ADVERTISEMENT

Kuwait Fire Accident: ಕುವೈತ್ ಅಗ್ನಿ ಅವಘಡದಲ್ಲಿ ಕಲಬುರಗಿಯ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 18:00 IST
Last Updated 13 ಜೂನ್ 2024, 18:00 IST
   

ಕಲಬುರಗಿ: ಕುವೈತ್‌ನ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಜಿಲ್ಲೆಯ ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ್ ಪ್ರಸನ್ನ (40) ಮೃತಪಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ವಿಜಯಕುಮಾರ್ ಅವರು ಕುವೈತ್‌ನಲ್ಲಿಯೇ ನೆಲೆಸಿದ್ದರು. ಅಲ್ಲಿ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು.

ಅವರಿಗೆ ಪತ್ನಿ, ಪುತ್ರಿ, ಇಬ್ಬರು ‍ಪುತ್ರರಿದ್ದಾರೆ.

ADVERTISEMENT

ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಎರಡನೇ ಮಹಡಿಯಲ್ಲಿ ವಿಜಯಕುಮಾರ್ ಮಲಗಿದ್ದರು. ಹೀಗಾಗಿ, ಬೆಂಕಿಯ ಕೆನ್ನಾಲಿಗೆ ಚಾಚಿದ್ದರಿಂದ ಸಾವಿಗೀಡಾದರು. ಮೊದಲ ಮಹಡಿಯಲ್ಲಿದ್ದ ಆಳಂದ ತಾಲ್ಲೂಕಿನ ಜಿಡಗಾ ಗ್ರಾಮದ ಇಬ್ಬರು ಅಲ್ಲಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರೇ ಗ್ರಾಮಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ವಿಜಯಕುಮಾರ್ ಪಾರ್ಥಿವ ಶರೀರ ಶುಕ್ರವಾರ ಕೇರಳದ ಕೊಚ್ಚಿಗೆ ಬರಲಿದ್ದು, ಅಲ್ಲಿಂದ ಶವವನ್ನು ಜಿಲ್ಲೆಗೆ ತರಲು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೊಚ್ಚಿಯಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಹಾಗೂ ಅಲ್ಲಿಂದ ಆಂಬುಲೆನ್ಸ್ ಮೂಲಕ ಆಳಂದದ ಸರಸಂಬಾಕ್ಕೆ ತರಲಾಗುವುದು. ಇದಕ್ಕಾಗಿ ಆಳಂದ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸಿಪಿಐ ಕೊಚ್ಚಿಗೆ ತೆರಳಲಿದ್ದಾರೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.