ವಾಡಿ (ಕಲಬುರಗಿ): ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್‌ನಲ್ಲಿ 15ಕ್ಕೂ ಅಧಿಕ ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪಾರಿವಾಳ ಬಿದ್ದಿದೆ ಎಂದು ಬಾಲಕನೊಬ್ಬ ಟ್ಯಾಂಕ್ ಒಳಗೆ ಇಣುಕಿ ನೋಡಿದಾಗ 40ಕ್ಕೂ ಅಧಿಕ ಮಂಗಗಳು ಒಳಗೆ ಇರುವುದು ಗಮನಿಸಿದ್ದಾನೆ. ತಕ್ಷಣ ಸ್ಥಳಕ್ಕೆ ತೆರಳಿದ ಸಾರ್ವಜನಿಕರು ಇಣುಕಿ ನೋಡಿದಾಗ ಅದರಲ್ಲಿ 15ಕ್ಕೂ ಅಧಿಕ ಮಂಗಗಳು ಸತ್ತು ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು, ಇನ್ನುಳಿದ 15ಕ್ಕೂ ಅಧಿಕ ಮಂಗಗಳು ತೀವ್ರ ನರಳಾಡುತ್ತಿದ್ದವು. ಟ್ಯಾಂಕ್ ಒಳಗೆ ಇಳಿಯಲು ಏಣಿ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಟ್ಯಾಂಕ್ ಮೇಲಿನಿಂದಲೇ ಬದುಕಿರುವ ಮಂಗಗಳಿಗೆ ನೀರು ಹಾಗೂ ಬ್ರೇಡ್ ಪೂರೈಸಿದ್ದಾರೆ. ಅದರಲ್ಲಿ ಸ್ವಲ್ಪ ಮಂಗಗಳು ಮೇಲೆ ಬಂದಿವೆ. ಇನ್ನುಳಿದ ಮಂಗಗಳು ಮೇಲೆ ಬಾರಲು ಸಾಧ್ಯವಾಗದೇ ಅಲ್ಲಿಯೇ ಮೃತಪಟ್ಟಿವೆ.
ಗ್ರಾಮದ ವಾರ್ಡ್ ನಂ 2ರಲ್ಲಿ ಇರುವ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ ಕಾರಣ ನೀರಿನ ಸರಬರಾಜು ನಿಲ್ಲಿಸಲಾಗಿತ್ತು. ಆದರೆ ಟ್ಯಾಂಕ್ ಮುಚ್ಚದೆ ಹಾಗೇ ಬಿಡಲಾಗಿತ್ತು. ಟ್ಯಾಂಕಿನ ಕಬ್ಬಿಣದ ೇಣಿಯನ್ನು ಈಚೆಗೆ ನಿರ್ಮಿಸಿರುವ ಮತ್ತೊಂದು ಟ್ಯಾಂಕಿಗೆ ಹಾಕಲಾಗಿದೆ. ಹೀಗಾಗಿ ಸಂಪೂರ್ಣ ಅಸುರಕ್ಷತೆ ಇದ್ದುದ್ದರಿಂದ ಮಂಗಗಳು ಟ್ಯಾಂಕ್ ಒಳಗಡೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ನೆರಳಾಡಿ ಸತ್ತಿವೆ. ಇಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಸಂಪೂರ್ಣ ನಿರ್ಲಕ್ಷ ವಹಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಗಳ ಶವತೆಗೆಯಲು ಹಿಂದೇಟು: ನೀರಿನ ಟ್ಯಾಂಕಿನಲ್ಲಿ ಮಂಗಗಳು ಬಿದ್ದು ಮೃತಪಟ್ಟ ಘಟನೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಮನಕ್ಕೆ ತಂದಿದ್ದರೂ ಮಂಗಗಳ ಶವ ಎರಡು ದಿನ ಕಳೆದರೂ ಮೇಲೆತ್ತಿಲ್ಲ. ಅದರಲ್ಲಿ ಕೆಲ ಮಂಗಗಳು ನರಳಾಡುವ ಸ್ಥಿತಿಯಲ್ಲಿ ಇದ್ದವು. ಸಂಬಂಧಪಟ್ಟ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಮಂಗಗಳ ಬದುಕಿಸುವ ಕಾರ್ಯ ಹಾಗೂ ಸತ್ತ ಮಂಗಗಳ ವಿಲೇವಾರಿ ಮಾಡುವ ಕಾರ್ಯ ನಿರ್ವಹಿಸದೆ ಬೇಜವಾಬ್ದಾರಿ ತೋರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಟುಕು ಜೀವ ಕೈಯಲ್ಲಿ ಹಿಡಿದುಕೊಂಡು ನರಳಾಡುತ್ತಿದ್ದ ಮಂಗಗಳ ರಕ್ಷಣೆ ಹಾಗೂ ಸತ್ತ ಮಂಗಗಳ ಮೇಲೆತ್ತುವಲ್ಲಿ ಸ್ಥಳೀಯ ಆಡಳಿತ ಎರಡು ದಿನಗಳು ಕಳೆದರೂ ವಿಳಂಬ ಮಾಡಿದ್ದು ಸಂಪೂರ್ಣ ನಿರ್ಲಕ್ಷ ವಹಿಸಿದೆ. ಇದರ ಕುರಿತು ಶುಕ್ರವಾರ ಬೆಳಿಗ್ಗೆ ಪಂಚಾಯತಿಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಗಿದೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಸ್ಥಳೀಯ ಮುಖಂಡ ಗೌತಮ ಪರತೂರಕರ ಆಕ್ರೋಶ ವ್ಯಕ್ತಪಡಿಸಿದರು.
‘ಮಂಗಗಳು ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಮೃತಪಟ್ಟಿರುವ ಸುದ್ದಿ ಗುರುವಾರ ಬೆಳಿಗ್ಗೆ ಗೊತ್ತಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಲಾಗಿತ್ತು. ಆದರೆ ಸಿಬ್ಬಂದಿ ಬರಲು ವಿಳಂಬ ಮಾಡಿದ್ದಾರೆ ಎಂದು ಹಲಕರ್ಟಿ ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ‘ಪ್ರಜಾವಾಣಿ’ಗೆ ಪ್ರತಿಕ್ರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.