ಕಲಬುರಗಿ: ಮದ್ಯ ಕುಡಿಯಲು ಮತ್ತು ತಿನ್ನಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯ ಮೇಲೆ ಹಲ್ಲೆ ಮಾಡಿ, ಚಾಕುವಿನಿಂದ ಕೊಲೆಗೆ ಯತ್ನಿಸಿದ ಆರೋಪದಡಿ ಮಗನ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಬಜಾರ್‌ನ ಕಟಗಪುರ ನಿವಾಸಿ ಶಕುಂತಲಾ ದಶರಥಸಿಂಗ್ ಹಲ್ಲೆಗೆ ಒಳಗಾದ ಸಂತ್ರಸ್ತೆ. ಆಕೆಯ ಮಗ ಹರೀಶ ದಶರಥಸಿಂಗ್ (34) ವಿರುದ್ಧ ಬಿಎನ್‌ಎಸ್ ಸೆಕ್ಷನ್ 352, 115(2),109(1) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಕೆಲಸ ಮಾಡುವ ಶಕುಂತಲಾ ಅವರು, ಪತಿ ನಿವೃತ್ತ ಸೈನಿಕ ದಶರಥಸಿಂಗ್, ಇಬ್ಬರು ಮಕ್ಕಳು ಹಾಗೂ ಸೊಸೆಯರ ಜತೆಗೆ ಕಟಗಪುರದಲ್ಲಿ ವಾಸವಾಗಿದ್ದಾರೆ. ಹಿರಿಯ ಮಗನಾದ ಹರೀಶ, ಯಾವುದೇ ಕೆಲಸ ಮಾಡದೆ ಕೆಟ್ಟ ಹುಡುಗರ ಸಹವಾಸ ಮಾಡಿ, ಮದ್ಯ ಕುಡಿದು ಆಗಾಗ ಗಲಾಟೆ ಮಾಡುತ್ತಿದ್ದನು. ಆತನ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ರೌಡ್‌ಶೀಟ್ ಕೂಡ ಇದೆ ಎಂದು ಹೇಳಿದ್ದಾರೆ.
ನವೆಂಬರ್ 22ರ ಸಂಜೆ 4.30ರ ಸುಮಾರಿಗೆ ಮದ್ಯ ಕುಡಿಯಲು ಮತ್ತು ತಿನ್ನಲು ₹5 ಸಾವಿರ ಕೊಡುವಂತೆ ತಾಯಿಗೆ ಕೇಳಿದನು. ಕೊಡಲು ಹಣವಿಲ್ಲವೆಂದು ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ, ಆಕೆಯ ಕಪಾಳಕೆ ಹೊಡೆದನು. ಅಡುಗೆ ಮನೆಯಲ್ಲಿನ ಚಾಕು ತಂದು ಕೊಲೆಗೆ ಯತ್ನಿಸಿದಾಗ, ನೆರೆ ಮನೆಯರು ಬಂದು ಶಕುಂತಲಾ ಅವರನ್ನು ರಕ್ಷಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಹಾಡಹಗಲೇ ಮನೆಯಿಂದ ₹ 1.95 ಲಕ್ಷ ಕದ್ದರು
ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣೆಗಾಂವ ಗ್ರಾಮದಲ್ಲಿ ಹಾಡಹಗಲೇ ಮನೆ ಬಾಗಿಲು ತೆರೆದ ಕಳ್ಳರು, ಚಿನ್ನಾಭರಣ ಮತ್ತು ನಗದು ಕದ್ದಿದ್ದಾರೆ.
ಶಾಮಬಾಯಿ ಧರ್ಮಣ್ಣ ಅವರ ಮನೆಯಲ್ಲಿ ಕಳುವಾಗಿದೆ. ಶಾಮಬಾಯಿ ಅವರು ಗುರುವಾರ ಬೆಳಿಗ್ಗೆ 11ಕ್ಕೆ ಮನೆ ಬಾಗಿಲು ಹಾಕಿ ಹತ್ತಿ ಬಿಡಿಸಲು ಸಹೋದರನ ಹೊಲಕ್ಕೆ ಹೋಗಿದ್ದರು. ಸಂಜೆ 6ಕ್ಕೆ ಮನೆಗೆ ಬಂದು ನೋಡಿದಾಗಿ, ಬಾಗಿಲು ತೆರೆದಿತ್ತು. ಮನೆಯಲ್ಲಿ ಇರಿಸಿದ್ದ ₹1 ಲಕ್ಷ ನಗದು ಹಾಗೂ ₹95 ಸಾವಿರ ಮೌಲ್ಯದ ಚಿನ್ನಾಭರಣ ಕಳುವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಿಪ್ಪೆಯಲ್ಲಿ ಗಾಂಜಾ ಬೆಳೆಸಿದ್ದ ವ್ಯಕ್ತಿ ಬಂಧನ
ಕಮಲಾಪುರ: ಮನೆ ಪಕ್ಕದ ತಿಪ್ಪೆಯಲ್ಲಿ ಗಾಂಜಾ ಗಿಡ ಬೆಳೆಸಿದ್ದ ಆರೋಪದಡಿ ಮಲ್ಲಣ್ಣ ಗುಂಡಪ್ಪನನ್ನು (50) ಮಹಾಗಾಂವ್ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಯಕ್ಕಂಚಿ ಗ್ರಾಮದ ನಿವಾಸಿ ಮಲ್ಲಣ್ಣ ತಮ್ಮ ಮನೆಯ ಪಕ್ಕದಲ್ಲಿ ಇರುವ ತಿಪ್ಪೆಯ ಜಾಗದಲ್ಲಿ ಐದು ಗಾಂಜಾ ಗಿಡಗಳನ್ನು ಬೆಳೆಸಿದ್ದರು. ಖಚಿತ ಮಾಹಿತಿ ಆಧರಿಸಿ ಪಿಎಸ್‌ಐ ಆಶಾ ಹೆಡ್‌ಕಾನ್‌ಸ್ಟೆಬಲ್‌ಗಳಾದ ಸಂತೋಷ ಕುಪೇಂದ್ರ ಸೈಯದ್ ಶಕೀಲ್ ಅಲಿ ಕಿಶನ್ ಜಾಧವ ಕಾನ್‌ಸ್ಟೆಬಲ್‌ಗಳಾದ ಬಸವರಾಜ ಸಿದ್ದಲಿಂಗ ಮತ್ತು ಗೌರಮ್ಮ ಅವರಿದ್ದ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿಯಿಂದ ₹1.62 ಲಕ್ಷ ಮೌಲ್ಯದ 3.260 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.