ಕಲಬುರಗಿ: ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಅರಣ್ಯ ಸಚಿವ ಉಮೇಶ ಕತ್ತಿ ಅವರ ನಿಧನದ ಪ್ರಯುಕ್ತ ಬುಧವಾರ ರಾಜ್ಯದಾದ್ಯಂತ ಸರ್ಕಾರ ಅಧಿಕೃತ ಶೋಕಾಚರಣೆ ಘೋಷಿಸಿದ್ದು, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಮಾಡದಂತೆ ಸೂಚನೆ ನೀಡಿತ್ತು. ಆದರೂ, ಶಹಾಬಾದ್‌ನಲ್ಲಿ ಆಯೋಜಿಸಿದ್ದ ಗಾಯನ ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ವೇದಿಕೆ ಹಂಚಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದಕ್ಕೆ ಸ್ವಪಕ್ಷೀಯರೇ ಅಸಮಾಧಾನ ಹೊರಹಾಕಿದ್ದಾರೆ.
ಶಹಾಬಾದ್ ನಗರದ ಗಂಗಮ್ಮ ಶಾಲೆಯ ಆವರಣದಲ್ಲಿ ಬುಧವಾರ ಸಂಜೆ ಶಹಾಬಾದ್ ಅಡತ್ ಸಂಘ, ಲಕ್ಷ್ಮಿ ಗಂಜ್ ಗಣೇಶೋತ್ಸವ ಸಮಿತಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ಗಾಯಕಿ ಎಂ.ಡಿ. ಪಲ್ಲವಿ ಅವರನ್ನು ಕರೆಸಲಾಗಿತ್ತು. ಕಾರ್ಯಕ್ರಮ ಸ್ಥಳಕ್ಕೆ ಬಂದ ಬಸವರಾಜ ಮತ್ತಿಮೂಡ ಮೊದಲು ವೇದಿಕೆ ಏರಿದರು. ನಂತರ ಬಂದ ಕೆಕೆಆರ್‌ಡಿಬಿ ಅಧ್ಯಕ್ಷರೂ ಆದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ವೇದಿಕೆ ಏರಿದರು. ಸಂಘಟಕರು ಇಬ್ಬರನ್ನೂ ಸನ್ಮಾನಿಸಿದರು.
‘ನಮ್ಮದೇ ಪಕ್ಷದ ಸಚಿವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಬೆಳಗಾವಿ ಜಿಲ್ಲೆಯ ಬೆಲ್ಲದ ಬಾಗೇವಾಡಿಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಇಲ್ಲಿ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸರ್ಕಾರ ಶೋಕಾಚರಣೆ ಹೊರಡಿಸಿರುವ ಸುತ್ತೋಲೆಯ ಮಾಹಿತಿ ಇದ್ದರೂ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಬಸವರಾಜ ಮತ್ತಿಮೂಡ ಅವರು ಅಲ್ಲಿಗೆ ಏಕೆ ಹೋಗಬೇಕಿತ್ತು. ಇದರಿಂದ ಜನರಿಗೆ ನಾವು ಏನು ಸಂದೇಶ ಕೊಟ್ಟಂತಾಗುತ್ತದೆ. ಸಂಘಟಕರು ಒತ್ತಾಯ ಮಾಡಿದರೂ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಹಲವು ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯವೇನಿತ್ತು’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ ಎದುರು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಮೇಶ ಕತ್ತಿ ನಿಧನರಾದ ಪ್ರಯುಕ್ತ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.