ಕಲಬುರಗಿ: ಜಿಲ್ಲೆಯ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯೊಬ್ಬರಿಗೆ ಸಹಾಯಕ ಪ್ರಾಧ್ಯಾಪಕ ಪ್ರೊ.ವಿಜಯಕುಮಾರ್ ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಸಂಶೋಧನೆ ಕುರಿತು ಚರ್ಚಿಸಲು ಸಂಜೆ ಹೊತ್ತು ಕೊಠಡಿಗೆ ತನ್ನನ್ನು ಕರೆಯುತ್ತಿದ್ದರು ಎಂದು ಗಂಭೀರ ಆರೋಪ ಮಾಡಿರುವ ವಿದ್ಯಾರ್ಥಿನಿ, ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಈ ಬಗ್ಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು, ಪ್ರಕರಣದ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಪತ್ರ ಬರೆದಿದೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ಮಾರ್ಗದರ್ಶಕರನ್ನು ಬದಲಾಯಿಸಬೇಕು ಎಂದು ಹಲವು ಬಾರಿ ಕೋರಿಕೆ ಸಲ್ಲಿಸಿದರೂ ವಿಭಾಗದ ಮುಖ್ಯಸ್ಥರು, ಡೀನ್, ಕುಲಸಚಿವರು ಹಾಗೂ ಕುಲಪತಿ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿನಿ ಪತ್ರದಲ್ಲಿ ತಿಳಿಸಿದ್ದಾರೆ. ಅಂತಿಮವಾಗಿ ವಿದ್ಯಾರ್ಥಿನಿ ವಿ.ವಿ.ಯಲ್ಲಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದ ಬಳಿಕ ಮಾರ್ಗದರ್ಶಕರ ಬದಲಾವಣೆಗೆ ವಿಶ್ವವಿದ್ಯಾಲಯದ ಮುಂದಾಗಿದೆ.
ವಿದ್ಯಾರ್ಥಿನಿಯ ಆರೋಪಗಳೇನು?: ಪ್ರೊ.ವಿಜಯಕುಮಾರ್ ಅವರು ವಿಶ್ವವಿದ್ಯಾಲಯದ ರಜಾ ದಿನಗಳು ಹಾಗೂ ಭಾನುವಾರಗಳಂದು ವಿಭಾಗಕ್ಕೆ ಬರಬೇಕು ಎಂದು ಹೇಳುತ್ತಿದ್ದರು. ಸಂಜೆ 6.30ರ ಬಳಿಕ ಸಂಶೋಧನೆ ಕುರಿತು ಚರ್ಚಿಸಲು ಕರೆಯುತ್ತಿದ್ದರು. ನಾನು ಹೋಗದೇ ಇದ್ದಾಗ ಶಿಷ್ಯವೇತನದ ಅರ್ಜಿಗೆ ಸಹಿ ಹಾಕುತ್ತಿರಲಿಲ್ಲ. ನಾನು ಮದುವೆಗಾಗಿ ರಜೆ ಹಾಕಿದ್ದರೂ ಹಾಜರಿ ಪುಸ್ತಕದಲ್ಲಿ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದರು. ಪ್ರತಿ ತಿಂಗಳು ಶಿಷ್ಯವೇತನಕ್ಕೆ ಸಹಿ ಹಾಕಲು ತಕರಾರು ಮಾಡುತ್ತಿದ್ದರು. ವಿಭಾಗದ ಮುಖ್ಯಸ್ಥರ ಗಮನಕ್ಕೆ ತಂದ ಬಳಿಕವಷ್ಟೇ ಸಹಿ ಹಾಕುತ್ತಿದ್ದರು. ಹೆರಿಗೆ ರಜೆಯ ಪತ್ರದ ಮೇಲೆ ಸಹಿ ಹಾಕುವುದಿಲ್ಲ ಎನ್ನುತ್ತಿದ್ದರು. ನನ್ನ ಸಂಶೋಧನಾ ಕಾರ್ಯವನ್ನು ರದ್ದು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಏಪ್ರಿಲ್ 20ರಂದು ಆಯೋಗಕ್ಕೆ ಬರೆದ ಪತ್ರದಲ್ಲಿ ವಿದ್ಯಾರ್ಥಿನಿ ದೂರಿದ್ದಾರೆ.
‘ಸಂಶೋಧನಾ ವಿಷಯದ ಕುರಿತು ಚರ್ಚಿಸಲು ಹೋದಾಗ ನಾಳೆ ಬಾ ಎನ್ನುತ್ತಿದ್ದರು. ಪ್ರತಿ ಬಾರಿ ಹೋದಾಗಲೂ ಅಧ್ಯಯನದ ಕುರಿತು ಯಾವುದೇ ಮಾಹಿತಿಯನ್ನು ಹೇಳುತ್ತಿರಲಿಲ್ಲ. ನಾನ್ಯಾಕೆ ನಿನಗೆ ಸಮಯ ಕೊಡಬೇಕು ಎಂದು ನನ್ನ ಮೇಲೆ ರೇಗಾಡುತ್ತಿದ್ದರು. ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನೀನು ಸಂಶೋಧನೆಗೆ ಅರ್ಹಳಲ್ಲ ಎಂದು ಅವಮಾನ ಮಾಡುತ್ತಿದ್ದರು. ಸಂಶೋಧನಾ ವಿಷಯದ ಬಗ್ಗೆ ಚರ್ಚೆ ಮಾಡುವ ಬದಲು ಅಶ್ಲೀಲ ಶಬ್ದಗಳನ್ನು ಉಪಯೋಗಿಸಿ ಕೀಳುಮಟ್ಟದ ನಿಂದನೆ ಮಾಡುತ್ತಿದ್ದರು’ ಎಂದು ವಿದ್ಯಾರ್ಥಿನಿಯು ಆಯೋಗ ಹಾಗೂ ರಾಷ್ಟ್ರಪತಿಗೆ ಬರೆದ ಮೂರು ಪುಟಗಳ ಪತ್ರದಲ್ಲಿ ಆರೋಪಿಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿನಿಯು ವಿ.ವಿ.ಯ ಆಂತರಿಕ ದೂರು ಸಮಿತಿಗೆ ನೀಡಿದ ಮನವಿಯನ್ನು ಪರಿಗಣಿಸಿ ಡೀನ್ ಅವರು ಮಾರ್ಗದರ್ಶಕರನ್ನು ಬದಲಾಯಿಸಿದ್ದಾರೆ. ದೂರುಗಳ ಬಗ್ಗೆ ತನಿಖೆ ನಡೆಯುತ್ತಿದೆ.-ಪ್ರೊ.ಆರ್.ಆರ್. ಬಿರಾದಾರ ಕುಲಸಚಿವ ಕರ್ನಾಟಕ ಕೇಂದ್ರೀಯ ವಿ.ವಿ.
ವಿದ್ಯಾರ್ಥಿನಿ ಎರಡು ಕಡೆ ಶಿಷ್ಯವೇತನ ಪಡೆಯುತ್ತಿರುವುದನ್ನು ಆಕ್ಷೇಪಿಸಿ ಹಣ ಮರುಪಾವತಿ ಮಾಡುವಂತೆ ಹೇಳಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ವಿದ್ಯಾರ್ಥಿನಿ ಆರೋಪಗಳಲ್ಲಿ ಹುರುಳಿಲ್ಲ.ಪ್ರೊ. ವಿಜಯಕುಮಾರ್ ಸಹಾಯಕ ಪ್ರಾಧ್ಯಾಪಕ ಸಿಯುಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.