ಕಲಬುರ್ಗಿ: ಜಿಲ್ಲೆಯ ಕೊರೊನಾ ರೋಗಿಗಳಿಗೆ ರೆಮ್ ಡಿಸಿವಿರ್ ಇಂಜೆಕ್ಷನ್ ಅಭಾವ ತೀವ್ರವಾಗಿದ್ದನ್ನು ಗಮನಿಸಿದ ಸಂಸದ ಡಾ.ಉಮೇಶ ಜಾಧವ ಸ್ವತಃ ಬೆಂಗಳೂರಿನ ಔಷಧ ನಿಯಂತ್ರಕರ ಕಚೇರಿಯ ವಾರ್ ರೂಮ್ ಗೆ ತೆರಳಿ ಇಂಜೆಕ್ಷನ್ ಪಡೆದುಕೊಂಡು ವಿಮಾನದ ಮೂಲಕ ಸ್ವತಃ ಇಂದು ಬೆಳಿಗ್ಗೆ ತಂದಿದ್ದಾರೆ.
ಇದರಿಂದಾಗಿ ತುರ್ತು ಅಗತ್ಯವಿದ್ದ ಇಂಜೆಕ್ಷನ್ ರೋಗಿಗಳಿಗೆ ತುರ್ತಾಗಿ ದೊರೆಯುವಂತಾಗಿದೆ.
ಜಿಲ್ಲೆಯಲ್ಲಿ ರೆಮ್ ಡಿಸಿವಿರ್ ಇಂಜೆಕ್ಷನ್ ದಾಸ್ತಾನು ಖಾಲಿಯಾಗಿದ್ದನ್ನು ಸಹಾಯಕ ಔಷಧ ನಿಯಂತ್ರಕ ಗೋಪಾಲ ಭಂಡಾರಿ ಸಂಸದರ ಗಮನಕ್ಕೆ ತಂದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಡಾ. ಜಾಧವ ಜಿಲ್ಲಾಡಳಿತವನ್ನು ನೆಚ್ಚಿಕೊಳ್ಳುವ ಬದಲು ತಾವೇ ಬೆಂಗಳೂರಿನ ಕೋವಿಡ್ ವಾರ್ ರೂಮ್ ಗೆ ಮಂಗಳವಾರ ರಾತ್ರಿ ಭೇಟಿ ನೀಡಿ ಅಧಿಕಾರಿಗಳಿಗೆ ಪರಿಸ್ಥಿತಿಯ ಗಂಭೀರತೆ ಮನವರಿಕೆ ಮಾಡಿಕೊಟ್ಟರು. ತಕ್ಷಣ ಜಿಲ್ಲೆಗೆ 350 ವಯಲ್ಸ್ ರೆಮ್ ಡಿಸಿವಿರ್ ಇಂಜೆಕ್ಷನ್ ಮಂಜೂರು ಮಾಡಿಸಿಕೊಂಡರು. ಅದನ್ನು ಬುಧವಾರ ಕಳಿಸಿದ್ದರೆ ಗುರುವಾರ (ಏಪ್ರಿಲ್ 29) ತಲುಪುವ ಸಾಧ್ಯತೆ ಇತ್ತು. ಆದರೆ ತುರ್ತಾಗಿ ಹಲವು ರೋಗಿಗಳಿಗೆ ಕೊಡಬೇಕಿರುವುದರಿಂದ ಇಂಜೆಕ್ಷನ್ ಗಳನ್ನು ತಮ್ಮ ಕಾರಿನಲ್ಲಿ ದಾಸ್ತಾನು ಮಾಡಿಕೊಂಡು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕಲಬುರ್ಗಿಗೆ ವಿಮಾನದ ಮೂಲಕ ತಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.