ಕಲಬುರಗಿ: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ ಸಜ್ಜನ ಸೇರಿದಂತೆ ಏಳು ಅಭ್ಯರ್ಥಿಗಳು ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಸೋಮವಾರ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿ ಅಂತಿಮವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಒಟ್ಟು 19 ಮಂದಿ ಉಳಿದಿದ್ದಾರೆ.
ಸ್ವತಂತ್ರ ಅಭ್ಯರ್ಥಿಗಳಾದ ಎನ್.ಶೈಲಜಾ ರೆಡ್ಡಿ, ಸತೀಶಕುಮಾರ ಅಮೃತ, ಸತೀಶಕುಮಾರ ರಾಮಮೂರ್ತಿ, ಸಾಯಿನಾಥ ನಾಗೇಶ್ವರ ಸಂಜೀವಕುಮಾರ, ಸುನೀಲಕುಮಾರ ಹೈದರಪ್ಪ, ಸುರೇಶ ದಾವೀದಪ್ಪ ಹಾಗೂ ಸುರೇಶ ಸಜ್ಜನ ಅವರು ಖುದ್ದಾಗಿ ನಾಮಪತ್ರ ಹಿಂಪಡೆಯುವಿಕೆ ಪತ್ರವನ್ನು ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರಿಗೆ ಸೋಮವಾರ ಸಲ್ಲಿಸಿದರು.
ಈ ಕ್ಷೇತ್ರದಲ್ಲಿ ಒಟ್ಟಾರೆ 29 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ ಒಟ್ಟು 26 ಅಭ್ಯರ್ಥಿಗಳ 34 ನಾಮಪತ್ರಗಳು ಕ್ರಮಬದ್ಧವಾಗಿದ್ದವು. ಮೂವರು ಉಮೇದುವಾರರ ಏಳು ನಾಮಪತ್ರ ತಿರಸ್ಕೃತವಾಗಿದ್ದವು. ನಾಮಪತ್ರಗಳನ್ನು ಹಿಂಪಡೆಯಲು ಮೇ 20 ಕೊನೆ ದಿನವಾಗಿತ್ತು.
ಅಮರನಾಥ ಪಾಟೀಲ(ಬಿಜೆಪಿ), ಚಂದ್ರಶೇಖರ ಪಾಟೀಲ (ಕಾಂಗ್ರೆಸ್), ಅನಿಮೇಶ ಮಹಾರುದ್ರಪ್ಪ, ಅಬ್ದುಲ್ ಜಬ್ಬಾರ್ ಅಬ್ದುಲ್ ರೆಹಮಾನ್ ಗೋಳಾ, ಕಾಶಿನಾಥ ಎಂ. ಸೋಮಪ್ಪ, ಗವಿಸಿದ್ದಪ್ಪ ಚಂದ್ರಶೇಖರ, ಎನ್.ಪ್ರತಾಪರೆಡ್ಡಿ ಎನ್.ಗೌರಣ್ಣ, ಪ್ರಭು ನಾರಾಯಣ, ಬಸವರಾಜ ದುರ್ಗಪ್ಪ, ಮಲ್ಲಿಕಾರ್ಜುನ ವೀರಣ್ಣ ಧುತ್ತರಗಾಂವ, ಮಹೆಬೂಬ್ ಮೊಹಮ್ಮದ್ ಖಾಜಾ ಹುಸೇನ್ ವಂಟೇಲಿ, ಮೊಹಮ್ಮದ್ ಹುಸೇನ್ ಮೊಹಮ್ಮದ್ ಅಲಿ, ರಾಜು ದೇವಪ್ಪ, ರಿಯಾಜ್ ಅಹ್ಮದ್ ನಬಿಸಾಬ್, ವಿಲಾಸ ಮಾರುತಿ, ಶರಣಬಸಪ್ಪ ಪೀರಪ್ಪ, ಶರಣಬಸಪ್ಪ ಎಸ್.ಎ.ಶ್ರೀಮಂತಪ್ಪ, ಶಶಿಧರ ಬಸವರಾಜ, ಶಿವಕುಮಾರ ಜಂಬುನಾಥ ಸ್ವಾಮಿ(ಎಲ್ಲರೂ ಪಕ್ಷೇತರರು).
ಕಲ್ಯಾಣ ಭಾಗದ ಜಿಲ್ಲೆಗಳ ವ್ಯಾಪ್ತಿಯ ಈ ಕ್ಷೇತ್ರದಲ್ಲಿ 99,121 ಪುರುಷ, 57,483 ಮಹಿಳಾ ಹಾಗೂ 19 ಇತರೆ ಸೇರಿದಂತೆ ಒಟ್ಟು 1,56,623 ಮತದಾರರಿದ್ದಾರೆ. ಜೂನ್ 3ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂನ್ 6ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.