ಕಲಬುರಗಿ: ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ಬೇಡಿಕೆಯ ಕುರಿತು ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ‘ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡಗಳನ್ನು ಹೊಸದಾಗಿ ಸೃಷ್ಟಿಸಲಾದ 2ಡಿ ಪ್ರವರ್ಗದಲ್ಲಿ ಸೇರಿಸಲಾಗಿದೆ. ಒಂದೇ ತಟ್ಟೆ ಇರುವುದರಿಂದ ಎಲ್ಲರೂ ಅದರಲ್ಲೇ ಹಂಚಿಕೊಂಡು ತಿನ್ನಬೇಕು’ ಎಂದರು.
ಆ ಮೂಲಕ ನಿರ್ದಿಷ್ಟವಾಗಿ ಪಂಚಮಸಾಲಿ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡುವ ಸಾಧ್ಯತೆಗಳನ್ನು ಪರೋಕ್ಷವಾಗಿ ತಳ್ಳಿ ಹಾಕಿದರು.
‘ಪಂಚಮಸಾಲಿ ಸಮುದಾಯದವರು ದಶಕಗಳಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಒಕ್ಕಲಿಗ ಸಮುದಾಯದವರೂ ಇದೇ ಬಗೆಯ ಬೇಡಿಕೆ ಇಟ್ಟಿದ್ದರು. 3ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸಮುದಾಯವನ್ನು 2ಸಿ ಪ್ರವರ್ಗದಲ್ಲಿ ಹಾಗೂ 3ಬಿ ಪ್ರವರ್ಗದಲ್ಲಿದ್ದ ಲಿಂಗಾಯತ ಸಮುದಾಯದ ಎಲ್ಲ ಉಪ ಪಂಗಡಗಳನ್ನು 2ಡಿಯಲ್ಲಿ ಸೇರಿಸಲಾಗಿದೆ. ಅಲ್ಲದೇ, ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ (ಇಡಬ್ಲುಎಸ್) ಮೀಸಲಿರಿಸಿದ ಶೇ 10ರ ಮೀಸಲಾತಿಯಲ್ಲಿ ಶೇ 5ರಷ್ಟು ಲಿಂಗಾಯತರು, ಒಕ್ಕಲಿಗೆ ಸಮುದಾಯಕ್ಕೆ ಸಿಗಲಿದೆ. ಏಕೆಂದರೆ ಇಡಬ್ಲುಎಸ್‌ನಡಿ ಮೀಸಲಾತಿ ಪಡೆಯುವ ಸಮುದಾಯಗಳಿಗೆ ಶೇ 4ರಿಂದ 5ರಷ್ಟು ಮಾತ್ರ ಮೀಸಲಾತಿ ಸಾಕಾಗುತ್ತದೆ. ಹೀಗಾಗಿ, ಇನ್ನುಳಿದ ಶೇ 5ರಷ್ಟನ್ನು ಎರಡು ಪ್ರಮುಖ ಸಮುದಾಯಗಳಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ಹೇಳಿದರು.
‘ಯಾವ ಸಮುದಾಯಕ್ಕೆ ಎಷ್ಟು ಪ್ರಮಾಣದ ಮೀಸಲಾತಿ ನೀಡಬೇಕು ಎಂಬುದನ್ನು ಮಾರ್ಚ್ ಅಂತ್ಯದ ಒಳಗೆ ಪ್ರಕಟಿಸಲಿದೆ’ ಎಂದರು.
‘ರಾಜ್ಯ ಸರ್ಕಾರ ಮೂಗಿಗೆ ತುಪ್ಪ ಸವರುವ ಬದಲು ತಲೆಗೆ ತುಪ್ಪ ಹಚ್ಚಿದೆ’ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ನಿರಾಣಿ, ‘ಹಿಂದೆ ಅಧಿಕಾರದಲ್ಲಿ ಅವರೇ ಇದ್ದರು. ಆದರೂ, ಮೀಸಲಾತಿ ಏಕೆ ನೀಡಲಿಲ್ಲ? ನಮ್ಮ ಸರ್ಕಾರ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ. ತಳವಾರ, ಪರಿವಾರ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಿದೆ. ಲಿಂಗಾಯತರು, ಒಕ್ಕಲಿಗರಿಗೂ ಮೀಸಲಾತಿಯನ್ನು ಅವರ ಬೇಡಿಕೆಗೆ ತಕ್ಕಂತೆ ನೀಡಿದೆ. ವಾಸ್ತವವಾಗಿ ಕಾಂಗ್ರೆಸ್‌ನವರು ತಲೆಗೆ ತುಪ್ಪ ಹಚ್ಚಿದ್ದರು. ನಾವು ಮೀಸಲಾತಿ ನೀಡುವ ಮೂಲಕ ಊಟದೊಂದಿಗೇ ತುಪ್ಪ ಕೊಟ್ಟಿದ್ದೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.