ADVERTISEMENT

ಕಲಬುರಗಿ | ಮನುಸ್ಮೃತಿ ದಹನ ದಿನ: ದಸಂಸದಿಂದ ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2023, 15:29 IST
Last Updated 25 ಡಿಸೆಂಬರ್ 2023, 15:29 IST
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದಿಂದ ಕಲಬುರಗಿಯ ಜಗತ್‌ ವೃತ್ತದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಸೋಮವಾರ ಮನುಸ್ಮೃತಿ ಪ್ರತಿಕೃತಿ ದಹಿಸಲಾಯಿತು
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದಿಂದ ಕಲಬುರಗಿಯ ಜಗತ್‌ ವೃತ್ತದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಸೋಮವಾರ ಮನುಸ್ಮೃತಿ ಪ್ರತಿಕೃತಿ ದಹಿಸಲಾಯಿತು   

ಕಲಬುರಗಿ: ಡಾ. ಬಿ.ಆರ್‌.ಅಂಬೇಡ್ಕರ್ ಅವರು 1927ರ ಡಿ.25ರಂದು ಮನುಸ್ಮೃತಿ ದಹಿಸಿದ ಘಟನೆಯ ಸ್ಮರಣಾರ್ಥ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ಜಿಲ್ಲಾ ಘಟಕದಿಂದ ನಗರದ ಜಗತ್‌ ವೃತ್ತದಲ್ಲಿರುವ ಡಾ. ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಸೋಮವಾರ ಮನುಸ್ಮೃತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದಕ್ಕೂ ಮುನ್ನ ಸಂಘಟನೆಯ ಮುಖಂಡರು, ಸದಸ್ಯರು ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಜಮಾಯಿಸಿದರು. ಅಲ್ಲಿಂದ ಜಗತ್‌ ವೃತ್ತದ ತನಕ ಮನುಸ್ಮೃತಿ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿದರು. ಈ ವೇಳೆ, ‘ರಾಮನಾಮ ಝೂಟ್‌ ಹೈ, ಭೀಮನಾಮ ಸತ್ಯ ಹೈ’, ‘ಮನುಸ್ಮೃತಿ ಝೂಟ್‌ ಹೈ, ಸಂವಿಧಾನ ಸತ್ಯ ಹೈ’ ಎಂದು ಘೋಷಣೆ ಮೊಳಗಿಸಿದರು.

ಜಗತ್‌ ವೃತ್ತದಲ್ಲಿ ಮನುಸ್ಮೃತಿ ಪ್ರತಿಕೃತಿಯನ್ನು ಇಟ್ಟು ಪೆಟ್ರೋಲ್‌ ಸುರಿದು ಬೆಂಕಿ ಹೊತ್ತಿಸಿದರು. ಅಣಕು ಶವಯಾತ್ರೆಗೆ ಮಹಿಳೆಯರು ಹೆಗಲುಕೊಟ್ಟಿದ್ದು, ಮಹಿಳೆಯೇ ಅಗ್ನಿ ಸ್ಪರ್ಶ ಮಾಡಿದ್ದು ವಿಶೇಷವಾಗಿತ್ತು.

ADVERTISEMENT

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ, ‘ದೇಶದ ಜನರಿಗೆ ಅಸ್ಪೃಶ್ಯರೆಂಬ ಹಣೆಪಟ್ಟಿ ಕಟ್ಟಿ ಸಾವಿರಾರು ವರ್ಷಗಳಿಂದ ಪಶು–ಪಕ್ಷಿಗಳಿಗಿಂತಲೂ ಕೀಳಾಗಿ ನಡೆಸಿಕೊಂಡ ಮನುಸ್ಮೃತಿಯನ್ನು ದಹಿಸಿ ಡಾ.ಅಂಬೇಡ್ಕರ್‌ ಪ್ರತಿಭಟನೆ ದಾಖಲಿಸಿದ್ದರು. ಇದೀಗ ನಾವು ಮನುಸ್ಮೃತಿಯ ಪ್ರತಿಕೃತಿ ದಹಿಸುವ ಮೂಲಕ ಮನುಸ್ಮೃತಿಯನ್ನು ಪೋಷಿಸಿಕೊಂಡು ಬಂದ ಆರ್‌ಎಸ್‌ಎಸ್‌, ಬಜರಂಗದಳ, ವಿಶ್ವಹಿಂದೂ ಪರಿಷತ್‌, ಸಂಘ ಪರಿವಾರದ ವಿಚಾರಧಾರೆಗಳನ್ನು ವಿರೋಧಿಸುತ್ತಿದ್ದೇವೆ’ ಎಂದರು.

‘ದೇಶದಲ್ಲಿ ಕೋಮು ವಿಚಾರಗಳನ್ನು ಮುನ್ನೆಲೆಗೆ ತಂದು ಅಶಾಂತಿ ಸೃಷ್ಟಿಸುತ್ತಿರುವ ಸಂಘ ಪರಿವಾರ ತನ್ನ ಕುಚೇಷ್ಟೆಗಳನ್ನು ಕೂಡಲೇ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡ ರಾಜು ಆರೇಕರ್ ಮಾತನಾಡಿ, ‘ಮನುಸ್ಮೃತಿ ಮಹಿಳಾ ವಿರೋಧಿ ಮಾತ್ರವಲ್ಲ, ಮಾನವ ವಿರೋಧಿಯೂ ಹೌದು. ಈ ದೇಶದ ಮೂಲ ನಿವಾಸಿಗಳನ್ನು ಗುಲಾಮರನ್ನಾಗಿ ಮಾಡುವ ಹುನ್ನಾರ ಅದರಲ್ಲಿ ಅಡಗಿದೆ ಎಂಬುದನ್ನು ಅರಿತಿದ್ದ ಡಾ.ಅಂಬೇಡ್ಕರ್ ಅದನ್ನು ಬಹಿರಂಗವಾಗಿ ದಹಿಸಿದ್ದರು. ದೇಶ ಸ್ವತಂತ್ರಗೊಂಡಾಗ ಸಂವಿಧಾನ ಕೊಟ್ಟು ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದ್ದಾರೆ. ಈಗ ನಾವು ಮನುಸ್ಮೃತಿ ಪ್ರತಿಕೃತಿ ದಹಿಸುವ ಮೂಲಕ ದೇಶದಲ್ಲಿ ಮುಂದೆ ಬ್ರಾಹ್ಮಣ್ಯಶಾಹಿ ಮನಸ್ಥಿತಿ ಬಿತ್ತಲು ಬಿಡುವುದಿಲ್ಲ ಎಂಬುದರ ಸಂಕೇತವನ್ನು ನೀಡಿದ್ದೇವೆ’ ಎಂದರು.

ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.‌ ಸಮಿತಿಯ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.