ADVERTISEMENT

‘ಕರ್ನಾಟಕ ದರ್ಶನ’ ಚಿಣ್ಣರ ಪ್ರವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2024, 5:45 IST
Last Updated 10 ಫೆಬ್ರುವರಿ 2024, 5:45 IST
   

ಕಲಬುರಗಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ 'ಕರ್ನಾಟಕ ದರ್ಶನ' ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಕಲಬುರಗಿ ದಕ್ಷಿಣ ಮತ್ತು ಉತ್ತರ ತಾಲ್ಲೂಕಿನ ಸರ್ಕಾರಿ ಶಾಲೆಯ 8ನೇ ತರಗತಿ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು.

ಶಾಲಾ ಮಕ್ಕಳೊಂದಿಗೆ ಪ್ರವಾಸ ಕುರಿತು ಕುಶಲೋಪರಿ ವಿಚಾರಿಸಿದ ಸಚಿವರು, ಪ್ರವಾಸಕ್ಕೆ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಗ್ರೂಪ್ ಪೋಟೊ ತೆಗೆಸಿಕೊಂಡರು. ಪ್ರವಾಸಕ್ಕೆ ಹೊರಟ ಶಾಲಾ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿದ್ದು, ಹಸಿರು ಟಿ-ಶರ್ಟ್ ಧರಿಸಿ ಕಂಗೊಳಿಸಿದರು.

ADVERTISEMENT

824 ಮಕ್ಕಳ ಪ್ರಯಾಣ

ಕರ್ನಾಟಕ ದರ್ಶನ ಅಂಗವಾಗಿ ಪ್ರಸಕ್ತ 2023-24ನೇ ಸಾಲಿಗೆ ಜಿಲ್ಲೆಯ 8ನೇ ತರಗತಿಯ 824 ಶಾಲಾ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಯಿಂದ ಶನಿವಾರ ಕಲಬುರಗಿ ದಕ್ಷಿಣ ಮತ್ತು ಉತ್ತರ ವಲಯದ 208 ಮಕ್ಕಳು ಪ್ರಯಾಣ ಬೆಳೆಸಿದರು.

ಫೆ.11ಕ್ಕೆ ಆಳಂದ ಮತ್ತು ಅಫಜಲಪೂರ ತಾಲ್ಲೂಕಿನಿಂದ 204 ಮಕ್ಕಳು, ಫೆ.12ಕ್ಕೆ ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನಿಂದ 206 ವಿದ್ಯಾರ್ಥಿಗಳು ಹಾಗೂ ಫೆ.13ಕ್ಕೆ ಚಿಂಚೋಳಿ ಮತ್ತು ಸೇಡಂ ತಾಲ್ಲೂಕಿನಿಂದ 206 ವಿದ್ಯಾರ್ಥಿಗಳು ಪ್ರವಾಸ ಮಾಡಲಿದ್ದಾರೆ.

ಪ್ರತಿ ತಾಲ್ಲೂಕಿಗೆ 5 ಬಸ್‌ಗಳ ವ್ಯವಸ್ಥೆ ಮಾಡಿದ್ದು, ಪ್ರಯಾಣದ ಸಂದರ್ಭದಲ್ಲಿ ವಸತಿ, ಊಟೋಪಚಾರಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಎಲ್ಲೆಲ್ಲಿ ಪ್ರವಾಸ?

ಮೊದಲನೇ ದಿನ ವಿಜಯಪುರ ಗೋಳಗುಮ್ಮಟ ನೋಡಿಕೊಂಡು ತಂಡ ಅಲ್ಲಿಯೆ ವಾಸ್ತವ್ಯ ಮಾಡಲಿದೆ. ಎರಡನೇ ದಿನ ಬದಾಮಿ, ಪಟ್ಟದಕಲ್ಲು ವೀಕ್ಷಿಸಿ ಐಹೊಳೆಯಲ್ಲಿ ವಾಸ್ತವ್ಯ ಹೂಡಲಿದೆ. ಮೂರನೇ ದಿನ ವಿದ್ಯಾರ್ಥಿಗಳು ವಿಶ್ವ ಪ್ರಸಿದ್ಧ ಹಂಪಿ, ತುಂಗಭದ್ರಾ ಅಣೆಕಟ್ಟು ಕಣ್ತುಂಬಿಕೊಂಡು ಹೊಸಪೇಟೆಯಲ್ಲಿ ತಂಗಲಿದ್ದಾರೆ.

ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಬೆಟ್ಟ ವೀಕ್ಷಿಸಿ ಮರಳಿ ಕಲಬುರಗಿಯತ್ತ ಪ್ರಯಾಣ ಬೆಳಸಲಿದೆ.

ಈ ಸಂದರ್ಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ, ಬಸವರಾಜ ಮತ್ತಿಮೂಡ, ಡಿ.ಸಿ.ಬಿ.ಫೌಜಿಯಾ ತರನ್ನುಮ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಸತೀಷಕುಮಾರ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಕೆ.ಎಸ್.ಟಿ.ಡಿ.ಸಿ. ನಿಗಮದ ಸಹಾಯಕ ವ್ಯವಸ್ಥಾಪಕ ಯಶವಂತರಾಯ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.