ADVERTISEMENT

ಕಲಬುರಗಿ: ಕಾರಿನಲ್ಲಿ ತಾಂತ್ರಿಕ ದೋಷ, ಬೆಂಗಾವಲು ವಾಹನ ಹತ್ತಿದ ಅಶ್ವತ್ಥನಾರಾಯಣ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 14:04 IST
Last Updated 13 ಫೆಬ್ರುವರಿ 2022, 14:04 IST
ಡಾ. ಸಿ.ಎನ್. ಅಶ್ವತ್ಥನಾರಾಯಣ
ಡಾ. ಸಿ.ಎನ್. ಅಶ್ವತ್ಥನಾರಾಯಣ    

ಕಲಬುರಗಿ: ಯಾದಗಿರಿಯಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸ್ ಬರುತ್ತಿದ್ದ ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿದ್ದ ಸರ್ಕಾರಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೆಂಗಾವಲು ವಾಹನ ಹತ್ತಿ ಕಲಬುರಗಿ ವಿಮಾನ ನಿಲ್ದಾಣ ತಲುಪಿದ್ದಾರೆ.

ಯಾದಗಿರಿ ಹಾಗೂ ಸು‍ರಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಧ್ಯಾಹ್ನ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲು ಕಲಬುರಗಿಯತ್ತ ಹೊರಟಿದ್ದರು. ಕಲಬುರಗಿ ತಾಲ್ಲೂಕಿನ ಫರಹತಾಬಾದ್ ಬಳಿ ಬರುತ್ತಿದ್ದಂತೆಯೇ ಕಾರು ಏಕಾಏಕಿ ಬಂದ್ ಆಯಿತು. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮೆಕಾನಿಕ್ ಕರೆಸಲು ವಿಳಂಬವಾಗುತ್ತದೆ ಎಂದು ಚಾಲಕ ಹೇಳಿದರು. ಮತ್ತೊಂದೆಡೆ ಬೆಂಗಳೂರಿಗೆ ತೆರಳುವ ವಿಮಾನದ ಸಮಯ ಹತ್ತಿರ ಬಂದಿದ್ದರಿಂದ ಬೆಂಗಾವಲು ಜೀಪ್ ಹತ್ತಿದರು. ಸಚಿವರ ಆಪ್ತ ಸಹಾಯಕರೂ ಅದೇ ಜೀಪ್ ಹತ್ತಿ ವಿಮಾನ ನಿಲ್ದಾಣ ತಲುಪಿದರು.

ಸಚಿವರೊಂದಿಗೆ ಬರುತ್ತಿದ್ದ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ‍ಪಿ. ಅವರ ಕಾರಿನ ಡೀಸೆಲ್ ಖಾಲಿಯಾಯಿತು. ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಸೇರಿದ್ದ ಕಾರನ್ನು ಆಯುಕ್ತರ ಬಳಕೆಗೆ ನೀಡಲಾಗಿತ್ತು. ಅವರೂ ಮತ್ತೊಂದು ವಾಹನ ಏರಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ, ‘ಸಚಿವರಿದ್ದ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಬೆಂಗಾವಲು ಜೀಪ್‌ನಲ್ಲಿ ಸಂಚರಿಸಿದ್ದಾರೆ. ಈ ಘಟನೆ ನಡೆಯಬಾರದಿತ್ತು. ಕಾರನ್ನು ಸುಸ್ಥಿತಿಯಲ್ಲಿ ಇರಿಸಿಕೊಳ್ಳುವಂತೆ ಸಚಿವರ ಪ್ರಯಾಣದ ಉಸ್ತುವಾರಿ ಹೊತ್ತಿದ್ದ ಲೈಸನ್ ಅಧಿಕಾರಿ ಹಾಗೂ ಚಾಲಕನಿಗೆ ಸೂಚಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.