ಕಲಬುರಗಿ: ಮತ್ತೊಮ್ಮೆ ಪುನರಾಯ್ಕೆ ಬಯಸಿ ಶನಿವಾರ ಕಲಬುರಗಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸಿರುವ ಶಾಸಕ ಬಸವರಾಜ ಮತ್ತಿಮಡು ಕುಟುಂಬದ ಒಟ್ಟು ಆಸ್ತಿ ₹ 20.95 ಕೋಟಿ ಇದೆ. ಬಸವರಾಜ ಅವರ ಹೆಸರಿನಲ್ಲಿ ₹ 5.16 ಕೋಟಿ ಮೊತ್ತದ ಆಸ್ತಿ ಇದ್ದರೆ, ಅವರ ಪತ್ನಿ ಜಯಶ್ರೀ ಹೆಸರಿನಲ್ಲಿ ಇರುವ ಆಸ್ತಿಗಳ ಮೌಲ್ಯ ₹ 13.36 ಕೋಟಿ.
ನಾಮಪತ್ರದ ಜೊತೆಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಆಸ್ತಿ ವಿವರಗಳಲ್ಲಿ ಈ ಮಾಹಿತಿ ನೀಡಿದ್ದಾರೆ. ಪುತ್ರಿ ಆಕಾಂಕ್ಷಾ ಮತ್ತಿಮಡು ಅವರ ಹೆಸರಿನಲ್ಲಿ ₹ 54.63 ಲಕ್ಷ ಮೊತ್ತದ ಆಸ್ತಿಗಳಿದ್ದರೆ, ಪುತ್ರ ಆಕಾಶ್ ಹೆಸರಿನಲ್ಲಿ ₹ 1.87 ಕೋಟಿ ಮೊತ್ತದ ಆಸ್ತಿಗಳಿವೆ.
ಬಸವರಾಜ ಅವರ ಬಳಿ ₹ 1.39 ಕೋಟಿ, ಜಯಶ್ರೀ ಅವರ ಹೆಸರಿನಲ್ಲಿ ₹ 3.59 ಕೋಟಿ ಹಾಗೂ ಜಂಟಿಯಾಗಿ ₹ 2.85 ಕೋಟಿ ಮೊತ್ತದ ಸ್ಥಿರಾಸ್ತಿಗಳಿವೆ. ಆಕಾಂಕ್ಷಾ ಹೆಸರಿನಲ್ಲಿ ₹ 38.19 ಲಕ್ಷ ಹಾಗೂ ಆಕಾಶ್ ಹೆಸರಿನಲ್ಲಿ ₹ 54.76 ಲಕ್ಷದ ಸ್ಥಿರಾಸ್ತಿಗಳಿವೆ.
ಬಸವರಾಜ ಮತ್ತಿಮಡು ಹೆಸರಿನಲ್ಲಿ ₹ 73.50 ಲಕ್ಷ ಮೊತ್ತದ ಚರಾಸ್ತಿ, ಪತ್ನಿಯ ಹೆಸರಲ್ಲಿ ₹ 4.48 ಲಕ್ಷ ಮೊತ್ತದ ಚರಾಸ್ತಿ ಇದೆ. ಶಾಸಕರ ಹೆಸರಿನಲ್ಲಿ 40 ಎಕರೆ, ಪತ್ನಿಯ ಹೆಸರಲ್ಲಿ 95 ಎಕರೆ, ಮಗಳ ಹೆಸರಲ್ಲಿ 25 ಎಕರೆ ಹಾಗೂ ಮಗನ ಹೆಸರಲ್ಲಿ 17 ಎಕರೆ ಜಮೀನಿದೆ.
ಜಯಶ್ರೀ ಅವರ ಹೆಸರಿನಲ್ಲಿ 1055 ಗ್ರಾಂ (ಒಂದು ಕೆ.ಜಿ.) ಚಿನ್ನಾಭರಣಗಳಿವೆ. ಬಸವರಾಜ ಮತ್ತಿಮಡು ಬಳಿ 170 ಗ್ರಾಂ ಚಿನ್ನವಿದೆ. ಶಾಸಕರ ಹೆಸರಲ್ಲಿ ₹ 39.85 ಲಕ್ಷ ಮೌಲ್ಯದ ಇನ್ನೋವಾ ಕ್ರಿಸ್ಟಾ ಕಾರಿದೆ. ಜಯಶ್ರೀ ಹೆಸರಿನಲ್ಲಿ ₹ 22 ಲಕ್ಷ ಮೌಲ್ಯದ ಫಾರ್ಚ್ಯೂನರ್ ಕಾರಿದೆ.
ಶಾಸಕರು ಗೋರಕನಾಥ, ವಿಜಯಕುಮಾರ್ ಚವ್ಹಾಣ ಎಂಬುವವರಿಂದ ಪಡೆದುದು ಸೇರಿದಂತೆ ವಿವಿಧ ಮೂಲಗಳಿಂದ ₹ 80.97 ಲಕ್ಷ ಸಾಲ ಪಡೆದಿದ್ದಾರೆ. ಜಯಶ್ರೀ ಅವರು ₹ 9 ಕೋಟಿ ಸಾಲ ಪಡೆದಿದ್ದಾರೆ. ಆಕಾಂಕ್ಷಾ ತಮ್ಮ ತಾಯಿ ಜಯಶ್ರೀ ಅವರಿಂದ ₹ 37.29 ಲಕ್ಷ, ಪುತ್ರ ಆಕಾಶ್ ₹ 1.33 ಕೋಟಿ ಸಾಲ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.