ADVERTISEMENT

ತಾಯಿಯನ್ನು ಕೊಲೆ ಮಾಡಿದ ಮಗನ ಬಂಧನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:44 IST
Last Updated 20 ಅಕ್ಟೋಬರ್ 2024, 7:44 IST

ಚಿತ್ತಾಪುರ: ತಾಲ್ಲೂಕಿನ ರಾಜೋಳಾ ಗ್ರಾಮದಲ್ಲಿ ಊರಿಗೆ ಹೋಗಿದ್ದಕ್ಕೆ ಆಕ್ರೋಶಗೊಂಡು ಮಗ ತಾಯಿಯನ್ನು ಕೊಲೆ ಮಾಡಿದ ಘಟನೆ ಶನಿವಾರ ನಡೆದಿದೆ.

ದೇವಕಮ್ಮ ದೊಡ್ಡಬೀರಪ್ಪ ಪೂಜಾರಿ (72) ಕೊಲೆಯಾದವರು. ಜಟ್ಟೆಪ್ಪ ದೊಡ್ಡಬೀರಪ್ಪ ಪೂಜಾರಿ (34) ಕೊಲೆ ಆರೋಪಿ.

ಚಿತ್ತಾಪುರ ಪಿಎಸ್ಐ ಚಂದ್ರಾಮಪ್ಪ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

‘ದೇವಕಮ್ಮ ಅವರು ನಾಲ್ಕೈದು ದಿನಗಳ ಹಿಂದೆ ತಾಲ್ಲೂಕಿನ ಲಕ್ಷ್ಮಿಪುರವಾಡಿ ಗ್ರಾಮಕ್ಕೆ ಹೋಗಿ ಶನಿವಾರ ಬೆಳಿಗ್ಗೆ ರಾಜೋಳಾ ಗ್ರಾಮಕ್ಕೆ ಬಂದಿದ್ದರು. ಊರಿಗೆ ಏಕೆ ಹೋಗಿದ್ದು?, ನನ್ನ ಹೊಟ್ಟೆ ಬಟ್ಟೆ ಯಾರು ನೋಡಬೇಕು? ಎಂದು ಜಟ್ಟೆಪ್ಪ ತಾಯಿಯೊಂದಿಗೆ ಜಗಳ ಮಾಡಿ, ಕಟ್ಟಿಗೆಯಿಂದ ಹೊಡೆದಿದ್ದಾನೆ. ಭಯದಿಂದ ದೇವಕಮ್ಮ ಅವರು ಮನೆಯಿಂದ ಹೊರಗೆ ಓಡಿ ಹೋಗುವಾಗ ಮನೆ ಹತ್ತಿರ ಕೆಸರಿನಲ್ಲಿ ಬಿದ್ದಿದ್ದಾರೆ. ಮತ್ತೆ ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಜಟ್ಟೆಪ್ಪಗೆ 12 ವರ್ಷಗಳ ಹಿಂದೆ ಹಂದರಕಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಜಟ್ಟೆಪ್ಪನ ಕಿರುಕುಳ ತಾಳದೆ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿನಲ್ಲೇ ಉಳಿದಿದ್ದಾರೆ. ತಾಯಿ ಮತ್ತು ಮಗ ಮಾತ್ರ ಮನೆಯಲ್ಲಿ ವಾಸ ಮಾಡುತ್ತಿದ್ದರು. ತಾಯಿಯೇ ಮಗನಿಗೆ ಅಡುಗೆ ಮಾಡುವುದು, ಬಟ್ಟೆ ತೊಳೆಯುವುದು ಮಾಡುತ್ತಿದ್ದರು’ ಎಂದು ಶಹಾಬಾದ್ ಡಿವೈಎಸ್‌ಪಿ ಶಂಕರಗೌಡ ಪಾಟೀಲ ತಿಳಿಸಿದರು.

ಮೃತ ದೇಹದ ಶವಪರೀಕ್ಷೆ ಮಾಡಿಸಲಾಗಿದೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.