ಕಲಬುರಗಿ: ರಾಜ್ಯದ ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಸಾಧಿಸಿದ್ದಕ್ಕೆ ನಗರದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿದರು.
ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಗರದ ಕಾಂಗ್ರೆಸ್ ಕಚೇರಿ ಆವರಣ, ರಾಮಮಂದಿರ ವೃತ್ತ ಸೇರಿದಂತೆ ಹಲವೆಡೆ ಜಮಾಯಿಸಿದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಜೈಕಾರ ಹಾಕಿದರು. ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.
ಗ್ಯಾರಂಟಿಗಳ ಯಶಸ್ಸು: ಈ ಉಪ ಚುನಾವಣೆಯ ಅಭೂತಪೂರ್ವ ಫಲಿತಾಂಶವು ನಮ್ಮ ಸರ್ಕಾರದ ಜನಪರ ಆಡಳಿತಕ್ಕೆ, ಅಭಿವೃದ್ಧಿಪರ ನೀತಿಗೆ ಹಾಗೂ ಜನರ ಬದುಕನ್ನು ಬದಲಿಸಿದ ಗ್ಯಾರಂಟಿ ಯೋಜನೆಗಳ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಈ ಉಪ ಚುನಾವಣೆಯ ಗೆಲುವು ನಮ್ಮ ಸರ್ಕಾರಕ್ಕೆ ಮತ್ತಷ್ಟು ಬಲ ನೀಡಿದೆ, ಇನ್ನಷ್ಟು ಜನಹಿತದ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪ್ರೇರಣೆ ಮತ್ತು ಚೈತನ್ಯವನ್ನು ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಪ್ರಬುದ್ಧ ಹಾಗೂ ಪ್ರಜ್ಞಾವಂತ ಮತದಾರರು ಪ್ರಗತಿ, ಶಾಂತಿ, ಸೌಹಾರ್ದತೆಯನ್ನು ಬಯಸುತ್ತಾರೆ. ತಮ್ಮ ಭವಿಷ್ಯ ರೂಪಿಸುವ ಉದ್ಯೋಗ ಸೃಷ್ಟಿಯನ್ನು ಬಯಸುತ್ತಾರೆಯೇ ಹೊರತು ಕೋಮುವಾದವನ್ನಲ್ಲ ಎಂಬ ಸಂದೇಶವನ್ನು ಮತ್ತೊಮ್ಮೆ ಈ ಚುನಾವಣೆಯ ಮೂಲಕ ಸಾಮೀತು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಜನಪರ ಕಾಳಜಿ: ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜನ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಜನಪರ ಕಾಳಜಿಯುಳ್ಳ ಸರ್ಕಾರವಾಗಿದೆ. ಅಲ್ಪಸಂಖ್ಯಾತರು, ದೀನ–ದಲಿತರು, ಹಿಂದುಳಿದವರು, ಕಾರ್ಮಿಕರು, ಬಡವರಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಆದ್ದರಿಂದ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳು ಇಲ್ಲಸಲ್ಲದ ಆರೋಪ ಮಾಡುತ್ತಿವೆ. ಇವುಗಳಿಗೆ ಕಿವಿಗೊಡದೆ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದಿದ್ದಾರೆ.
ಶಾಸಕ ಅಲ್ಲಮಪ್ರಭು ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಾಜಿ ಸಚಿವ ರೇವೂನಾಯಕ ಬೆಳಮಗಿ, ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ್, ಲಿಂಗರಾಜ ತಾರಫೈಲ್, ನಂದಕುಮಾರ ಮಾಲಿಪಾಟೀಲ, ಕಾಶಿರಾಯಗೌಡ ಯಲಗೋಡ, ಮನೋಹರ ಪೋದ್ದಾರ, ಸಂಗಮನಾಥ ರಬಶೆಟ್ಟಿ, ಮಹಾದೇವಪ್ಪ ಅಂಗಡಿ, ಬಸವರಾಜ ಬೂದಿಹಾಳ, ವಿಜಯ ಕುಮಾರ ಮಳ್ಳಿ, ಸತೀಶ ಠಾಕೂರ, ರುಕುಂ ಪಟೇಲ್ ಉಪಸ್ಥಿತರಿದ್ದರು.
‘ಸರ್ಕಾರದ ಪರವಾಗಿ ಜನರು ತೀರ್ಪು’
ಉಪಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳಿಗೆ ಆಶೀರ್ವದಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದ್ದಾರೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ. ಪ್ರತಿ ಪಕ್ಷಗಳು ಮುಡಾ ವಕ್ಫ್ ವಿಚಾರಗಳನ್ನು ಮುಂದಿಟ್ಟುಕೊಂಡು ನಿರಂತರವಾಗಿ ಅಪಪ್ರಚಾರ ಮಾಡಿ ಸುಳ್ಳು ಆರೋಪಗಳನ್ನು ಹೊರಿಸಿದ್ದರು. ಆದರೆ ಮತದಾರರು ಅವುಗಳನ್ನೆಲ್ಲ ಅಲಕ್ಷಿಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ತಮ್ಮ ತೀರ್ಪು ಕೊಟ್ಟಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದರು. ಆದರೆ ಅದು ಸಾಧ್ಯವಾಗಿಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಜನರ ಪರವಾಗಿ ಕೆಲಸ ಮಾಡುತ್ತಿದ್ದು ರಾಜಕೀಯ ಕುತಂತ್ರಕ್ಕೆ ಜನರು ತಕ್ಕ ಉತ್ತರ ನೀಡಿದ್ದಾರೆ. ವಾಲ್ಮೀಕಿ ವಕ್ಫ್ ಹಾಗೂ ಮುಡಾ ವಿಚಾರಗಳಿಗೆ ಜನರು ಮನ್ನಣೆ ಕೊಟ್ಟಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.