ಕಲಬುರಗಿ: ‘ಅಹಿಂದ ಮಾದರಿಯಲ್ಲಿ ನಡೆಯುವ ಅತಿ ಹಿಂದುಳಿದ ವರ್ಗಗಳ (‘ಎಂಬಿಸಿ’) ಸಮಾವೇಶದ ಪೂರ್ವಭಾವಿಯಾಗಿ ಸಮಾನ ಮನಸ್ಕರ ವಿಶೇಷ ಚಿಂತನಾ ಸಭೆಯನ್ನು ಸೆ.9ರಂದು ಬೆಂಗಳೂರಿನಲ್ಲಿ ನಡೆಸಲಾಗುವುದು’ ಎಂದು ಚಿತ್ತಾಪುರದ ನಾರಾಯಣ ಗುರುಗಳ ಶಕ್ತಿ ಪೀಠದ ಮುಖ್ಯಸ್ಥ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
‘ಅಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಚಿಂತನಾ ಸಭೆಗೆ ಅತಿ ಹಿಂದುಳಿದ ಸಮುದಾಯಗಳ ನಾಯಕರು ಭಾಗವಹಿಸುವರು. 2024ರ ಜನವರಿ ತಿಂಗಳಲ್ಲಿ ಉಡುಪಿಯಲ್ಲಿ ನಡೆಯುವ ಎಂಬಿಸಿ ಸಮಾವೇಶದ ರೂಪರೇಷೆ ಕುರಿತು ಚರ್ಚಿಸಲಾಗುವುದು’ ಎಂದು ಬುಧವಾರ ನಡೆದ ಶಕ್ತಿ ಪೀಠದ ಟ್ರಸ್ಟಿಗಳ ಮತ್ತು ಪ್ರಮುಖರ ಸಭೆಯಲ್ಲಿ ಅವರು ಹೇಳಿದರು.
‘ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದ ನೇತೃತ್ವದಲ್ಲಿ ಅತಿ ಹಿಂದುಳಿದ ವರ್ಗಗಳನ್ನು ಜತೆಗೂಡಿಸಿಕೊಂಡು ಎಂಬಿಸಿ ಸಮಾವೇಶ ನಡೆಸಲಾಗುವುದು. ಅಹಿಂದದಲ್ಲಿ ಗುರುತಿಸಿಕೊಂಡಿದ್ದರೂ ಬಹುತೇಕ ಎಂಬಿಸಿ ಸಮುದಾಯಗಳಿಗೆ ರಾಜಕೀಯ ಪ್ರಾತನಿಧ್ಯ ಹಾಗೂ ಸಾಂವಿಧಾನಿಕ ಸವಲತ್ತುಗಳು ಸಿಗುತ್ತಿಲ್ಲ. ಹೀಗಾಗಿ, ಅಹಿಂದಕ್ಕೆ ಪರ್ಯಾಯವಾಗಿ ಎಂಬಿಸಿ ಒಕ್ಕೂಟ ರಚಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.