ADVERTISEMENT

ಜೇವರ್ಗಿ: ವೈಭವದ ಮಹಾಲಕ್ಷ್ಮಿ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:31 IST
Last Updated 26 ಅಕ್ಟೋಬರ್ 2024, 15:31 IST
ಜೇವರ್ಗಿಯಲ್ಲಿ ಶನಿವಾರ ಜರುಗಿದ ಶ್ರೀ ಮಹಾಲಕ್ಷ್ಮೀ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ
ಜೇವರ್ಗಿಯಲ್ಲಿ ಶನಿವಾರ ಜರುಗಿದ ಶ್ರೀ ಮಹಾಲಕ್ಷ್ಮೀ ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತ ಸಮೂಹ   

ಜೇವರ್ಗಿ: ಪಟ್ಟಣದ ಆರಾಧ್ಯ ದೇವತೆ ಮಹಾಲಕ್ಷ್ಮಿ ರಥೋತ್ಸವ ಶನಿವಾರ ಭಕ್ತ ಸಾಗರದ ಮಧ್ಯೆ ಅದ್ದೂರಿಯಾಗಿ ಜರುಗಿತು.

ಜಾತ್ರೆ ನಿಮಿತ್ತ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆಯಿತು.

ಬೆಳಿಗ್ಗೆ 11 ಗಂಟೆಗೆ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ರಥೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ದೇವಸ್ಥಾನದಿಂದ ಆರಂಭವಾದ ರಥೋತ್ಸವ ಬುಟ್ನಾಳ ರಸ್ತೆಯ ಸಜ್ಜನ ಕಲ್ಯಾಣ ಮಂಟಪದವರೆಗೆ ಸಾಗಿತು. ತಾಲ್ಲೂಕು ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಲಕ್ಷಾಂತರ ಜನ ಭಕ್ತರು ಬಾಳೆ ಹಣ್ಣು, ಬದಾಮಿ, ಉತ್ತತ್ತಿ ಎಸೆದು ಹರಕೆ ತೀರಿಸಿದರು. ನಂತರ ಭಕ್ತರು ದೇವಿಯ ಮೂರ್ತಿಯನ್ನು ರಥದ ಸಮೇತ ಹೆಗಲ ಮೇಲೆ ಹೊತ್ತುಕೊಂಡು ಸುಮಾರು ಮೂರು ಕಿ.ಮೀ. ಅಂತರದಲ್ಲಿರುವ ಏಳು ಊರಿನ ಸೀಮೆಯ ಮಧ್ಯದಲ್ಲಿ ಹಿರೇಗೌಡರ ಹೊಲದಲ್ಲಿನ ಆಯಿ ತಳದಲ್ಲಿ ಪ್ರತಿಷ್ಠಾಪಿಸಿದರು.

ADVERTISEMENT

ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಮುತೈದೆಯರು ದೇವಿಗೆ ಉಡಿ ತುಂಬಿದರು. ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಾತ್ರೆಯಲ್ಲಿ ಭಂಡಾರ ಸಿಡಿಸಿ ಭಕ್ತರು ಪಾವನಗೊಂಡರು. ಜಾತ್ರಾ ಸಮಿತಿ ವತಿಯಿಂದ ಬಂದ ಭಕ್ತರಿಗೆ ಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ದೇವಸ್ಥಾನದ ಟ್ರಸ್ಟ್ ಕಮೀಟಿ ಅಧ್ಯಕ್ಷ ಷಣ್ಮುಖಪ್ಪ ಸಾಹು ಗೋಗಿ, ಕಾರ್ಯದರ್ಶಿ ರಮೇಶಬಾಬು ವಕೀಲ್ ಸೇರಿದಂತೆ ಟ್ರಸ್ಟ್ ಕಮಿಟಿಯ ಪದಾಧಿಕಾರಿಗಳು ಇದ್ದರು.

ರಥೋತ್ಸವದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿವೈಎಸ್‌ಪಿ ಬಿಂದುರಾಣಿ, ಸಿಪಿಐ ರಾಜೆಸಾಬ ನದಾಫ್, ಪಿಎಸ್‌ಐ ಗಜಾನನ ಬಿರಾದಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.