ADVERTISEMENT

ಕಲಬುರಗಿ | ಸಾವಿನ ಹೆದ್ದಾರಿಯಾದ ಅಫಜಲಪುರ ರಸ್ತೆ: ಅಪಘಾತದಲ್ಲಿ 162 ಜನ ಸಾವು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 14:17 IST
Last Updated 28 ನವೆಂಬರ್ 2023, 14:17 IST
ಕಲಬುರಗಿ–ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿಗಳು ಬಿದ್ದಿರುವುದು
ಕಲಬುರಗಿ–ಅಫಜಲಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಗುಂಡಿಗಳು ಬಿದ್ದಿರುವುದು   

ಕಲಬುರಗಿ: ‘ಜಿಲ್ಲಾ ಕೇಂದ್ರ ಕಲಬುರಗಿಯಿಂದ ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ದೇವಲ ಗಾಣಗಾಪುರ, ಘತ್ತರಗಿ ಭಾಗ್ಯವಂತಿ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಕಲಬುರಗಿ–ಅಫಜಲಪುರ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಕಳೆದ ಮೂರು ವರ್ಷಗಳಲ್ಲಿ 162 ಜನ ಪ್ರಾಣ ಕಳೆದುಕೊಂಡಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು‘ ಎಂದು ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2015–16ನೇ ಸಾಲಿನಲ್ಲಿ ರಾಜ್ಯ ಹೆದ್ದಾರಿಯಿಂದ 150– ಇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದ್ದು, ಪ್ರತಿ ಮೂರು ವರ್ಷಕ್ಕೊಮ್ಮೆ ಮರು ಡಾಂಬರೀಕರಣ ಮಾಡಬೇಕೆಂಬ ನಿಯಮ ಇದೆ. ಆದರೆ, ಈ ನಿಯಮ ಉಲ್ಲಂಘಿಸಿರುವುದರಿಂದ ಪ್ರತಿ ವರ್ಷ ಈ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುತ್ತಿವೆ. ಈ ಬಗ್ಗೆ ಸ್ಥಳೀಯ ಶಾಸಕರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಕೇಳಿದರೆ ರಸ್ತೆ ದುರಸ್ತಿಗೆ ಟೆಂಡರ್ ಆಗಿದೆ ಎಂದು ಹೇಳುತ್ತಲೇ ಕಾಲ ತಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘2021ರಲ್ಲಿ ಈ ಹೆದ್ದಾರಿಯಲ್ಲಿ ಒಟ್ಟು 48 ರಸ್ತೆ ಅಪಘಾತಗಳಾಗಿದ್ದು, 51 ಜನ ಸಾವಿಗೀಡಾಗಿದ್ದಾರೆ. 12 ಜನ ಗಂಭೀರ ಗಾಯಗೊಂಡಿದ್ದಾರೆ. 2022ರಲ್ಲಿ 52 ಅಪಘಾತಗಳು ಸಂಭವಿಸಿದ್ದು, 59 ಜನ ಮೃತಪಟ್ಟಿದ್ದು, 27 ಜನ ಗಾಯಗೊಂಡಿದ್ದಾರೆ. 2023ರಲ್ಲಿ ಸಂಭವಿಸಿದ 46 ಅಪಘಾತಗಳಲ್ಲಿ 52 ಜನ ಸಾವಿಗೀಡಾಗಿದ್ದು, 25 ಜನ ಗಾಯಗೊಂಡಿದ್ದಾರೆ. ಮೂರು ವರ್ಷದಲ್ಲಿ ಒಟ್ಟು 146 ಅಪಘಾತಗಳಲ್ಲಿ 162 ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ ಇಬ್ಬರು ಮಕ್ಕಳು, 35 ಮಹಿಳೆಯರೂ ಸೇರಿದ್ದಾರೆ‘ ಎಂದರು.

ADVERTISEMENT

ಜಿಲ್ಲೆಯನ್ನು ಬರಪೀಡಿತವೆಂದು ಘೋಷಣೆ ಮಾಡಲಾಗಿದೆ. ಆದರೆ, ಇದುವರೆಗೂ ಪರಿಹಾರ ಬಂದಿಲ್ಲ. ತೊಗರಿ ಬೆಳೆ ನೆಟೆ ರೋಗದಿಂದ ಹಾಳಾಗಿತ್ತು. ಹೋರಾಟದ ಫಲವಾಗಿ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ₹ 239 ಕೋಟಿ ಪರಿಹಾರ ಮಂಜೂರು ಮಾಡಿತ್ತು. ಅದರಲ್ಲಿ ಈಗಿನ ಸರ್ಕಾರ ಕೇವಲ ₹ 120 ಕೋಟಿ ಮಾತ್ರ ಪರಿಹಾರ ನೀಡಿದೆ. ಉಳಿದ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಅವ್ವಣ್ಣ ಮ್ಯಾಕೇರಿ ಒತ್ತಾಯಿಸಿದರು.

ಕೃಷ್ಣ ಕುಲಕರ್ಣಿ, ಚಂದ್ರಕಾಂತ ಶಾಖಾಪುರ, ಚಂದ್ರಕಾಂತ ಜಮಾದಾರ, ಮಲ್ಲಿನಾಥ ಪಾಟೀಲ, ರವಿ ಡೊಂಗರಗಾಂವ ಇದ್ದರು.

ಅವ್ವಣ್ಣ ಮ್ಯಾಕೇರಿ
ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ನೆಪ ಹೇಳದೇ ತಿಂಗಳೊಳಗಾಗಿ ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ
ಅವ್ವಣ್ಣ ಮ್ಯಾಕೇರಿ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.