ವಾಡಿ: ಬರಗಾಲ, ಬಿಸಿಲು ತಮ್ಮ ಉಗ್ರರೂಪದಲ್ಲಿ ರುದ್ರ ನರ್ತನ ಮಾಡುತ್ತಿದ್ದರೆ ತಮ್ಮ ಜಾನುವಾರುಗಳಿಗೆ ಎಲ್ಲಿಂದ ಮೇವು ಸಂಗ್ರಹಿಸಲಿ ಎನ್ನುವ ಚಿಂತೆ ರೈತನ್ನು ಕಾಡುತ್ತಿದೆ. ಹೀಗಾಗಿ ರೈತ ಸಮೂಹ ಮೇವು ಸಂಗ್ರಹಣೆಗೆ ಮುಂದಾಗಿದೆ.
ಹಿಂಗಾರು ಜೋಳ ಹಾಗೂ ಶೇಂಗಾದ ರಾಶಿ ಮುಗಿದಿದ್ದು ಹಳ್ಳಿಗಳ ರೈತರ ಜಮೀನುಗಳಲ್ಲಿ ಜೋಳದ ಕಣಿಕಿ, ಶೇಂಗಾ ಹೊಟ್ಟಿನ ಖರೀದಿ ಜೋರಾಗಿ ನಡೆಯುತ್ತಿದೆ.
ಮೇವಿಗೆ ಬೇಡಿಕೆ ಹೆಚ್ಚಾಗಿದ್ದು ಮೇವು ಉತ್ಪತ್ತಿ ಮಾಡುವ ಜೋಳ, ಶೇಂಗಾಕ್ಕೆ ಶುಕ್ರದೆಸೆ ಬಂದಿದೆ. ಹೆಸರು, ಹತ್ತಿ, ಮೆಣಸಿನಕಾಯಿಯಂತಹ ವಾಣಿಜ್ಯ ಬೆಳೆಗಳ ಮೊರೆ ಹೋಗಿರುವ ರೈತರಿಗೆ ಮೇವಿನ ಕೊರತೆ ಕಾಡುತ್ತಿದೆ. ಜೋಳದ ಕಣಿಕಿಗಾಗಿ ಹಾಗೂ ಶೇಂಗಾದ ಹೊಟ್ಟಿಗಾಗಿ ಜಮೀನುಗಳಿಗಾಗಿ ಎಡತಾಕುತ್ತಿದ್ದು ಮೇವಿ ಬೇಡಿಕೆ ಹೆಚ್ಚಿಸಿಕೊಂಡಿದೆ.
ದಿನದಿಂದ ದಿನಕ್ಕೆ ಬಿಸಿಲು ಏರುತ್ತಿದೆ. ನೀರಿನ ಅಭಾವದ ಜತೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕದ ಹಿನ್ನೆಲೆಯಲ್ಲಿ ಮೇವು ಸಂಗ್ರಹಣೆ ಭರದಿಂದ ನಡೆದಿದೆ. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಮೇವಿನ ಬೆಲೆಯೂ ಗಗನಕ್ಕೇರಿದೆ.
ಜೋಳದ ಕಣಿಕಿ ಪ್ರತಿ ಟ್ರ್ಯಾಕ್ಟರ್‌ಗೆ ₹5–6 ಸಾವಿರಕ್ಕೆ ಖರೀದಿಯಾಗುತ್ತಿದ್ದರೆ ಶೇಂಗಾದ ಹೊಟ್ಟಿನ ಬೆಲೆ ₹12 –13 ಸಾವಿರ ಇದೆ.
ಕಳೆದ ವರ್ಷ ಟ್ರ್ಯಾಕ್ಟರ್‌ಗೆ ₹10 ಸಾವಿರ ಆಸುಪಾಸಿನಲ್ಲಿದ್ದ ಕಣಿಕಿ ಬೆಲೆ ಈ ವರ್ಷ ಕೊಂಚ ಇಳಿದಿದ್ದರೆ ಶೇಂಗಾದ ಹೊಟ್ಟಿಗೆ ಬಂಗಾರದ ಬೆಲೆ ಬಂದಿದೆ.
ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಿಂದ ಚಿತ್ತಾಪುರ ತಾಲ್ಲೂಕಿಗೆ ಲಗ್ಗೆ ಇಟ್ಟಿರುವ ರೈತರು ತಮ್ಮ ಜಾನುವಾರುಗಳಿಗಾಗಿ ದುಬಾರಿ ದರ ಆದರೂ ಸರಿ ಖರೀದಿಸಿ ತೆಗೆದುಕೊಂಡು ಹೋಗುತ್ತಿರುವುದು ಕಂಡು ಬರುತ್ತಿದೆ.
4.5 ಎಕರೆಯಲ್ಲಿ ಬೆಳೆದಿದ್ದ ಜೋಳದ ಕಣಿಕಿಯನ್ನು ₹36 ಸಾವಿರಕ್ಕೆ ಮಾರಾಟ ಮಾಡಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಧಾರಣೆ ಕಡಿಮೆ ಇದೆ.–ಮಲ್ಲು ಜೀವಣಗಿ, ಹಲಕರ್ಟಿ ರೈತ
ನಾವು ಮೆಣಸಿನಕಾಯಿ ಹತ್ತಿ ಬೆಳೆ ಬಿತ್ತಿದ್ದರಿಂದ ಮೇವಿನ ಕೊರತೆ ಎದುರಾಗಿದೆ. ಹೀಗಾಗಿ ಮೇವಿಗಾಗಿ ತಿರುಗುತ್ತಿದ್ದು ಬೆಲೆ ಹೆಚ್ಚಾದರೂ ಖರೀದಿ ಮಾಡುತ್ತಿದ್ದೇವೆ.–ಮಲ್ಲಿಕಾರ್ಜುನ ಹೊನ್ನಾಳ, ಗ್ರಾಮದ ರೈತ
ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಉಚಿತ ಮೇವು ವಿತರಿಸುವುದರ ಜತೆಗೆ ಮೇವು ಬೆಳೆಗೆ ಉತ್ತೇಜನ ನೀಡಬೇಕು–ಮಹೇಶ ಎಸ್.ಬಿ, ಜಿಲ್ಲಾ ಕಾರ್ಯದರ್ಶಿ ಎಐಕೆಕೆಎಂಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.