ಆಳಂದ: ತವರು ಮನೆಯಿಂದ ವರದಕ್ಷಿಣೆ ತರಲು ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಧರ್ಮವಾಡಿಯಲ್ಲಿ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಪ್ರೀತಿ ಪ್ರವೀಣ ಚೋಪಲೆ (25) ಕೊಲೆಯಾದ ಮಹಿಳೆ. ಗಂಡ ಪ್ರವೀಣ ಕೊಲೆಗೈದ ಆರೋಪಿ. ಪ್ರೀತಿ ಕಮಲಾಪುರ ತಾಲ್ಲೂಕಿನ ಕಿಣ್ಣಿಸರಪೋಸ ಗ್ರಾಮದ ಹಣಮಂತರಾವ ಹಕ್ಕೆ ಎಂಬುವವರ ಮಗಳು. 7 ವರ್ಷದ ಹಿಂದೆ ಧರ್ಮವಾಡಿಯ ಪ್ರವೀಣ ಚೋಪಲೆ ಜತೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಒಂದು ವರ್ಷದ ಗಂಡು ಮಗುವಿದ್ದು, ಮದುವೆ ಸಂದರ್ಭದಲ್ಲಿ 4 ತೊಲೆ ಬಂಗಾರ, ₹ 51 ಸಾವಿರ ವರದಕ್ಷಿಣೆ ನೀಡಲಾಗಿತ್ತು. ಇಷ್ಟಾದರೂ ತವರು ಮನೆಯಿಂದ ಇನ್ನೂ ₹ 50 ಸಾವಿರ ತರುವಂತೆ ಕಿರುಕುಳ ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದ್ದಾರೆ.
ಗಂಡನ ಮನೆಯವರ ವರದಕ್ಷಣೆ ಕಿರುಕುಳ ತಾಳಲಾರದೇ ಕೆಲವು ದಿನಗಳವರೆಗೆ ಪ್ರೀತಿ ತವರು ಮನೆಯಲ್ಲಿಯೇ ಇದ್ದಳು. ಏ 19ರಂದು ಪ್ರವೀಣ ಬಂದು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದ. ಬೆಳಿಗ್ಗೆ ಮನೆಯಲ್ಲಿಯೇ ನೇಣು ಬಿಗಿದು ಕೊಲೆ ಮಾಡಲಾಗಿದೆ. ಅಲ್ಲದೆ ಪತಿ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದ್ದಾರೆ.
ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಪಿಎಸ್‍ಐ ಉದ್ದಂಡಪ್ಪ ಮಣ್ಣೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಹಿಳೆಯ ತಂದೆ ಹಣಮಂತರಾವ ಅವರು ಅತ್ತೆ ಹೌಸಾಬಾಯಿ, ಮಾವ ಬಾಬುರಾವ, ನಾದಿನಿ ರೂಪಾ, ಗಂಡ ಪ್ರವೀಣ, ಭಾವ ರಾಮ ವಿರುದ್ಧ ನರೋಣಾ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.