ಕಲಬುರಗಿ: ಸಾಮ್ರಾಟ ಅಮೋಘವರ್ಷ ನೃಪತುಂಗ ರಾಷ್ಟ್ರಕೂಟರ ರಾಜಧಾನಿಯನ್ನಾಗಿ ಆಳ್ವಿಕೆ ಮಾಡಿದ್ದ ಮಾನ್ಯಖೇಟ (ಈಗಿನ ಮಳೆಖೇಡ)ದಲ್ಲಿನ ಸುಮಾರು 1,200 ವರ್ಷಕ್ಕೂ ಹಿಂದಿನ ಭವ್ಯ ಕೋಟೆಯ ಕೆಲ ಭಾಗದ ಆಸ್ತಿ ‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿ’ಗೆ ಸೇರಿದೆ.
2022ರ ಫೆಬ್ರವರಿ 22ರಂದು ನೋಂದಣಿಯಾಗಿರುವ ಬಗ್ಗೆ ಇಲ್ಲಿ ಫಲಕ ಅಳವಡಿಸಲಾಗಿದೆ.
2018ರಲ್ಲಿ ನಡೆದ ರಾಷ್ಟ್ರಕೂಟ ಉತ್ಸವದ ನೆನಪಿಗಾಗಿ ಕಟ್ಟಿಸಿದ ಸ್ಮಾರಕದಿಂದ ಬಲಕ್ಕೆ ಇರುವ ಸಣ್ಣ ದಿಬ್ಬದಲ್ಲಿ ಇರುವ ಕೋಟೆಯ ಬೃಹತ್ ಗೋಡೆಯ ಮೇಲೆ, ‘ಈ ಆಸ್ತಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಸೇರಿದೆ. ಮಹಲ್ ಪ್ಯಾರಿ ಬೇಗಂ ಆಶುರ್‌ಖಾನಾ ಹಜರತ್ ಅಬ್ಬಾಸ್ (ಎ.ಎಸ್), ಗ್ರಾಮ ಮಳಖೇಡ, ತಾಲ್ಲೂಕು ಸೇಡಂ, ಜಿಲ್ಲೆ ಕಲಬುರಗಿ’ ಎಂದು ನೋಂದಣಿ ಸಂಖ್ಯೆ, ದಿನಾಂಕ ಸಹಿತ ಫಲಕ ಹಾಕಲಾಗಿದೆ.
‘ಪುರಾತನ ಕಾಲದಿಂದಲೂ ಕೋಟೆಯಲ್ಲಿ ಆಶುರ್‌ಖಾನಾಗಳಿವೆ. ಒಟ್ಟು 5 ಆಶುರ್‌ಖಾನಾಗಳಲ್ಲಿ 3 ಅಥವಾ 4 ‘ವಕ್ಪ್’ ಎಂದು ನೋಂದಣಿಯಾಗಿವೆ. ನೂರಾರು ವರ್ಷಗಳಿಂದ ಇಲ್ಲಿ ನಮ್ಮ ಮುತ್ತಜ್ಜ, ಅಜ್ಜ, ತಂದೆ, ನಾವು ವಾಸಿಸುತ್ತಿದ್ದೇವೆ’ ಎಂದು ಮುಸ್ಲಿಂ ಸಮುದಾಯದ ಮುಖಂಡ ಅಲಿಆಗಾ ಜಹಾಗೀರದಾರ ಮಾಹಿತಿ ನೀಡಿದರು.
3 ಮನೆಗಳಿವೆ. ಹತ್ತಕ್ಕಿಂತ ಹೆಚ್ಚು ಜನರಿದ್ದಾರೆ. ಅಲ್ಲೇ ಕೋಳಿ, ಹುಂಜಗಳನ್ನೂ ಸಾಕುತ್ತಿದ್ದಾರೆ. ಬೈಕ್, ಕಾರುಗಳು ಅಲ್ಲಿಯವರೆಗೂ ಸಂಚರಿಸುತ್ತವೆ.
‘ವಕ್ಫ್’ ಎಂದು ನೋಂದಣಿಯಾದ ಕೋಟೆಯ ಭಾಗವೊಂದರ ಮುಂದೆ, ಮಸೀದಿಯ ಪಕ್ಕದಲ್ಲೇ ಕಲ್ಲಿನಲ್ಲಿ ಕೆತ್ತಿದ ಗಣಪತಿ, ಬಸವನ ವಿಗ್ರಹ, ಆಕರ್ಷಕವಾಗಿ ಕೆತ್ತಿದ ಕಲ್ಲಿನ ಸಣ್ಣ ಕಂಬಗಳೂ ಇವೆ. ಕೋಟೆಯ ಮುಖ್ಯದ್ವಾರದಿಂದ ಒಳಕ್ಕೆ ಹೋಗುತ್ತಿದ್ದಂತೆ ಒಂದು, ಎಡಕ್ಕೆ ಮತ್ತೊಂದು ಮಸೀದಿ ಇದೆ. ಇವುಗಳ ಸುತ್ತ ಕೆಲ ಸಮಾಧಿಗಳೂ ಇವೆ.
‘ವಕ್ಫ್’ ಆದ ಬಗ್ಗೆ ಜನರಿಗೆ ಗೊತ್ತೇ ಇಲ್ಲ: ಕೋಟೆಯಲ್ಲಿ ಆಶುರ್‌ಖಾನಾಗಳು ವಕ್ಫ್ ಮಂಡಳಿಗೆ ಸೇರಿದ ಬಗ್ಗೆ ಮಳಖೇಡದ ಜನರಿಗೆ, ವಿದ್ಯಾರ್ಥಿಗಳಿಗಳಿಗೆ ಗೊತ್ತೇ ಇಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸೇಡಂ ಉಪವಿಭಾಗಾಧಿಕಾರಿಗೂ ಈ ಬಗ್ಗೆ ಮಾಹಿತಿ ಇಲ್ಲ.
‘ನಿಮ್ಮೂರಿನ ಕೋಟೆ ವಕ್ಫ್ ಆಸ್ತಿಯಾಗಿದೆಯಂತೆ’ ಎಂದು ಚಹಾ ಅಂಗಡಿ, ಟಿಫಿನ್ ಸೆಂಟರ್, ಬಸ್ ನಿಲ್ದಾಣಗಳಲ್ಲಿನ ಜನರು, ವಿದ್ಯಾರ್ಥಿಗಳನ್ನು ಪ್ರಶ್ನಿಸಿದಾಗ, ‘ಹೌದಾ’ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಗ್ರಾಮದ ಬಹುತೇಕ ಜನರಿಗೆ ಕೋಟೆಯ ಒಂದಷ್ಟು ಭಾಗ ‘ವಕ್ಫ್’ಗೆ ಸೇರಿದ ಬಗ್ಗೆ ಗೊತ್ತೇ ಇಲ್ಲ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ತಹಶೀಲ್ದಾರ್ ಶ್ರೀಯಾಂಕ್ ಧನಶ್ರೀ ಅವರು ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಿಲ್ಲ.
ಸೇಡಂ ತಾಲ್ಲೂಕು ಒಂದರಲ್ಲೇ ಸಾವಿರಾರು ಎಕರೆ ವಕ್ಫ್ ಆಸ್ತಿ ಇದೆ. ಕೋಟೆಯ ಭಾಗ ವಕ್ಫ್ ಆದ ಬಗ್ಗೆ ಹೇಗೆ ಗೊತ್ತಿರುತ್ತದೆ. ಅಲ್ಲಿ ಹಾಕಿರುವ ಫಲಕದ ಸತ್ಯಾಂಶದ ಬಗ್ಗೆ ಮಾಹಿತಿ ಪಡೆಯುತ್ತೇನೆಪ್ರಭುರೆಡ್ಡಿ ಉಪವಿಭಾಗಾಧಿಕಾರಿ ಸೇಡಂ
ಹಲವಾರು ವರ್ಷಗಳಿಂದ ಗ್ರಾಮ ಪಂಚಾಯಿತಿ ವತಿಯಿಂದಲೇ ಕುಡಿಯುವ ನೀರು ವಿದ್ಯುತ್ ವ್ಯವಸ್ಥೆ ಮಾಡಿಕೊಡಲಾಗಿದೆ. ಗ್ರಾಮ ಪಂಚಾಯಿತಿಗೆ ಆಸ್ತಿ ಕರ ಸೇರಿ ಇತರ ತೆರಿಗೆಗಳನ್ನು ಪಾವತಿಸುತ್ತಿದ್ದೇವೆಅಲಿಆಗಾ ಜಹಗೀರದಾರ ಮುಸ್ಲಿಂ ಸಮುದಾಯದ ಮುಖಂಡ
ಈಗ ವಕ್ಫ್ ವಿರುದ್ಧ ಇಷ್ಟು ಹೋರಾಡುತ್ತಿರುವ ಬಿಜೆಪಿ ನಾಯಕರ ಅವಧಿಯಲ್ಲೇ ಕೋಟೆಯ ಒಳಗಿನ ಪ್ರದೇಶ ವಕ್ಫ್ ಎಂದು ನೋಂದಣಿಯಾಗಿದೆ. ಅವರದ್ದು ನಕಲಿ ಹೋರಾಟಹೆಸರು ಹೇಳಲು ಇಚ್ಛಿಸದ ಗ್ರಾಮಸ್ಥ
ವಕ್ಫ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅಲ್ಲಿ ಪುರಾತನ ಕಾಲದಿಂದಲೂ ಮನೆ ಆಶುರ್‌ಖಾನಾಗಳಿವೆ. ನಮ್ಮ ಪಂಚಾಯಿತಿ ವತಿಯಿಂದ ನೀರು ವಿದ್ಯುತ್ ಸೌಲಭ್ಯ ನೀಡಲಾಗುತ್ತಿದ್ದು ಅವರು ತೆರಿಗೆ ಪಾವತಿಸುತ್ತಾರೆಚನ್ನಯ್ಯ ಪುರಾಣಿಕ ಅಧ್ಯಕ್ಷ ಗ್ರಾ.ಪಂ ಮಳಖೇಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.