ADVERTISEMENT

ಕಲಬುರಗಿ: ಗೂಂಡಾ ಕಾಯ್ದೆಯಡಿ ಮಾರ್ಕೆಟ್ ಸತ್ಯಾ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:41 IST
Last Updated 13 ಜೂನ್ 2024, 13:41 IST
   

ಕಲಬುರಗಿ: ಕೊಲೆ ಯತ್ನ, ಹಲ್ಲೆ, ಸಮಾಜದಲ್ಲಿ ದೊಂಬಿ ಸೃಷ್ಟಿಸುವುದು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸತೀಶಕುಮಾರ್ ವೆಂಕಟರೆಡ್ಡಿ ಅಲಿಯಾಸ್ ಮಾರ್ಕೆಟ್ ಸತ್ಯಾನನ್ನು (36) ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಒಂದು ವರ್ಷದವರೆಗೆ ಇರಿಸಲಾಗುತ್ತದೆ.

ಸತ್ಯಾ ವಿರುದ್ಧ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 25 ಪ್ರಕರಣಗಳಿವೆ. ಹಲವು ಅಪರಾಧ ಕೃತ್ಯಗಳಲ್ಲಿ ಇತ್ತೀಚೆಗೆ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗಿತ್ತು. ಹೀಗಾಗಿ, ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ‍ಪ್ರತಿಕ್ರಿಯೆ ನೀಡಿದ ಕಲಬುರಗಿ ಪೊಲೀಸ್ ಕಮಿಷನರ್ ಚೇತನ್ ಆರ್., ‘ಕಾನೂನು ಬಾಹಿರ ಕೃತ್ಯಗಳಲ್ಲಿ ಸತೀಶ್ ಭಾಗವಹಿಸಿದ್ದರಿಂದ ಆತನನ್ನು ಒಂದು ವಾರದ ಹಿಂದೆಯೇ ಬಂಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ’ ಎಂದರು.

ADVERTISEMENT

ಕಾನ್‌ಸ್ಟೆಬಲ್ ಕೊಲೆಗೆ ಯತ್ನ:

2016ರ ಮೇ 4ರಂದು ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಮಾರ್ಕೆಟ್ ಸತ್ಯಾನನ್ನು ಸ್ಟೇಶನ್ ಬಜಾರ್ ಠಾಣೆಯ ಸೆಲ್‌ನಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿದ್ದ ಸತ್ಯಾ, ಲಾಕಪ್ ಗಾರ್ಡ್ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಒಬ್ಬರಿಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿತ್ತು.

ಗೂಂಡಾ ಕಾಯ್ದೆಯಡಿ ಬಂಧಿತನಾಗಿ ಶಿವಮೊಗ್ಗ ಜೈಲಿನಲ್ಲಿದ್ದ ಸತೀಶ ಈಚೆಗೆ ತಪ್ಪಿಸಿಕೊಂಡು ಹೈದರಾಬಾದ್‌ನಲ್ಲಿ ತಲೆ ಮರೆಸಿಕೊಂಡಿದ್ದ. ಅಲ್ಲಿರುವ ಮಾಹಿತಿ ಪಡೆದ ಕಲಬುರಗಿಯ ಚೌಕ್ ಠಾಣೆ ಪೊಲೀಸರು ಪೊಲೀಸ್ ಕಮಿಷನರ್ ಚೇತನ್ ಅವರ ಸೂಚನೆ ಮೇರೆಗೆ ಆತನನ್ನು ಪತ್ತೆ ಹಚ್ಚಿ ನಗರಕ್ಕೆ ಕರೆತಂದಿದ್ದರು. ಇದೀಗ ಆತನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.