ADVERTISEMENT

ಪರಿಷತ್ ಚುನಾವಣೆ | ‘ಸದ್ದು’ ಮಾಡದೇ ಗೆಲುವು ಸಾಧಿಸಿದ ಚಂದು ಪಾಟೀಲ

ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು ಮೂಡಿಸಿದ ಪರಿಷತ್ ಚುನಾವಣೆ ಜಯ; ತಡವಾಗಿ ಟಿಕೆಟ್ ಘೋಷಿಸಿ ಕೆಟ್ಟ ಬಿಜೆಪಿ

ಮನೋಜ ಕುಮಾರ್ ಗುದ್ದಿ
Published 8 ಜೂನ್ 2024, 6:23 IST
Last Updated 8 ಜೂನ್ 2024, 6:23 IST
ಚಂದ್ರಶೇಖರ ‍ಪಾಟೀಲ
ಚಂದ್ರಶೇಖರ ‍ಪಾಟೀಲ   

ಕಲಬುರಗಿ: ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರವಾಗಿ ಇಬ್ಬರು ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು, ಶಾಸಕರ ಅಬ್ಬರದ ಪ್ರಚಾರ, ಮತದಾರರ ಮನೆ ಮನೆಗೆ ತಲುಪಬಲ್ಲ ಕಾರ್ಯಕರ್ತರ ಬಲಿಷ್ಠ ಜಾಲವಿದ್ದರೂ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ.

ಮತ್ತೊಂದೆಡೆ ಹೆಚ್ಚು ಸದ್ದು ಮಾಡದೇ, ಅಬ್ಬರದ ಪ್ರಚಾರವೂ ಇಲ್ಲದೇ, ಗುಪ್ತಗಾಮಿನಿಯಂತೆ ಮತದಾರರನ್ನು ತಲುಪುವ ಮೂಲಕ ಕಾಂಗ್ರೆಸ್‌ನ ಚಂದ್ರಶೇಖರ (ಚಂದು) ಪಾಟೀಲ ಅವರು ಗೆಲುವಿನ ದಡ ಸೇರಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಐದೂ ಸೀಟುಗಳನ್ನು ಬಾಚಿಕೊಂಡಿರುವ ಆಡಳಿತಾರೂಢ ಕಾಂಗ್ರೆಸ್‌ಗೆ, ಈಶಾನ್ಯ ಪದವೀಧರ ಕ್ಷೇತ್ರದ ಈ ಚುನಾವಣೆಯ ಗೆಲುವು ಮತ್ತಷ್ಟು ನೆಮ್ಮದಿಯನ್ನು ಮೂಡಿಸಿದೆ.

‘ಕಳೆದ ಆರು ವರ್ಷಗಳಲ್ಲಿ ಚಂದ್ರಶೇಖರ ಪಾಟೀಲ ಅವರು ಕ್ಷೇತ್ರದಲ್ಲಿ ಸಂಚಾರ ಮಾಡಿಲ್ಲ. ಪದವೀಧರ ಮತದಾರರ ಅಳಲು ಕೇಳಿಲ್ಲ. ಅವರ ಮುಖಪರಿಚಯವೂ ಬಹುತೇಕ ಮತದಾರರಿಗಿಲ್ಲ’ ಎಂದು ಬಿಜೆಪಿ ಮುಖಂಡರು ಹಲವು ಬಹಿರಂಗ ಸಭೆಗಳಲ್ಲಿ ಟೀಕಿಸುತ್ತಲೇ ಇದ್ದರು. ಈ ಆರೋಪವನ್ನು ಒಪ್ಪಿಕೊಂಡಿದ್ದ ಚಂದ್ರಶೇಖರ ಪಾಟೀಲ ಅವರು, ‘ಎರಡು ವರ್ಷ ಕೋವಿಡ್‌ನಲ್ಲಿ ಸಮಯ ಕಳೆದು ಹೋಗಿದೆ. ಹೆಚ್ಚು ಕೆಲಸ ಮಾಡಲು ಆಗಲಿಲ್ಲ ಎಂಬ ನೋವು ನಮಗೂ ಇದೆ. ಆದರೆ, ಈ ಬಾರಿ ಚುನಾಯಿತನಾದರೆ ಮತದಾರರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವೆ. ಕ್ಷೇತ್ರ ಸಂಚಾರ ಮಾಡುವೆ’ ಎಂದು ಸ್ಪಷ್ಟಪ‍ಡಿಸಿದ್ದರು.

ADVERTISEMENT

ಈಶಾನ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸಚಿವರು, ಶಾಸಕರ ಸಂಖ್ಯೆ ಹೆಚ್ಚಾಗಿರುವುದು, ಹುಮನಾಬಾದ್‌ನ ಪಾಟೀಲ ಕುಟುಂಬದ ವರ್ಚಸ್ಸು, ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರ ಇರುವುದು, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರು ನೋಂದಾಯಿಸಿಕೊಂಡಿರುವುದು, ಟಿಕೆಟ್ ಖಚಿತವಾಗಿದ್ದರಿಂದ ವರ್ಷಗಳ ಹಿಂದೆಯೇ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿರುವುದು ಚಂದ್ರಶೇಖರ ಪಾಟೀಲ ಅವರ ಗೆಲುವಿಗೆ ಪ್ರಮುಖ ಕಾರಣಗಳು ಎಂದು ಅವರ ಆಪ್ತ ವಲಯ ಈ ಚುನಾವಣಾ ಗೆಲುವನ್ನು ವಿಶ್ಲೇಷಿಸುತ್ತದೆ.

ಅಲ್ಲದೇ, ವಿಧಾನಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರ ಸೇರಿದಂತೆ ಪರಿಷತ್ ಚುನಾವಣೆಯ ಆಳ–ಅಗಲ ಬಲ್ಲ ಕಾಂಗ್ರೆಸ್ ಮುಖಂಡರು ಜಿಲ್ಲಾ ಮಟ್ಟದಲ್ಲಿ ತಂತ್ರಗಳನ್ನು ಹೆಣೆದು ಚುನಾವಣೆ ಎದುರಿಸಿದ್ದರಿಂದಲೂ ಚಂದು ಪಾಟೀಲ ಅವರು ಹೆಚ್ಚಿನ ಮತಗಳನ್ನು ಗಳಿಸಲು ನೆರವಾಗಿದೆ ಎನ್ನಲಾಗುತ್ತಿದೆ.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ನಿಂದ ಹೆಚ್ಚು ಸಮಾವೇಶಗಳು ನಡೆದಿಲ್ಲ. ಆದರೆ, ಮತದಾರರನ್ನು ಗುರಿಯಾಗಿಸಿಕೊಂಡು ಶಾಸಕರು, ಪಾಲಿಕೆ, ನಗರಸಭೆ ಸದಸ್ಯರು, ಜಿಲ್ಲಾ ಮಟ್ಟದ ಮುಖಂಡರು, ಶಿಕ್ಷಕರ ಸಂಘಗಳ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿದ್ದರಿಂದ ಚಂದು ಪಾಟೀಲ ಅವರು ಹೆಚ್ಚಿನ ಮತಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮರನಾಥ ಪಾಟೀಲ
ಎನ್. ಪ್ರತಾಪ್ ರೆಡ್ಡಿ

ಟಿಕೆಟ್ ಘೋಷಣೆ ವಿಳಂಬ ಒಳ ಏಟು... ಪ್ರತಿ ಬಾರಿಯೂ ಸಂಘಟಿತವಾಗಿ ಚುನಾವಣೆ ಎದುರಿಸುವಲ್ಲಿ ಹೆಸರಾಗಿರುವ ಬಿಜೆಪಿಯು ಈ ಬಾರಿ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಟಿಕೆಟ್ ಘೋಷಣೆಯಲ್ಲಿ ವಿಳಂಬ ಮಾಡಿದ್ದು ಹಾಗೂ ಅತೃಪ್ತರ ಒಳ ಏಟು ಅಮರನಾಥ ಪಾಟೀಲ ಅವರ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಚುನಾವಣೆಗೆ ವರ್ಷಗಳ ಮುಂಚೆಯೇ ಕಲಬುರಗಿ ಬೀದರ್ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಬಿಜೆಪಿ ಮುಖಂಡರು ಪೂರ್ವ ತಯಾರಿ ಮಾಡಿಕೊಂಡು ಪದವೀಧರರನ್ನು ಮತದಾರರ ಪಟ್ಟಿಗೆ ಸೇರಿಸಲು ಕಚೇರಿಗಳನ್ನೇ ತೆರೆದಿದ್ದರು. ಸಾವಿರಾರು ಜನರ ನೋಂದಣಿ ಮಾಡಿಸುವಲ್ಲಿ ಯಶಸ್ವಿಯೂ ಆಗಿದ್ದರು. ಕೊನೆ ಗಳಿಗೆಯಲ್ಲಿ ಅವರನ್ನು ಬಿಟ್ಟು ಅಮರನಾಥ ಪಾಟೀಲ ಅವರಿಗೆ ಟಿಕೆಟ್ ಘೋಷಿಸಿದ್ದರಿಂದ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಮತ್ತೆ ಕೆಲವರು ತಟಸ್ಥರಾದರು ಎನ್ನಲಾಗುತ್ತಿದೆ. ಟಿಕೆಟ್ ನೀಡುವ ಕುರಿತು ಮುಂಚೆಯೇ ಅಮರನಾಥ ಪಾಟೀಲ ಅವರಿಗೆ ಅಭಯ ನೀಡಿದ್ದರೂ ಕೆಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅದಕ್ಕೆ ಅವಕಾಶವೇ ಸಿಗಲಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸೋಲೊಪ್ಪಿಕೊಳ್ಳಬೇಕಾಯಿತು ಎಂದು ಬಿಜೆಪಿ ಮುಖಂಡರು ಮಾಹಿತಿ ನೀಡಿದರು. ಪಕ್ಷೇತರ ಅಭ್ಯರ್ಥಿ ಪ್ರತಾಪ ರೆಡ್ಡಿ ಅವರು ಪಡೆದ 17616 ಪ್ರಥಮ ಪ್ರಾಶಸ್ತ್ಯದ ಮತಗಳೂ ಅಮರನಾಥ ಪಾಟೀಲ ಅವರಿಗೆ ದುಬಾರಿಯಾಯಿತು.

ಪ್ರತಾಪ್‌ ರೆಡ್ಡಿಗೆ ಮತ್ತೆ ಆಘಾತ ಕಳೆದ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಳ್ಳಾರಿಯ ಎನ್. ಪ್ರತಾಪ್ ರೆಡ್ಡಿ ಅವರು ಈ ಬಾರಿ ಗೆಲ್ಲಲೇಬೇಕು ಎಂಬ ಗುರಿ ಇಟ್ಟುಕೊಂಡು ಎರಡು–ಮೂರು ವರ್ಷಗಳಿಂದ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದರು. ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರನ್ನು ಜೊತೆಗೆ ಕರೆದುಕೊಂಡು ಕ್ಷೇತ್ರದಲ್ಲಿ ಪ್ರಚಾರ ಸಭೆಗಳನ್ನು ನಡೆಸಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಸಿಪಿಐಎಂ ಪಕ್ಷದ ಮುಖಂಡರ ಮನವೊಲಿಸಿ ತಮ್ಮನ್ನು ಬೆಂಬಲಿಸುವಂತೆ ಮಾಡಿದ್ದರು. ಹಲವು ಬಾರಿ ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ಸಂಚರಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ವ್ಯವಸ್ಥಿತ ಪ್ರಚಾರ ನಡೆಸಿದ್ದರು. ಆದರೆ 17616 ಮತಗಳನ್ನು ಪಡೆದು ಮತ ಗಳಿಕೆಯಲ್ಲಿ ಮೂರನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.