ಚಿತ್ತಾಪುರ (ಕಲಬುರಗಿ ಜಿಲ್ಲೆ): ಬಸವ ಜಯಂತಿ ಅಂಗವಾಗಿ ಪಟ್ಟಣದ ರೈಲ್ವೆ ನಿಲ್ದಾಣದ ದ್ವಾರ ಬಾಗಿಲ ಸಮೀಪ ಅಳವಡಿಸಿದ್ದ ಬಸವೇಶ್ವರರ ಭಾವಚಿತ್ರ ಇರುವ ಬ್ಯಾನರ್ ಅನ್ನು ಕಿಡಿಗೇಡಿಗಳು ಹರಿದು ಬಸವೇಶ್ವರರಿಗೆ ಅವಮಾನಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ.
ಬ್ಯಾನರ್ ಹರಿದು ಬಸವೇಶ್ವರರಿಗೆ ಅವಮಾನಗೊಳಿಸಿದ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡರಾದ ಆನಂದ ಪಾಟೀಲ ನರಬೋಳಿ, ಜಗದೇವ ದಿಗ್ಗಾಂವಕರ್, ಪ್ರಸಾದ್ ಅವಂಟಿ, ಅಂಬರೀಶ ಸುಲೇಗಾಂವ, ಸಂತೋಷ ಹಾವೇರಿ ಅವರು ಘಟನಾ ಸ್ಥಳಕ್ಕೆ ತೆರಳಿ ಬಸವೇಶ್ವರರಿಗೆ ಅವಮಾನಿಸಿದ ಕೃತ್ಯ ಖಂಡಿಸಿ ಪೊಲೀಸರಿಗೆ ಮಾಹಿತಿ ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪಿಎಸ್ಐ ಸುದರ್ಶನರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಘಟನಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದರು. ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ ಪಿಎಸ್ಐ ಅವರು ಹರಿದಿರುವ ಬ್ಯಾನರ್ ತೆರವುಗೊಳಿಸುವಂತೆ ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡರ ಮನವೊಲಿಸಿದರು. ಪಿಎಸ್ಐ ಅವರ ಭರವಸೆ ಮತ್ತು ಸೂಚನೆಯಂತೆ ಹರಿದ ಬ್ಯಾನರ್ ತೆರವುಗೊಳಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.