ಕಲಬುರಗಿ: ಕಟ್ಟಡ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಕಾರ್ಡ್ ಪಡೆದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸೌಲಭ್ಯ ದೋಚುತ್ತಿದ್ದ ನಕಲಿ ಕಾರ್ಮಿಕರ ವಿರುದ್ಧದ ಕಾರ್ಯಾಚರಣೆಯನ್ನು ಕಾರ್ಮಿಕ ಇಲಾಖೆ ಚುರುಕುಗೊಳಿಸಿದೆ. ಕಲಬುರಗಿ ಪ್ರಾದೇಶಿಕ ವಿಭಾಗದ ಜಿಲ್ಲೆಗಳಲ್ಲಿ ಕಳೆದೊಂದು ವರ್ಷದಲ್ಲಿ ಒಟ್ಟು 57,840 ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ.
ಕಾರ್ಮಿಕ ಇಲಾಖೆಯ ಕಲಬುರಗಿ ಪ್ರಾದೇಶಿಕ ವಿಭಾಗವು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಜೊತೆಗೆ ಚಿತ್ರದುರ್ಗ, ದಾವಣಗೆರೆ ಸೇರಿ ಒಂಬತ್ತು ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಈ ಪೈಕಿ ಬೀದರ್ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 32,325 ಕಾರ್ಡ್‌ಗಳು ಹಾಗೂ ರಾಯಚೂರು ಜಿಲ್ಲೆಯಲ್ಲಿ ಕನಿಷ್ಠ ಅಂದರೆ 828 ಬೋಗಸ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ಐದು ಕಾರ್ಮಿಕ ವೃತ್ತಗಳಿದ್ದು, ಒಟ್ಟಾರೆ 2,890 ಬೋಗಸ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ.
ಚಿತ್ತಾಪುರ, ಶಹಾಬಾದ್ ಹಾಗೂ ಕಾಳಗಿ ತಾಲ್ಲೂಕು ಒಳಗೊಂಡ ಚಿತ್ತಾಪುರ ವೃತ್ತದಲ್ಲಿ 234 ಕಾರ್ಡ್, ಸೇಡಂ ಹಾಗೂ ಚಿಂಚೋಳಿ ತಾಲ್ಲೂಕು ವ್ಯಾಪ್ತಿ ಒಳಗೊಂಡ ಸೇಡಂ ವೃತ್ತದಲ್ಲಿ 100 ಕಾರ್ಡ್, ಭಾಗಶಃ ಕಲಬುರಗಿ ತಾಲ್ಲೂಕು, ಕಮಲಾಪುರ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–1(ಹಿರಿಯ ಕಾರ್ಮಿಕ ನಿರೀಕ್ಷಕ) ವೃತ್ತದಲ್ಲಿ 629, ಭಾಗಶಃ ಕಲಬುರಗಿ ತಾಲ್ಲೂಕು, ಆಳಂದ ತಾಲ್ಲೂಕು ಹಾಗೂ ಅಫಜಲಪುರ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–2 ವೃತ್ತದಲ್ಲಿ 675 ಮತ್ತು ಭಾಗಶಃ ಕಲಬುರಗಿ ತಾಲ್ಲೂಕು, ಜೇವರ್ಗಿ ತಾಲ್ಲೂಕು ಹಾಗೂ ಯಡ್ರಾಮಿ ತಾಲ್ಲೂಕು ವ್ಯಾಪ್ತಿ ಒಳಗೊಂಡ ಎಸ್‌ಎಲ್‌ಐ–3 ವೃತ್ತದಲ್ಲಿ 1,252 ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈ ಹಿಂದೆಲ್ಲ ಕಾರ್ಮಿಕ ಕಾರ್ಡ್ ಮಾಡಿಸಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈಗ ಅದಕ್ಕಾಗಿ ಇಲಾಖೆಯದ್ದೇ ಸಾಫ್ಟ್‌ವೇರ್ ಇದೆ. ಅದರ ಮೂಲಕವೇ ನೋಂದಣಿ, ಕಾರ್ಡ್‌ಗಳ ನವೀಕರಣ ನಡೆಸಲಾಗುತ್ತಿದೆ. ಸುಳ್ಳು ಮಾಹಿತಿ ನೀಡಿದ್ದರೆ ನಮ್ಮಲ್ಲಿರುವ ದತ್ತಾಂಶದಿಂದ ಪತ್ತೆಹಚ್ಚಿ ಅರ್ಜಿ ರದ್ದುಪಡಿಸಲಾಗುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯಲ್ಲಿ ಸಾವಿರಾರು ನಕಲಿ ಕಟ್ಟಡ ಕಾರ್ಮಿಕರು ಕಾರ್ಡ್‌ಗಳ ನವೀಕರಣದಿಂದ ದೂರವೇ ಉಳಿದಿದ್ದಾರೆ’ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏನೆಲ್ಲ ಸೌಲಭ್ಯ?:
ಕಾರ್ಮಿಕ ಕಾರ್ಡ್ ಹೊಂದಿದವರಿಗೆ ವಯೊನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ ಸೌಲಭ್ಯ, ವಿವಿಧ ಶೈಕ್ಷಣಿಕ ಸಹಾಯಧನ ಸೌಲಭ್ಯ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚದಂಥ 15 ಬಗೆಯ ಸೌಲಭ್ಯಗಳನ್ನು ಕಾರ್ಮಿಕ ಮಂಡಳಿ ನೀಡುತ್ತಿದೆ.
‘ಎರಡು ಬಗೆಯಲ್ಲಿ ರದ್ದು’
‘ಬೋಗಸ್ ಕಾರ್ಡ್ ಪತ್ತೆಗೆ ಎರಡು ಬಗೆಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಒಂದೆಡೆ ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದಾಗ ಕಾರ್ಡ್ ನವೀಕರಣದ ವೇಳೆ ಇಲಾಖೆಯಿಂದ ಕಟ್ಟುನಿಟ್ಟಾಗಿ ಪರಿಶೀಲಿಸಿ ಕಾರ್ಮಿಕ ಕಾರ್ಡ್ ವಿತರಣೆ ನವೀಕರಣ ನಡೆಯುತ್ತಿದೆ. ಮತ್ತೊಂದೆಡೆ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಿದ ವೇಳೆ ಪೂರ್ವಾಪರ ತಪಾಸಣೆ ನಡೆಸಿ ನೈಜ ಕಾರ್ಮಿಕರಿಲ್ಲದಿದ್ದರೆ ಕಾರ್ಡ್ ರದ್ದುಪಡಿಸಲಾಗುತ್ತಿದೆ’ ಎಂದು ಕಾರ್ಮಿಕ ಇಲಾಖೆಯ ಕಲಬುರಗಿ ಪ್ರಾದೇಶಿಕ ಕಚೇರಿ ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಕಾರ್ಮಿಕ ಕಾರ್ಡ್‌ಗೆ ಯಾರು ಅರ್ಹರು?
‘ಕಟ್ಟಡಗಳ ನಿರ್ಮಾಣ ಸಂಬಂಧಿತ 57 ಬಗೆ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರು. ಪ್ರತಿ ವರ್ಷ ಕಾರ್ಡ್ ನವೀಕರಣ ಕಡ್ಡಾಯ.ಇಲ್ಲದಿದ್ದರೆ ಕಾರ್ಡ್ ರದ್ದಾಗುತ್ತದೆ. ವರ್ಷದಲ್ಲಿ ಕನಿಷ್ಠ 90 ದಿನಗಳಾದೂ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರೆ ಮಾತ್ರವೇ ಕಾರ್ಡ್ ನವೀಕರಣವಾಗುತ್ತದೆ’ ಎಂದು ಕಲಬುರಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್.ಹಳೆಮನಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.