡಬೇಕು ಎಂದು ಹೈದರಾಬಾದ್‌ನ ಹಿಂದುತ್ವ ಚಿಂತಕಿ, ಬಿಜೆಪಿ ನಾಯಕಿ ಮಾಧವಿ ಲತಾ ಕರೆ ನೀಡಿದರು.

ನಗರದ ಬಹಮನಿ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಪ್ರತಿ ದಿನವೂ ತಪ್ಪದೇ ದೇವಸ್ಥಾನಕ್ಕೆ ಒಂದು ರೂಪಾಯಿಯಾದರೂ ದೇಣಿಗೆ ನೀಡಬೇಕು. ಶಾಲೆಗೆ ಹೋಗುವ ಬಡ ಮಕ್ಕಳಿಗೆ ಆಸಕ್ತರು ದೇವಾಲಯಗಳಲ್ಲಿ ಟ್ಯೂಷನ್ ಹೇಳಬೇಕು. ಹೆಣ್ಣು, ಗಂಡು ನೋಡುವವರು ತಮ್ಮ ಮನೆಗಳ ಬದಲು ಈ ಕಾರ್ಯವನ್ನು ದೇವಾಲಯಗಳಲ್ಲೇ ನೆರವೇರಿಸಬೇಕು. ಒಟ್ಟಾರೆಯಾಗಿ ಎಲ್ಲ ಪವಿತ್ರ ಕೆಲಸವೂ ದೇವಾಲಯಗಳಲ್ಲೇ ಆಗಬೇಕು’ ಎಂದು ಹೇಳಿದರು.

‘ಗಣಪತಿ ಸ್ಮರಣೆಯ ಕಾರ್ಯಕ್ರಮಕ್ಕೆ ಬಂದು ವೋಟು, ರಾಜಕೀಯದ ಬಗ್ಗೆ ಏಕೆ ಮಾತನಾಡುತ್ತಿದ್ದೇನೆ ಎಂದು ನೀವು ಪ್ರಶ್ನಿಸಬಹುದು. ಒಂದು ವೋಟು ನಮ್ಮ ಹೆಣ್ಣುಮಕ್ಕಳ ಮಾನ ರಕ್ಷಣೆ ಮಾಡುತ್ತದೆ. ಒಂದು ವೋಟು ನಮ್ಮ ಮಕ್ಕಳಿಗೆ ಉದ್ಯೋಗ ದೊರಕಿಸಿಕೊಡುತ್ತದೆ. ನಮ್ಮ ಧರ್ಮ ರಕ್ಷಣೆ ಮಾಡುತ್ತದೆ. ಹಾಗಾಗಿ, ಮುಂದಿನ ಬಾರಿ ಮತ ಚಲಾಯಿಸುವಾಗ ಈ ಅಂಶಗಳನ್ನು ಗಮನಿಸಬೇಕು. ಮುಂದಿನ ಚುನಾವಣೆಯಲ್ಲಿ ನಾನೇ ಬಂದು ಪ್ರಚಾರ ನಡೆಸುತ್ತೇನೆ’ ಎಂದು ಮಾಧವಿ ಲತಾ ಪ್ರಕಟಿಸಿದರು.

ADVERTISEMENT

‘ನಾವೆಲ್ಲರೂ ಭಾರತ ಮಾತೆಗೆ ಜೈಕಾರ ಹಾಕುತ್ತೇವೆ. ಆದರೆ, ಆಕೆಯ ಕಣ್ಣೀರು ನೋಡುತ್ತಿಲ್ಲ. ಅವಳ ನೋವು ಕೇಳಿಸಿಕೊಳ್ಳುತಿಲ್ಲ.‌ ಶಿವರಾತ್ರಿ ಮುಗಿದ ಮೇಲೆ ಶಿವನನ್ನು ಮರೆಯುತ್ತೇವೆ. ಹೀಗೆ ಮಾಡುವುದರಿಂದ ದೇವರಿಗೂ ಅವಶ್ಯಕತೆ ಇದ್ದಾಗ ಮಾತ್ರ ತನ್ನನ್ನು ನೆನಪು ಮಾಡಿಕೊಳ್ಳುತ್ತಾರೆ ಎಂದುಕೊಳ್ಳುತ್ತಾನೆ. ಹಾಗಾಗಿ, ನಮ್ಮ ಧರ್ಮ, ನಮ್ಮ ಪರಿವಾರ, ನಮ್ಮ ಗುರುತಿನ ಸಲುವಾಗಿ ಹಿಂದುತ್ವವನ್ನು ಉಳಿಸೋಣ’ ಎಂದರು .

ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ನಾಗೇಂದ್ರ ಕಾಬಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ಕಡಗಂಚಿ ಮಠದ ವೀರಭದ್ರ ಶಿವಾಚಾರ್ಯರು, ಮಾಶಾಳದ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿದರು.

ಶಾಸಕ ಬಸವರಾಜ ಮತ್ತಿಮಡು, ಸಮಿತಿಯ ಗೌರವಾಧ್ಯಕ್ಷ ಸುರೇಶ್ ಟೆಂಗಳಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಚಂದು ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ, ಬಿಜೆಪಿ ವೈದ್ಯರ ಪ್ರಕೋಷ್ಠದ ರಾಜ್ಯ ಉಪಾಧ್ಯಕ್ಷೆ ಡಾ.ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಗಂಗಾ, ಸುರೇಶ ಹೆರೂರ್, ಸುಮಂಗಲಾ ಚಕ್ರವರ್ತಿ ಇತರರು ಭಾಗವಹಿಸಿದ್ದರು.

ಕೋಟೆಯತ್ತ ಮಾಧವಿ ಲತಾ ಬಾಣ!

ಕಳೆದ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಹೈದರಾಬಾದ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಧವಿ ಲತಾ ಅವರು ಪ್ರಾರ್ಥನಾ ಮಂದಿರವೊಂದರ ಎದುರು ನಿಂತುಕೊಂಡು ಬಾಣ ಬಿಟ್ಟಂತೆ ನಟಿಸಿದ್ದರು. ಸಂಘಟಕರೊಬ್ಬರ ಕೋರಿಕೆ ಮೇರೆಗೆ ಇಲ್ಲಿಯೂ ಪುನರಾವರ್ತಿಸಿದ ಮಾಧವಿ ಲತಾ, ತಮ್ಮ ಎರಡೂ ಕೈಗಳನ್ನೇ ಬಿಲ್ಲು ಕಾಣದಂತೆ ಮಾಡಿ ಹೆದೆಯೇರಿಸಿ ಕೋಟೆಯತ್ತ ಗುರಿಯಿಟ್ಟ ಬಾಣ ಬಿಟ್ಟಂತೆ ಮಾಡಿದರು. ಈ ದೃಶ್ಯ ಕಂಡ ಸಭಿಕರು ಜಯಘೋಷ ಮೊಳಗಿಸಿದರು.

ನಂತರ ವೇದಿಕೆಯ ಎಡಭಾಗದಲ್ಲಿದ್ದ ಭಾರತಮಾತೆಯ ಭಾವಚಿತ್ರದ ಎದುರು ಶಿರಸಾಷ್ಟಾಂಗ ನಮಸ್ಕಾರ ಮಾಡಿ ತಮ್ಮ ಭಾಷಣ ಮುಗಿಸಿದರು.

ಕೆಲ ಹೊತ್ತು ಕನ್ನಡದಲ್ಲಿಯೇ ಮಾತನಾಡಿದ ಮಾಧವಿ ಲತಾ, ಕೃಷ್ಣ ನೀ ಬೇಗನೇ ಬಾರೊ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.