ಕಲಬುರಗಿ: ಕಳೆದ ವರ್ಷ ಬರದಿಂದ ಕಂಗೆಟ್ಟಿದ್ದ ರೈತರಿಗೆ ಈ ಬಾರಿಯ ಮುಂಗಾರು ಮಳೆಯು ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪೂರ್ವ ಮುಂಗಾರಿನಲ್ಲಿಯೇ ಆರಂಭವಾದ ಮಳೆಯು ಉತ್ತಮವಾಗಿ ಸುರಿದಿದ್ದರಿಂದ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಎಲ್ಲ ಬೆಳೆಗಳು ಬಿತ್ತನೆಯಾಗಿವೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಯು ಒಟ್ಟು 8,65,885 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದೆ. ಈಗಾಗಲೇ 7,37,308 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜುಲೈ 12ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ಶೇ 85ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ತೊಗರಿ ಹಾಗೂ ಉದ್ದು ಬಿತ್ತನೆ ಕ್ಷೇತ್ರ ಶೇ 10ರಷ್ಟು ಹೆಚ್ಚಳವಾಗಿದೆ.
ಕಳೆದ ವರ್ಷ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದಿರುವುದರಿಂದ ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಕುಸಿತವಾಗಿತ್ತು. ಆದರೆ ಈ ಬಾರಿ ಸೋಯಾ, ಉದ್ದು, ಹೆಸರು, ತೊಗರಿ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಪ್ರಸಕ್ತ ಸಾಲಿನಲ್ಲಿ 5,93,050 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗುವ ಗುರಿ ಹೊಂದಲಾಗಿದ್ದು, 5,14,763 ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ. 24,250 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಗುರಿ ಹೊಂದಿದ್ದು, 24,402 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 51,500 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಹೊಂದಿದ್ದು, 39,137 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಎಣ್ಣೆ ಬೀಜಗಳ ಬಿತ್ತನೆ ಪ್ರಮಾಣ ಕುಸಿತ: ಜಿಲ್ಲೆಯಲ್ಲಿ ಸೋಯಾಬಿನ್ ಹೊರತುಪಡಿಸಿ ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಕಾರೆಳ್ಳು ಸೇರಿ ಇತರೆ ಎಣ್ಣೆ ಬೀಜಗಳ ಬಿತ್ತನೆ ಪ್ರಮಾಣ ಕುಸಿತ ಕಂಡಿದೆ. ಇಲಾಖೆಯು 42,500 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆ ಗುರಿ ಹೊಂದಿದ್ದು, 36,793 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ದಾಖಲೆ ಮಳೆ: ಜಿಲ್ಲೆಯಲ್ಲಿ ಜನವರಿ ಒಂದರಿಂದ ಜುಲೈ 13ರವರೆಗೆ 224 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಬಾರಿ 329 ಮಿ.ಮೀಟರ್ ಮಳೆ ಸುರಿದು, ಶೇ 68ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಮೇ ತಿಂಗಳಲ್ಲಿ 34 ಮಿ.ಮೀಟರ್ ವಾಡಿಕೆ ಮಳೆ ಇದ್ದು, 61 ಮಿ.ಮೀಟರ್ ಮಳೆಯಾಗಿದೆ.
ಜೂನ್ ತಿಂಗಳಲ್ಲಿ 107 ಮಿ.ಮೀಟರ್ ಮಳೆಯಾಗಬೇಕು, ಆದರೆ 161 ಮಿ.ಮೀಟರ್ ಮಳೆಯಾಗಿದೆ. ಜುಲೈ 1ರಿಂದ 13ರವರೆಗೆ 49 ಮಿ.ಮೀಟರ್ ಮಳೆಯಾಗಬೇಕು. ಆದರೆ 77 ಮಿ.ಮೀಟರ್ ಮಳೆಯಾಗಿದೆ. ವಾಸ್ತವದಲ್ಲಿ ಜೂನ್ 1ರಿಂದ ಜುಲೈ 13ರವರೆಗೆ ವಾಡಿಕೆಯಂತೆ 157 ಮಿ.ಮೀಟರ್ ಮಳೆಯಾಗಬೇಕು. ಆದರೆ 238 ಮಿ. ಮೀಟರ್ ಮಳೆ ಸುರಿದಿದೆ.
ಕೂಲಿ ಕಾರ್ಮಿಕರಿಗೆ ಭಾರಿ ಡಿಮ್ಯಾಂಡ್: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದರಿಂದ ಬಹುತೇಕ ಬಿತ್ತನೆ ಪೂರ್ಣವಾಗುತ್ತಿದೆ. ಕೆಲ ದಿನಗಳ ಕಾಲ ತುಂತುರು ಮಳೆಯಾಗಿದ್ದರಿಂದ ಜಮೀನುಗಳಲ್ಲಿ ಬೆಳೆ ಜೊತೆಗೆ ಕಳೆ ಹುಲುಸಾಗಿ ಬೆಳೆದು ನಿಂತಿದೆ.
ಬೇಗ ಜಮೀನು ಸ್ವಚ್ಛಗೊಳಿಸಿ ರಸಗೊಬ್ಬರ ನೀಡಲು ರೈತರು ಮುಂದಾಗಿದ್ದಾರೆ. ಆದರೆ ತುಂತುರು ಮಳೆ, ಕಾರ್ಮಿಕರು ಕೆಲಸಕ್ಕೆ ಸಿಗದಿರುವುದರಿಂದ ಸರಿಯಾದ ಸಮಯಕ್ಕೆ ಜಮೀನು ಸ್ವಚ್ಛಗೊಳಿಸಲಾಗುತ್ತಿಲ್ಲ. ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿದ್ದು, ಹೆಚ್ಚಿನ ಕೂಲಿ ನೀಡಿದರೂ ಸಹ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಕಳೆ ಬೇಗ ತೆಗೆಯದಿದ್ದರೆ ಇಳುವರಿ ಕುಂಠಿತವಾಗುವ ಆತಂಕ ರೈತರನ್ನು ಕಾಡುತ್ತಿದೆ.
ಇನ್ನೂ ಕೆಲವು ಕಡೆ ಬೇಗ ಬಿತ್ತನೆ ಮಾಡಿದ ಬೆಳೆಗಳು ಹೂವು ಕಟ್ಟುತ್ತಿದ್ದು, ಹೆಸರು ಮತ್ತು ಉದ್ದಿನ ಬೆಳೆಗಳಿಗೆ ಹಸಿರು ಎಲೆ ತಿನ್ನುವ ಹುಳುಗಳ ಕಾಟ ಶುರುವಾಗಿದೆ. ಬೆಳೆ ಸಂರಕ್ಷಣೆ ಮತ್ತು ಹುಳುಗಳ ಹತೋಟಿಗೆ ರೈತರು ಕೀಟನಾಶಕ ಸಿಂಪಡಣೆ ಮಾಡುತ್ತಿದ್ದಾರೆ.
ನಳನಳಿಸುತ್ತಿರುವ ಬೆಳೆ
ಆಳಂದ: ತಾಲ್ಲೂಕಿನಲ್ಲಿ ಜೂನ್ ಮೊದಲ ವಾರದಲ್ಲಿ ಮಳೆ ಸುರಿದ ಪರಿಣಾಮ ಉದ್ದು, ಹೆಸರು ಹಾಗೂ ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ತಾಲ್ಲೂಕಿನ ಖಜೂರಿ, ಆಳಂದ, ನರೋಣಾ, ನಿಂಬರ್ಗಾ ಹೋಬಳಿ ವ್ಯಾಪ್ತಿಯಲ್ಲಿ ಉದ್ದು, ಹೆಸರು, ತೊಗರಿ ಬೆಳೆ ನಳನಳಿಸುತ್ತಿವೆ. ಖಜೂರಿ ಗ್ರಾಮದ ಸುತ್ತಲೂ ರೈತರು ಜೂನ್ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದರಿಂದ ಹೆಸರು, ಉದ್ದು ಈಗ ಮೊಗ್ಗು, ಹೂವು ಬಿಡುವ ಹಂತದಲ್ಲಿ ಇವೆ.
ಮಾದನ ಹಿಪ್ಪರಗಿ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮುಂಗಾರು ಬಿತ್ತನೆ ತಡವಾಗಿದೆ. ಆದರೂ ಮುಂಗಾರು ಬಿತ್ತನೆ ಜೊತೆ ಈ ಭಾಗದಲ್ಲಿ ಕೆರೆ, ಹಳ್ಳ, ಚೆಕ್ ಡ್ಯಾಂ ಮಳೆಗೆ ಭರ್ತಿಯಾಗಿದ್ದು ತರಕಾರಿ ಬೆಳೆಗೆ ಅನುಕೂಲವಾಗಿದೆ.
ಉದ್ದು, ಹೆಸರು ಶೇ100ರಷ್ಟು ಬಿತ್ತನೆ
ಶಹಾಬಾದ್: ತಾಲ್ಲೂಕಿನಲ್ಲಿ ಮುಂಗಾರು ಮಳೆ ಚೆನ್ನಾಗಿ ಸುರಿದಿದ್ದು, ಉದ್ದು, ಹೆಸರು ನೂರರಷ್ಟು ಬಿತ್ತನೆಯಾಗಿವೆ. ತೊಗರಿ, ಹತ್ತಿ ಸೇರಿ ಒಟ್ಟು 18 ಹಳ್ಳಿಗಳ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ತಾಲ್ಲೂಕಿನಲ್ಲಿ ಜೂನ್ ಒಂದರಿಂದ ಇಲ್ಲಿಯವರೆಗೆ 209.5 ಮಿ.ಮೀಟರ್ ಮಳೆಯಾಗಿದೆ. ರೈತರು ಕಳೆ ತೆಗೆದು, ಎಡೆಕುಂಟೆ ಹೊಡಿಯುವಲ್ಲಿ ನಿರತರಾಗಿದ್ದಾರೆ.
ದಾಖಲೆ ಪ್ರಮಾಣದ ಬಿತ್ತನೆ
ಚಿತ್ತಾಪುರ: ರೈತರು ಉದ್ದು, ಹೆಸರು, ತೊಗರಿ ಬೀಜ ಸರಿಯಾಗಿ ಮೊಳಕೆಯೊಡೆದು ಬೆಳೆಗಳು ಸಮೃದ್ಧವಾಗಿ ಬೆಳೆದು ಹಸಿರಿನಿಂದ ನಳನಳಿಸುತ್ತಿವೆ.
ತಾಲ್ಲೂಕಿನಲ್ಲಿ ಉದ್ದು 3 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು, 3,650 ಹೆಕ್ಟೇರ್, ಹೆಸರು 7,500 ಹೆಕ್ಟೇರ್ ಬಿತ್ತನೆ ಗುರಿಯಿತ್ತು. 8,150 ಹೆಕ್ಟೇರ್ ಬಿತ್ತನೆಯಾಗಿದೆ. 59,025 ಹೆಕ್ಟೇರ್ ತೊಗರಿ ಬಿತ್ತನೆ ಗುರಿಯಿದ್ದು, 58 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. 8,824 ಹೆಕ್ಟೇರ್ ಹೈಬ್ರಿಡ್ ಹತ್ತಿ ಬಿತ್ತನೆಯ ಗುರಿ ಪೈಕಿ 4,850 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ.
ಜೇವರ್ಗಿ: ಸಮೃದ್ಧ ಬೆಳೆ
ಜೇವರ್ಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ 1,18,538 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
55,100 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 53,015 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. 6,515 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ. ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರೆಳ್ಳು, ಹೆಸರು, ಉದ್ದು, ಅಲಸಂದಿ, ಹುರಳಿ, ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿವೆ.
ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕ ಮಳೆಯಾಗಿರುವುದರಿಂದ ಸದ್ಯ ತೇವಾಂಶ ಕೊರತೆ ಇಲ್ಲ. ಕೀಟಬಾಧೆಯು ಕಂಡು ಬಂದಿಲ್ಲ. ಇನ್ನೂ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ.
ಮಳೆಗೆ ಕಾಯುತ್ತಿರುವ ರೈತರು
ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಉದ್ದು, ಹೆಸರು, ಅಲಸಂದಿ, ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ.
ಬಳಿಕ ದೊಡ್ಡ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಮಳೆಯ ಕೊರತೆ ಕಾಡುತ್ತಿದೆ. ಇನ್ನೊಂದು ಉತ್ತಮ ಮಳೆಯಾದರೆ ಎಲ್ಲ ಬೆಳೆಗಳು ಹೂವು ಬಿಡುವ ಹಂತಕ್ಕೆ ಬರುತ್ತವೆ. ತಾಲ್ಲೂಕಿನ ಕೆಲ ಪ್ರದೇಶ ಹೊರತು ಪಡಿಸಿ ಬಹುತೇಕ ಕಡೆ ಮಳೆಯಾಗದ ಕಾರಣ ರೈತ ಮುಗಿಲು ನೋಡುವಂತಾಗಿದೆ.
‘ಮಳೆಯ ನಿರೀಕ್ಷೆಯಲ್ಲಿ ದುಬಾರಿ ಬೀಜ, ಗೊಬ್ಬರ ಹಾಕಿ ಬಿತ್ತನೆ ಮಾಡಿದ್ದೇವೆ. ಬೆಳೆಯಲ್ಲಿ ಕಳೆ ತೆಗೆದು ಮಳೆಗಾಗಿ ಕಾಯುತ್ತಿದ್ದೇವೆ. ಮಳೆ ವಿಳಂಬವಾದರೆ ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ’ ಎನ್ನುತ್ತಾರೆ ರೈತ ಮುಖಂಡರಾದ ತಿಪ್ಪಣ್ಣ ಚಲಗೇರಿ, ಚಂದ್ರಶೇಖರ್ ಕರಜಗಿ, ಮಾಶಾಳದ ಸಂತೋಷ ಗಂಜಿ.
ಪೂರಕ ಮಾಹಿತಿ: ವೆಂಕಟೇಶ ಹರವಾಳ, ಶಿವಾನಂದ ಹಸರಗುಂಡಗಿ, ಸಂಜಯ ಪಾಟೀಲ, ನಿಂಗಣ್ಣ ಜಂಬಗಿ, ಮಲ್ಲಿಕಾರ್ಜುನ ಎಚ್. ಮಾಡಬೂಳಕರ್, ಅವಿನಾಶ ಬೋರಂಚಿ.ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ನಿಗದಿತ ದರದಲ್ಲಿ ರೈತ ಫಲಾನುಭವಿಗಳಿಗೆ ವಿತರಣೆ ಮಾಡಬೇಕು ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ರೈತ
ಅಗ್ರೋ ಕೇಂದ್ರಗಳಲ್ಲಿ ಕಳೆನಾಶಕಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಇಲಾಖೆಯಿಂದಲೇ ಕಳೆನಾಶಕ ಔಷಧಗಳನ್ನು ಕಡಿಮೆ ಬೆಲೆಗೆ ವಿತರಣೆ ಮಾಡಬೇಕುಶರಣಬಸಪ್ಪ ಮಮಶೆಟ್ಟಿ ರೈತ ಮುಖಂಡ
ಬೀಜ ರಸಗೊಬ್ಬರ ಕೊರತೆಯಾಗದಂತೆ ಎಲ್ಲ ರೈತ ಸಂಪರ್ಕ ಕೇಂದ್ರ ಹಾಗೂ ಖಾಸಗಿ ಮಳಿಗೆಗಳಲ್ಲಿ ಗುಣಮಟ್ಟದ ಬೀಜಗಳನ್ನು ದಾಸ್ತಾನು ಮಾಡಲಾಗಿದೆಅಬ್ದುಲ್ ಮಾಜೀದ್ ಸಹಾಯಕ ಕೃಷಿ ನಿರ್ದೇಶಕ ಜೇವರ್ಗಿ
ಕಳೆ ತೆಗೆಯುವ ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಮನೆಗಳಿಗೆ ಹೋಗಿ ಕರೆದು ಹೆಚ್ಚಿನ ಹಣ ಕೊಡ್ತೀವಿ ಅಂದ್ರು ಕೆಲಸಕ್ಕೆ ಜನ ಸಿಗಲಾರದಂತಹ ಪರಿಸ್ಥಿತಿ ಇದೆಶಿವಾನಂದಗೌಡ ಶಹಾಪುರೆ ಶಹಾಬಾದ್ ರೈತ
ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯಿಂದ ಯಂತ್ರೋಪಕರಣಗಳನ್ನು ನಿಗದಿತ ದರದಲ್ಲಿ ರೈತ ಫಲಾನುಭವಿಗಳಿಗೆ ವಿತರಣೆ ಮಾಡಬೇಕುಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.