ಕಲಬುರಗಿ: ಏಳು ತಿಂಗಳ ಗರ್ಭಿಣಿಗೆ ವರದಕ್ಷಿಣೆ ಹಣ ತರುವಂತೆ ಪೀಡಿಸಿ, ಮಾನಸಿಕ ಮತ್ತು ದೈಹಿಕ ಹಿಂದೆ ನೀಡಿ ಕೊನೆಗೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗರ್ಭಿಣಿಯ ಪೋಷಕರು ಆರು ಮಂದಿ ವಿರುದ್ಧ ತಡವಾಗಿ ದೂರು ದಾಖಲಿಸಿದ್ದಾರೆ.
ಆಳಂದ ಪಟ್ಟಣದ ನ್ಯೂ ಅನ್ಸಾರಿ ಮೊಹಲ್ಲಾದ ಅಹಮದಿ ಬೇಗಂ ಮೆಹಬೂಬ್ ಸಾಬ್ (20) ಕಳೆದ ಜೂನ್ 22ರಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಆಕೆಯ ಗಂಡನ ಕುಟುಂಬಸ್ಥರ ಜೀವ ಬೆದರಿಕೆಗೆ ಹೆದರಿ, ತಡವಾಗಿ ಬಂದು ಪ್ರಕರಣ ದಾಖಲಿಸುತ್ತಿರುವುದಾಗಿ ಅಹಮದಿ ಅವರ ಪೋಷಕರು ಹೇಳಿದ್ದಾರೆ.
ಕೊಲೆ ಆರೋಪದಡಿ ಮೆಹಬೂಬ್ ಜಬ್ಬಾರ್ (27), ಮಶಾಕ್ ಜಬ್ಬಾರ್ (63), ಹುಸೇನ್ ಅನ್ಸಾರಿ (23), ಸಲ್ಮಾ ಶಾದ್ ಬೇಗಂ (38), ಅಬೀದಾ ಬೇಗಂ ನಿಜಾಮ್ (35) ಮತ್ತು ನೌಶಾದ್ ಬೇಗಂ ಯೂಸೂಫ್ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓಲ್ಡ್ ಅನ್ಸಾರಿ ಮೊಹಲ್ಲಾದ ಆರೇಜಾ ಮತ್ತು ಮುನಾವರ್ ದಂಪತಿ ತಮ್ಮ ಪುತ್ರಿ ಅಹಮದಿ ಅವರನ್ನು ಮೆಗ ಸಾಬ್‌ಗೆ ಕೊಟ್ಟು ಕಳೆದ ವರ್ಷ ಮದುವೆ ಮಾಡಿದ್ದರು. ಮದುವೆಯಲ್ಲಿ ವರನಿಗೆ 5 ತೊಲೆ ಚಿನ್ನ, ₹ 2 ಲಕ್ಷ ನಗದು ಹಾಗೂ ₹ 2 ಲಕ್ಷ ಮೌಲ್ಯದ ಗೃಹ ಬಳಕೆಯ ವಸ್ತುಗಳನ್ನು ನೀಡಿದ್ದರು. ಕೆಲವು ದಿನಗಳ ಬಳಿಕ ವರದಕ್ಷಿಣೆ ತಂದುಕೊಡುವಂತೆ ಗಂಡನ ಮನೆಯವರು ಮಾನಸಿಕ, ದೈಹಿಕ ಕಿರುಕುಳ ಕೊಡಲು ಶುರು ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಡತನದಲ್ಲಿ ಕಷ್ಟಪಟ್ಟು ಮದುವೆ ಮಾಡಿದ್ದೇವೆ. ಮತ್ತೆ ವರದಕ್ಷಿಣೆ ಎಲ್ಲಿಂದ ತರಬೇಕು. ಮಗಳಿಗೆ ಕಿರುಕುಳ ಕೊಡಬೇಡಿ ಎಂದು ಮಹೆಬೂಬ್ ಕುಟುಂಬಸ್ಥರಿಗೆ ಮನೆ ಮಾಡಿ, ಮಗಳಿಗೂ ಅನುಸರಿಸಿಕೊಂಡು ಹೋಗುವಂತೆ ತಿಳಿ ಹೇಳಿದ್ದೆವು. ಜೂನ್ 22ರಂದು ನೆರೆ ಮನೆಯವರು ಮಗಳು ಮೃತಪಟ್ಟ ಬಗ್ಗೆ ತಿಳಿಸಿದ್ದರು. ಗಂಡನ ಮನೆಗೆ ಬಂದು ನೋಡಿದಾಗ ಮಗಳು ಶವವಾಗಿ ಬಿದ್ದಿದ್ದಳು. ಕತ್ತಿನ ಭಾಗದಲ್ಲಿ ರಕ್ತದ ಕಲೆಗಳಿದ್ದು, ಗಾಯಗಳು ಸಹ ಆಗಿದ್ದವು. ಮಹೆಬೂಬ್ ಕುಟುಂಬಸ್ಥರು ನಮಗೆ ಜೀವ ಬೆದರಿಕೆ ಹಾಕಿ, ತರಾತುರಿಯಲ್ಲಿ ಶವ ಸಂಸ್ಕಾರ ಮಾಡಿದ್ದಾರೆ ಎಂದು ಗರ್ಭಿಣಿ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಹೂತ ಶವವನ್ನು ಹೊರ ತೆಗೆದು ಪಂಚನಾಮೆ ಮಾಡಿ ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಪೋಷಕರು ದೂರಿನಲ್ಲಿ ಕೋರಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498 (ಎ), 302, 304 (ಬಿ) ಸೇರಿದಂತೆ ವಿವಿಧ ಕಲಾಂಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತಿಂಗಳ ಹಿಂದೆಯೇ ಮಹಿಳೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅಗತ್ಯ ಬಿದ್ದರೆ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸುತ್ತೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.