ಕಮಲಾಪುರ: ಅಮರ್ ರಹೆ! ಅಮರ್ ರಹೆ! ಜವಾನ್ ರಾಜು (ರಾಜಕುಮಾರ) ಅಣ್ಣಾ ಅಮರ ರಹೆ! ಜೈ ಜವಾನ್ ಜೈ ಕಿಸಾನ್, ಭಾರತ ಮಾತಾಕಿ ಜೈ ಎಂಬ ಜಯಘೋಷಗಳು ಚಿಂಚನಸೂರ ಗ್ರಾಮದಲ್ಲಿ ಗುರುವಾರ ಮೊಳಗಿದವು.
ತ್ರಿಪುರಾ ಗಡಿಯಲ್ಲಿ ಮಂಗಳವಾರ ಉಗ್ರರ ದಾಳಿಗೆ ಹುತಾತ್ಮರಾದ ಗಡಿ ಭದ್ರತಾ ಪಡೆಯ ಯೋಧ ರಾಜಕುಮಾರ ಮಾವಿನ ಅವರ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮ ಚಿಂಚನಸೂರನಲ್ಲಿ ಗುರುವಾರ ಜನಸಾಗರವೇ ನೆರೆದಿತ್ತು.
ಚಿಂಚನಸೂರ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಯುವಕರು, ಮಕ್ಕಳು, ಮಹಿಳೆಯರು ಜಯಘೋಷ ಕೂಗುತ್ತಿದ್ದರು. ಅಂತ್ಯಕ್ರಿಯೆಯ ಆ ಮೆರವಣಿಗೆ ಸನ್ನಿವೇಶ ಕಂಡ ಪ್ರತಿಯೊಬ್ಬನ ಮನಸಿನಲ್ಲಿ ದೇಶ ಭಕ್ತಿಯ ಕಿಚ್ಚು ಹೆಚ್ಚಿಸಿತು. ‘ಸತ್ತರೆ ನಾವೂ ಹೀಗೆ ಸಾಯಬೇಕು’ ಎಂಬ ಭಾವನೆ ಮೂಡಿಸುವಂತಿತ್ತು. ಇನ್ನೊಂದೆಡೆ ಕರುಳ ಬಳ್ಳಿಯನ್ನು ಕಳೆದುಕೊಂಡ ತಾಯಿ, ಪತ್ನಿ, ಮಕ್ಕಳ ರೋದನೆಯನ್ನು ಕಂಡು ಕರುಳು ಚುರ್ ಎನ್ನುತ್ತಿತ್ತು.
ಮಂಗಳವಾರ ಬೆಳಿಗ್ಗೆ ಯೋಧ ಹುತಾತ್ಮನಾಗಿದ್ದು, ಎಲ್ಲ ನಿಯಮಗಳನ್ನು ಪಾಲಿಸಿ ಬುಧವಾರ ಬೆಳಿಗ್ಗೆ ಪಾರ್ಥಿವ ಶರೀರವನ್ನು ವಿಮಾನದ ಮೂಲಕ ರಾತ್ರಿ 9.30ಕ್ಕೆ ಹೈದರಾಬಾದ್‍ಗೆ ತರಲಾಯಿತು. ಅಲ್ಲಿಂದ ನೇರವಾಗಿ ಗುರುವಾರ ಬೆಳಗಿನ ಜಾವ 3.30ಕ್ಕೆ ಗ್ರಾಮಕ್ಕೆ ತರಲಾಯಿತು. ಯೋಧ ರಾಜಕುಮಾರ ಅವರ ಮನೆಯಲ್ಲಿ ಐದು ನಿಮಿಷ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಅಂಬೇಡ್ಕರ್ ವೃತ್ತದಲ್ಲಿ ತಂದಿಡಲಾಯಿತು.
ಗುರುವಾರ ಬೆಳಿಗ್ಗೆ 11ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ನಂತರ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಜಮೀನಿಗೆ ಕೊಂಡೊಯ್ದು ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅಂತಸಂಸ್ಕಾರ ನೆರವೇರಿಸಲಾಯಿತು.
ಸ್ಥಳೀಯ ಪೊಲೀಸ್ ಸಿಬ್ಬಂದಿ, ಸಿಆರ್‌ಪಿಎಫ್ ಯೋಧರು ರಾಷ್ಟ್ರಗೀತೆ ನಂತರ ತಲಾ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಶಾಸಕ ಬಸವರಾಜ ಮತ್ತಿಮಡು, ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ, ಎಸ್ಪಿ ಡಾ. ಸಿಮಿ ಮರಿಯಮ್ ಜಾರ್ಜ್ ಸಮ್ಮುಖದಲ್ಲಿ ಯೋಧ ರಾಜಕುಮಾರ ಅವರ ಪಾರ್ಥೀವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಪತ್ನಿ ಚಂದ್ರಕಲಾ ಅವರಿಗೆ ಬಿಎಸ್‍ಎಫ್‍ನ ಡಿಐಜಿ ಮುರಳಿ ಕೃಷ್ಣ ಹಸ್ತಾಂತರಿಸಿದರು.
ಮಾಜಿ ಸಚಿವ ರೇವುನಾಯಕ ಬೆಳಮಗಿ, ಮಾಜಿ ಶಾಸಕ ಬಿ.ಆರ್. ಪಾಟೀಲ, ಎಎಸ್‍ಪಿ ಪ್ರಸನ್ನ ದೇಸಾಯಿ, ಸಿಪಿಐ ಮಂಜುನಾಥ, ಆಳಂದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ, ಹೋರಾಟಗಾರ್ತಿ ಕೆ.ನೀಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಮುಖಂಡರಾದ ವಿಜಯಕುಮಾರ ಜಿ.ಆರ್., ರವಿ ಚೌವಾಣ್, ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಮರತುರಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.