ಕಲಬುರಗಿ: 'ಕೆಇಎ ನೇಮಕಾತಿ ಪರೀಕ್ಷೆಯ ಬ್ಲೂಟೂತ್ ಅಕ್ರಮದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಇರುವ ಬಗ್ಗೆ ಐಪಿಎಸ್ ಅಧಿಕಾರಿ ಮಾಹಿತಿ ಕೊಟ್ಟರು ಆತನನ್ನು ಹಿಡಿಯಲು ಸಾಧ್ಯವಾಗಿಲ್ಲ. ಕಣ್ಣಿಗೆ ಕಾಣದ ಶಕ್ತಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇರುವವರೇ ಆರ್.ಡಿ. ಪಾಟೀಲಗೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ' ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, 'ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸಿಗರು ನಾನಾ ಆರೋಪ ಮಾಡಿದ್ದರು. ಈಗಿನ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು. ಆರ್.ಡಿ. ಪಾಟೀಲ ಸೇರಿ ಇಡೀ ಅವರ ತಂಡ ಕಾಂಗ್ರೆಸ್‌ನ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಈಗ ಅಕ್ರಮದ ಮತ್ತೊಂದು ಕೃತ್ಯ ನಡೆಸಿದ್ದಾರೆ. ಆರ್.ಡಿ. ಪಾಟೀಲ ತಪ್ಪಿಸಿಕೊಳ್ಳುವ ಪಿತೂರಿಗೆ ಸಚಿವರು ಸಹಕಾರ ಕೊಡುತ್ತಿದಾರೆ' ಎಂದು ಗಂಭೀರ ಆಪಾದನೆ ಮಾಡಿದರು.
'ಇಡೀ ಕಾಂಗ್ರೆಸ್ ಸರ್ಕಾರ ಇಂತಹ ವ್ಯಕ್ತಿಗಳಿಗೆ ಬೆನ್ನೆಲುಬಾಗಿ ನಿಂತು ಶಕ್ತಿ ತುಂಬುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆರ್.ಡಿ. ಪಾಟೀಲ ಸಾಮಾನ್ಯ ವ್ಯಕ್ತಿಯಲ್ಲ. ಆತನಿಗೆ ಆಡಳಿತ ಪಕ್ಷದ ಘಟಾನುಘಟಿ ನಾಯಕರ ಸಂಪರ್ಕ ಇದೆ. ಅವರ ಬೆಂಬಲವೂ ಇದೆ. ಇವತ್ತು ಕಣ್ಮರಸಿ ಹೋಗುವ ಪರಿಸ್ಥಿತಿ ಉದ್ಭವಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಕಿಮ್ಮತ್ತು ಇಲ್ಲದಂತೆ ಆಗಿದೆ. ಹಗರಣ ಮಾಡಿಕೊಂಡು ಹೋಗುತ್ತಿರುವುದು ದುರಾದೃಷ್ಟಕರ' ಎಂದರು.
'ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗುತ್ತದೆ. ನ್ಯಾಯ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಖಂಡಿತವಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲೇಬೇಕು. ಇಲ್ಲದೆ ಇದ್ದರೆ ಪ್ರತಿ ಬಾರಿ ಈ ರೀತಿ ಪ್ರಕರಣಗಳು ಮಾಡುತ್ತಲೇ ಇರುತ್ತಾನೆ, ಸರ್ಕಾರವೂ ಬೆಂಬಲ ಕೊಡುತ್ತಲೇ ಇರುತ್ತದೆ' ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.