ADVERTISEMENT

ಮಹಾರಾಷ್ಟ್ರ ಚುನಾವಣೆ: ಆಳಂದ, ಅಫಜಲಪುರ ತಾಲೂಕಿನ ಗಡಿ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌

ವರ್ಚುವಲ್ ಮೂಲಕ ನಡೆದ ಅಂತರರಾಜ್ಯ ಸಹಕಾರ ಸಭೆ: ಸೋಲಾಪುರ, ಧಾರಾಶಿವ ಜಿಲ್ಲೆಯ ಜಿಲ್ಲಾಧಿಕಾರಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:23 IST
Last Updated 23 ಅಕ್ಟೋಬರ್ 2024, 15:23 IST
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚುವಲ್ ಮೂಲಕ ಅಂತರ ರಾಜ್ಯ ಸಹಕಾರ ಸಭೆ ನಡೆಯಿತು
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚುವಲ್ ಮೂಲಕ ಅಂತರ ರಾಜ್ಯ ಸಹಕಾರ ಸಭೆ ನಡೆಯಿತು   

ಕಲಬುರಗಿ: ‘ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಘೋಷಣೆಯಾದ ಕಾರಣ ಆಳಂದ ಹಾಗೂ ಅಫಜಲಪುರ ತಾಲ್ಲೂಕುಗಳ ಗಡಿ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಿ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.‌

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ವರ್ಚುವಲ್ ಮೂಲಕ ನಡೆದ ಅಂತರರಾಜ್ಯ ಸಹಕಾರ ಸಭೆಯಲ್ಲಿ ಮಾತನಾಡಿದರು.

ಆಳಂದ ತಾಲ್ಲೂಕಿನ 17 ಮತ್ತು ಅಫಜಲಪುರ ತಾಲ್ಲೂಕಿನ 5 ಗ್ರಾಮಗಳು ಮಹಾರಾಷ್ಟ್ರದ ಸೋಲಾಪುರ ಹಾಗೂ ಧಾರಾಶಿವ ಜಿಲ್ಲೆಯ ಗಡಿ ಭಾಗದಲ್ಲಿವೆ. ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಅಫಜಲಪುರ ತಾಲ್ಲೂಕಿನ ಬಳ್ಳೂರ್ಗಿ, ಮಾಶಾಳ, ಮಣ್ಣೂರ, ಅರ್ಜುಣಗಿ ಹಾಗೂ ಆಳಂದ ತಾಲ್ಲೂಕಿನ ಖಜೂರಿ, ಹಿರೊಳ್ಳಿ, ನಿಂಬಾಳ, ಮಾದನಹಿಪ್ಪರಗಾ ಗ್ರಾಮಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.

ADVERTISEMENT

ಸೋಲಾಪುರ ಜಿಲ್ಲಾಧಿಕಾರಿ ಕುಮಾರ ಆಶೀರ್ವಾದ ಮತ್ತು ಧಾರಾಶಿವ ಜಿಲ್ಲಾಧಿಕಾರಿ ಸಚಿನ್ ಓಂಬರೆ ಅವರು ಮಾತನಾಡಿ, ‘ವಿಧಾನಸಭಾ ಚುನಾವಣೆ ನಡೆಯುತ್ತಿರುವ ಕಾರಣ ಗಡಿ ಭಾಗದಲ್ಲಿ ಪರಿಶೀಲನೆ ತೀವ್ರಗೊಳಿಸಬೇಕು. ಅಕ್ರಮ ಮದ್ಯ, ಹಣ, ವಸ್ತು ಸಾಗಣೆ ಕುರಿತು ನಿಗಾ ವಹಿಸಬೇಕು’ ಎಂದು ಮನವಿ ಮಾಡಿದರು.

ಸೋಲಾಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅತುಲ್ ಕುಲಕರ್ಣಿ, ಧಾರಾಶಿವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಜಾಧವ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿ.ಇ.ಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಎಂ.ಆಲದಕಟ್ಟಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರಾದ ಯಾಸ್ಮಿನ್ ಬೇಗಂ ವಾಲಿಕಾರ್, ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣರಾವ್, ಅಬಕಾರಿ ಇಲಾಖೆಯ ಉಪ ಆಯುಕ್ತ ಸಂಗನಗೌಡ ಪಿ.ಹೊಸಳ್ಳಿ, ಆಳಂದ ತಹಶೀಲ್ದಾರ್ ಅಣ್ಣಾರಾವ ಪಾಟೀಲ, ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ, ಚುನಾವಣಾ ತಹಶೀಲ್ದಾರ್ ಪೊಂಪಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.