ADVERTISEMENT

ಕಲಬುರಗಿ | ಮಹಿಳೆ ಅಪಹರಿಸಿ ಕೊಂದು ಶವ ಸುಟ್ಟರು: ಪತಿ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 5:19 IST
Last Updated 6 ನವೆಂಬರ್ 2024, 5:19 IST
ಮಂಜುನಾಥ
ಮಂಜುನಾಥ   

ಕಲಬುರಗಿ: ಕೌಟುಂಬಿಕ ಕಲಹದಿಂದ ದೂರವಾಗಿದ್ದ ಗಂಡನ ವಿರುದ್ಧ ಪದೇ ಪದೇ ದೂರು ದಾಖಲಿಸುತ್ತಿದ್ದ ಮಹಿಳೆಯನ್ನು ಅಪಹರಿಸಿ ಕೊಲೆ ಮಾಡಿ, ಶವ ಸುಟ್ಟು ಹಾಕಿದ್ದ ಪತಿ ಸೇರಿ ಮೂವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಅಕ್ಟೋಬರ್ 31ರ ಸಂಜೆ 6ರ ಸುಮಾರಿಗೆ ತಾಲ್ಲೂಕಿನ ಇಟಗಾ (ಕೆ) ಗ್ರಾಮದ ಹೊಲದಲ್ಲಿ ಅಪರಿಚಿತ ಮಹಿಳೆಯ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಹಾಗೂ ಸಾಕ್ಷಿ ನಾಶ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಫರಹತಾಬಾದ್ ಠಾಣೆಯ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾದ ಸಾಕ್ಷಿ ಸುಳಿವಿನಿಂದ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಖಣದಾಳ ಗ್ರಾಮದ, ಪತಿ ಮಂಜುನಾಥ ವೀರಣ್ಣನಿಂದ ದೂರವಾಗಿ ನಗರದ ಸಂಗಮೇಶ್ವರ ಕಾಲೊನಿಯಲ್ಲಿ ವಾಸವಾಗಿದ್ದ ಜ್ಯೋತಿ ಮಂಜುನಾಥ (30) ಕೊಲೆಯಾದವರು. ಕೊಲೆ ಆರೋಪದಲ್ಲಿ ಆಕೆಯ ಪತಿ ಮಂಜುನಾಥ ವೀರಣ್ಣ (41), ಮೈದುನ ಪ್ರಶಾಂತ ವೀರಣ್ಣ (35) ಹಾಗೂ ಮಂಜುನಾಥ ಸ್ನೇಹಿತ ವಿಜಯಕುಮಾರ ಬೆಣ್ಣೂರ (27) ಬಂಧಿತ ಆರೋಪಿಗಳು. ಈ ಮೂವರು ಟ್ರ್ಯಾಕ್ಟರ್ ಚಾಲಕರಾಗಿದ್ದಾರೆ. ಪೊಲೀಸರ ವಶದಲ್ಲಿರುವ ಈ ಮೂವರ ವಿಚಾರಣೆ ನಡೆಯುತ್ತಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘2014ರಲ್ಲಿ ಮದುವೆಯಾದ ಮಂಜುನಾಥ–ಜ್ಯೋತಿ ದಂಪತಿಗೆ 10 ವರ್ಷದ ಮಗ ಇದ್ದಾನೆ. ನಾಲ್ಕೈದು ವರ್ಷಗಳ ಹಿಂದೆ ಕುಟುಂಬ ಕಲಹದಿಂದ ದಂಪತಿ ದೂರಾಗಿದ್ದರು. ಹಲ್ಲೆ, ಮಗನ ವಶಕ್ಕೆ ಪಡೆಯಲು ಕೋರ್ಟ್‌ ಮೊರೆ, ಮಾಸಿಕ ಜೀವನಾಂಶ ಸೇರಿದಂತೆ ಇತರೆ ಪ್ರಕರಣಗಳ ಸಂಬಂಧ ಪತಿ ವಿರುದ್ಧ ಜ್ಯೋತಿ ಅವರು ದೂರುಗಳನ್ನು ದಾಖಲಿಸಿದ್ದರು. ಮಾಸಿಕ ₹8 ಸಾವಿರ ಜೀವನಾಂಶ ಸಾಲುವುದಿಲ್ಲ ಎಂದು ಹೈಕೋರ್ಟ್‌ ಮೊರೆ ಸಹ ಹೋಗಿದ್ದರು’ ಎಂದರು.

‘ಪೊಲೀಸ್ ಠಾಣೆಯಲ್ಲಿ ಪದೇ ಪದೇ ಪ್ರಕರಣ ದಾಖಲಿಸಿದ್ದರಿಂದ ಮಂಜುನಾಥಗೆ ಬೇಸರವಾಗಿತ್ತು. ನಿತ್ಯದ ಕೆಲಸವನ್ನು ಸರಿಯಾಗಿ ಮಾಡಲು ಆಗುತ್ತಿರಲಿಲ್ಲ. ಇದರಿಂದ ಕೋಪಗೊಂಡು 20 ದಿನಗಳ ಹಿಂದೆಯೇ ಕೊಲೆಗೆ ಸಂಚು ಮಾಡಿದ್ದರು. ಕೊಲೆ ಮಾಡುವ ಎರಡ್ಮೂರು ದಿನಗಳ ಹಿಂದೆ ಜ್ಯೋತಿ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು. ಅ.31ರಂದು ಕೊಲೆ ಮಾಡಿ ಪರಾರಿಯಾಗಿದ್ದರು’ ಎಂದು ಮಾಹಿತಿ ನೀಡಿದರು.

ಫರತಾಬಾದ್ ಠಾಣೆಯ ಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಎಎಸ್‌ಐ ವಿಜಯಕುಮಾರ, ಸಿಬ್ಬಂದಿ ಮೆಹಬೂಬ್, ಸಾಜೀದ್ ಪಾಶಾ, ಕಲ್ಯಾಣ ಕುಮಾರ, ಆನಂದ, ರಾಜಕುಮಾರ ಹಾಗೂ ವಿವಿ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್ ಚನ್ನವೀರ ಅವರಿದ್ದ ತಂಡ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲಾ ಉಪಸ್ಥಿತರಿದ್ದರು.

ಕಾರಲ್ಲಿ ಉಸಿರುಗಟ್ಟಿಸಿ ಕೊಲೆ

‘ಅ.31ರಂದು ಈ ಮೂವರು ಆರೋಪಿಗಳು ಜ್ಯೋತಿಯನ್ನು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದರು. ಕಾರಿನಲ್ಲಿಯೇ ಉಸಿರುಗಟ್ಟಿಸಿ ಸಾಯಿಸಿದ್ದರು. ಆ ಬಳಿಕ ಇಟಗಾ (ಕೆ) ಗ್ರಾಮದ ನಿರ್ಜನ ಪ್ರದೇಶದಲ್ಲಿ ಶವ ಎಸೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟರು. ಕೃತ್ಯಕ್ಕೆ ಬಳಸಿದ್ದ ಕಾರನ್ನು ಬೇರೆಯವರಿಗೆ ಕೊಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ತಿಳಿಸಿದರು.

‘ಮಹಾರಾಷ್ಟ್ರದ ಸೋಲಾಪುರ ಪುಣೆ ಕೊಲ್ಹಾಪುರದ ಮೂಲಕ ಸಾಗಿ ರತ್ನಗಿರಿ ಜಿಲ್ಲೆಯ ಗಣಪತಿಪುಳೆ ಬೀಚ್‌ ಸಮೀಪದ ಲಾಡ್ಜ್‌ವೊಂದರಲ್ಲಿ ಆರೋಪಿಗಳು ತಂಗಿದ್ದರು. ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ’ ಎಂದರು.

ಪ್ರಶಾಂತ ವೀರಣ್ಣ
ವಿಜಯಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.