ADVERTISEMENT

ಈಶಾನ್ಯ ಶಿಕ್ಷಕರ ವಿಧಾನ ಪರಿಷತ್‌ ಮತಕ್ಷೇತ್ರ; ಇಂದು ಅಧಿಸೂಚನೆ

ಕಾಂಗ್ರೆಸ್‌ನ ಶರಣಪ್ಪ ಮಟ್ಟೂರಗೆ ಶಿಕ್ಷಕರ ಪ್ರತಿನಿಧಿ ಆಗುವ ಉಮೇದು

ಗಣೇಶ-ಚಂದನಶಿವ
Published 1 ಅಕ್ಟೋಬರ್ 2020, 9:29 IST
Last Updated 1 ಅಕ್ಟೋಬರ್ 2020, 9:29 IST
ಶರಣಪ್ಪ ಮಟ್ಟೂರ, ಶಶೀಲ್ ಜಿ. ನಮೋಶಿ, ತಿಮ್ಮಯ್ಯ ಪುರ್ಲೆ
ಶರಣಪ್ಪ ಮಟ್ಟೂರ, ಶಶೀಲ್ ಜಿ. ನಮೋಶಿ, ತಿಮ್ಮಯ್ಯ ಪುರ್ಲೆ   
""

ಕಲಬುರ್ಗಿ:ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಘೋಷಣೆಯಾಗಿದ್ದು,ಅ.1ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದೆ.

ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ಜೂನ್30ರಂದು ನಿವೃತ್ತರಾಗಿದ್ದಾರೆ.ಸದಸ್ಯರು ನಿವೃತ್ತರಾಗುವುದಕ್ಕೂ ಮುನ್ನ ಚುನಾವಣೆ ನಡೆಸುವುದು ನಿಯಮ.ಆದರೆ,ಕೊರೊನಾ ಹಾವಳಿಯಿಂದಾಗಿ ಈ ಬಾರಿ ಚುನಾವಣೆ ಮುಂದೂಡಲಾಗಿತ್ತು.

ಹೀಗಾಗಿ ಮೂರು ತಿಂಗಳಿನಿಂದ ಈ ಕ್ಷೇತ್ರಕ್ಕೆ ಪ್ರತಿನಿಧಿಯೇ ಇಲ್ಲವಾಗಿತ್ತು.ಹೊಸ ಪ್ರತಿನಿಧಿಯ ಆಯ್ಕೆಗೆ ಈಗ ಮುಹೂರ್ತ ನಿಗದಿಯಾಗಿದೆ.

ADVERTISEMENT

ಕಾಂಗ್ರೆಸ್‌ ಪಕ್ಷ ಶರಣಪ್ಪ ಮಟ್ಟೂರ ಅವರಿಗೇ ಟಿಕೆಟ್‌ ಘೋಷಿಸಿದೆ.ಕಳೆದ ಚುನಾವಣೆಯಲ್ಲಿ ಮಟ್ಟೂರ ಅವರು ಜಯಗಳಿಸುವ ಮೂಲಕ ಈ ಕ್ಷೇತ್ರವನ್ನು ಪ್ರಥಮ ಬಾರಿಗೆ ಕಾಂಗ್ರೆಸ್‌ ತೆಕ್ಕೆಗೆ ತಂದುಕೊಟ್ಟಿದ್ದರು.

ಈ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ಶಶೀಲ್‌ ಜಿ.ನಮೋಶಿ ಅವರು ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತ.ಪಕ್ಷದ ಚುನಾವಣಾ ಸಮಿತಿ ಇವರ ಹೆಸರು ಅಂತಿಮಗೊಳಿಸಿದ್ದು,ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ‘ಎರಡು ವರ್ಷಗಳಿಂದ ಕ್ಷೇತ್ರ ಸುತ್ತುತ್ತಿದ್ದೇನೆ.ಶಿಕ್ಷಕರ ಕಷ್ಟ–ಸುಖದಲ್ಲಿ ಭಾಗಿಯಾಗಿದ್ದೇನೆ’ ಎನ್ನುತ್ತಾರೆ ಶಶೀಲ್‌. ನಿಧಾನವಾಗಿ ಚುನಾವಣೆ ಪ್ರಚಾರವನ್ನೂ ಆರಂಭಿಸಿರುವ ಶಶೀಲ್ ಅವರು, ಶಿಕ್ಷಕರ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವರ ಬಳಿ ಪ್ರಸ್ತಾಪಿಸುವ ಮೂಲಕ ಆಡಳಿತ ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ಹೆಚ್ಚು ಕೆಲಸ ಆಗಲಿದೆ ಎಂಬ ಸಂದೇಶವನ್ನು ದಾಟಿಸುತ್ತಿದ್ದಾರೆ.

ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿದ್ದ ತಿಮ್ಮಯ್ಯ ಪುರ್ಲೆ ಅವರಿಗೆ ಜೆಡಿಎಸ್‌ ಈಗಾಗಲೇ ಟಿಕೆಟ್‌ ಘೋಷಿಸಿದೆ.ತಿಮ್ಮಯ್ಯ ಅವರು ಈ ಚುನಾವಣೆಗೆ ಸ್ಪರ್ಧಿಸಲಿಕ್ಕಾಗಿಯೇ ಸ್ವಯಂ ನಿವೃತ್ತಿ ಪಡೆದಿದ್ದಾರೆ.

‘ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಬುಧವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದ್ದೇನೆ.ಗುರುವಾರ ಬಿ ಫಾರ್ಮ್‌ ನೀಡಲಿದ್ದು,ನಾಮಪತ್ರ ಸಲ್ಲಿಸುವ ದಿನಾಂಕ ಇನ್ನೂ ನಿಗದಿ ಮಾಡಿಲ್ಲ’ ಎಂದು ತಿಮ್ಮಯ್ಯ ಪ್ರತಿಕ್ರಿಯಿಸಿದರು.

‘ಪದವಿ ಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷನಾಗಿ10ವರ್ಷ ಸೇವೆ ಸಲ್ಲಿಸಿದ್ದೇನೆ.ನಮ್ಮದೇ ಆದ ತಂಡ ಇದೆ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ ಕೆಲಸಗಳು,ಜೆಡಿಎಸ್‌ ಹೋರಾಟ ನಮಗೆ ನೆರವಾಗಲಿವೆ’ ಎನ್ನುತ್ತಾರೆ ಅವರು.

ಈ ಮೂವರೂ ಅಭ್ಯರ್ಥಿ ಹೆಚ್ಚುಕಡಿಮೆ ಎರಡು ವರ್ಷಗಳಿಂದ ಕ್ಷೇತ್ರ ಸುತ್ತುತ್ತಾ ಚುನಾವಣಾ ತಯಾರಿ ನಡೆಸಿದ್ದು, ಈಗ ಅದೃಷ್ಟ ಪರೀಕ್ಷೆಯ ಕಾಲ ಕೂಡಿ ಬಂದಿದೆ.

ಕಲ್ಯಾಣ ಕರ್ನಾಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.