ADVERTISEMENT

ಮತಗಟ್ಟೆ ಸಮೀಕ್ಷೆಯಂತೆ ಫಲಿತಾಂಶ ಬಂದರೆ ಇವಿಎಂ ಮೇಲೆ ಸಂಶಯ: ಖರ್ಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 11:21 IST
Last Updated 21 ಮೇ 2019, 11:21 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಹಲವು ಸಂಸ್ಥೆಗಳು ತಮ್ಮ ತಮ್ಮ ಮಾಹಿತಿ, ಮೂಲಗಳನ್ನು ಆಧರಿಸಿ ಮತಗಟ್ಟೆ ಸಮೀಕ್ಷೆಯನ್ನು ಪ್ರಕಟಿಸಿವೆ. ಆದರೆ, ನಮಗೆ ಮತಗಟ್ಟೆ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಒಂದು ವೇಳೆ ಸಮೀಕ್ಷೆಯಂತೆಯೇ ಫಲಿತಾಂಶ ಬಂದರೆ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಮೇಲೆ ಸಂಶಯ ವ್ಯಕ್ತಪಡಸಬೇಕಾಗುತ್ತದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಕಾರ್ಯಕರ್ತರು, ಮುಖಂಡರು, ತಳಮಟ್ಟದಲ್ಲಿ ಕೆಲಸ ಮಾಡಿರುವವರು ಬೇರೆಯದ್ದೇ ಮಾಹಿತಿ ಕೊಟ್ಟಿದ್ದಾರೆ. ಸಮೀಕ್ಷೆಗಳು ಹೇಳಿರುವಂತೆ ರಾಜ್ಯದಲ್ಲಿ ಅಷ್ಟು ಕಡಿಮೆ ಸ್ಥಾನ ನಮಗೆ ಯಾವತ್ತೂ ನಮಗೆ ಸಿಕ್ಕಿಲ್ಲ. ಎಕ್ಸಿಟ್ ಪೋಲ್ ಎಕ್ಸಾಗ್ರೇಟೆಡ್ ಆಗಿದೆ. ಕಲಬುರ್ಗಿ ಸೇರಿ ಎಲ್ಲಾ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ಘೋಷಣೆಯಾದ ದಿನದಿಂದ ದೇಶದಲ್ಲಿ ಕಾಂಗ್ರೆಸ್‌ 40 ಸೀಟುಗಳನ್ನು ದಾಟುವುದಿಲ್ಲ ಎಂದು ಹೇಳಿಕೊಂಡೇ ಬಂದಿದ್ದಾರೆ. ಯಾವ ಆಧಾರದ ಮೇಲೆ ಅವರು ಈ ರೀತಿ ಹೇಳುತ್ತಿದ್ದಾರೆ. ಏನು ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸೋಲು–ಗೆಲುವು ಬೇರೆ ವಿಚಾರ. ಆದರೆ, ಈ ರೀತಿಯ ಹೇಳಿಕೆಯಲ್ಲಿ ಏನೋ ಗೋಲ್‌ಮಾಲ್‌ ಇದೆ’ ಎಂದು ಆರೋಪಿಸಿದರು.

ADVERTISEMENT

‘ಮೋದಿ ಪ್ರಚಾರ ರ್‍ಯಾಲಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಏಳು ಹಂತದಲ್ಲಿ ಮತದಾನ ನಡೆಸಲಾಗಿದೆ. ಇಷ್ಟು ಸುಧೀರ್ಘವಾಗಿ ಚುನಾವಣೆ ನಡೆಸುವ ಅವಶ್ಯಕತೆ ಇರಲಿಲ್ಲ. ಹಿಂದೆ ನಾವೆಲ್ಲ ಒಂದು–ಎರಡು ದಿನದಲ್ಲಿ ಚುನಾವಣೆ ಮುಗಿಸಿದ ನಿದರ್ಶನಗಳು ಇವೆ. ಹೀಗಿರುವಾಗ ಎರಡೂವರೆ ತಿಂಗಳು ಸಮಯ ತೆಗೆದುಕೊಂಡಿರುವುದು ಸರಿಯಲ್ಲ’ ಎಂದು ದೂರಿದರು.

‘ಇತ್ತ ಕೊನೆಯ ಹಂತದ ಮತದಾನ ನಡೆಯುತ್ತಿರುವಾಗಲೇ ಮೋದಿ ಅವರು ಬದರಿನಾಥ್ ದೇವಸ್ಥಾನಕ್ಕೆ ತೆರಳಿದ್ದಾರೆ. ಕೈಯಲ್ಲಿ ಕೋಲು ಹಿಡಿದುಕೊಂಡು, ಶಾಲು ಹೊದ್ದುಕೊಂಡು ನಾಟಕ ಮಾಡಿದ್ದಾರೆ. ಛಾಯಾಗ್ರಾಹಕರಿಗೆ ತಾವೇ ನಿರ್ದೇಶನ ಮಾಡಿದ್ದಾರೆ. ಅದು ಹೃದಯದಿಂದ ಬಂದ ಅಧ್ಯಾತ್ಮ ಭಾವನೆ ಅಲ್ಲ’ ಎಂದು ಟೀಕಿಸಿದರು.

‘ಮೋದಿ ಮತ್ತು ಅಮಿತ್ ಶಾ ಅವರು ಅನೇಕ ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಆದರೆ, ಅವರ ಮೇಲೆ ಕ್ರಮ ಜರುಗಿಸಿಲ್ಲ. ಚುನಾವಣಾ ಆಯೋಗದವರು ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎಂಬಂತೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಆಯೋಗದಲ್ಲಿರುವವರೇ ಆರೋಪ ಮಾಡಿದ್ದಾರೆ. ಅಷ್ಟಾದರೂ ಏನೂ ಕ್ರಮವಾಗಿಲ್ಲ’ ಎಂದು ತಿಳಿಸಿದರು.

‘ಕಲಬುರ್ಗಿಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಸಮೀಕ್ಷಾ ಸಂಸ್ಥೆಯೊಂದು ಹೇಳಿದೆಯಲ್ಲ’ ಎಂಬ ಪ್ರಶ್ನೆಗೆ, ‘ಎಲ್ಲೆಲ್ಲಿ ಏನೇನಾಗಿದೆಯೋ ಗೊತ್ತಿಲ್ಲ. ನಾನು ಮಾಡಿದ ಕೆಲಸವನ್ನು ಹೇಳಿಕೊಂಡು ಚುನಾವಣೆ ಎದುರಿಸಿದ್ದೇನೆ. ಕೆಲಸ ಮಾಡಿದವರನ್ನು ಸೋಲಿಸುತ್ತಾರೆ ಅಂದರೆ ಹೇಗೆ. ಸೋಲಲು ಕಾರಣ ಬೇಕಲ್ಲ. ಕಾರಣ ಇಲ್ಲದೆ ಸೋಲಿಸುತ್ತಾರೆ ಅಂದರೆ ಏನರ್ಥ. ನಮ್ಮೆಲ್ಲರ ಜೀವ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇನ್ನೊಂದು ದಿನ ಕಾದರೆ ಫಲಿತಾಂಶ ಗೊತ್ತಾಗಲಿದೆ’ ಎಂದರು.

ರೋಷನ್ ಬೇಗ್ ಆಪಾದನೆ ಸರಿಯಲ್ಲ
ಕಲಬುರ್ಗಿ:
ಕಾಂಗ್ರೆಸ್ ನಾಯಕರ ಬಗ್ಗೆ ರೋಷನ್ ಬೇಗ್ ಮಾಡಿರುವ ಆಪಾದನೆ ಸರಿಯಲ್ಲ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಈ ರೀತಿ ಮಾಡುತ್ತಿರುವುದರಿಂದಲೇ ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚುತ್ತಿದೆ. ಹೀಗೆಯೇ ಮುಂದುವರಿದರೆ ದೇಶದಲ್ಲಿ ಕಾಂಗ್ರೆಸ್‌ಗೆ ಉಳಿಗಾಲ ಇಲ್ಲದಂತಾಗುತ್ತದೆ. ಪಕ್ಷಕ್ಕೆ ಒಂದು ಸಲ ಹಾನಿಯಾದರೆ, ಅದನ್ನು ಸರಿಪಡಿಸಲು ಅನೇಕ ದಿನಗಳು ಬೇಕಾಗುತ್ತವೆ ಎಂದು ಬೇಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅವರಿಗೆ ಏನಾದರೂ ಸಮಸ್ಯೆಗಳು ಇದ್ದಿದ್ದರೆ ಹೈಕಮಾಂಡ್ ಗಮನಕ್ಕೆ ತರಬಹುದಿತ್ತು. ಮಾಧ್ಯಮಗಳ ಮುಂದೆ ಹೋಗುವ ಮುನ್ನ ಕೊಂಚ ಯೋಚಿಸಬೇಕಿತ್ತು. ಆದರೆ, ನೇರವಾಗಿ ಆಪಾದನೆ ಮಾಡುವುದು ಸಮಂಜಸವಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.