ಆಳಂದ (ಕಲಬುರಗಿ ಜಿಲ್ಲೆ): ಪಟ್ಟಣದಲ್ಲಿ ನಿರಗುಡಿ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಮಂಗಳವಾರ ನಡೆದ ಶ್ರೀರಾಮನ ಭವ್ಯ ಮೂರ್ತಿಯ ಮೆರವಣಿಗೆ ಸಂಭ್ರಮದಿಂದ ಜರುಗಿತು.
ಭಾನುವಾರ ಶ್ರೀರಾಮ ಸೇನೆಯಿಂದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಅಂದು ಬಹುತೇಕ ಮುಸ್ಲಿಂ ವರ್ತಕರ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಂಗಳವಾರ ಮುಸ್ಲಿಂ ವರ್ತಕರು ಅಂಗಡಿಗಳನ್ನು ತೆರೆದಿದ್ದರು. ಅಲ್ಲದೇ ಉತ್ಸವದಲ್ಲಿ ತಾವೂ ಪಾಲ್ಗೊಂಡು ಸಾಮರಸ್ಯ ಮೆರೆದರು. ದರ್ಗಾ ಸಮಿತಿ ಅಧ್ಯಕ್ಷ ಆಸಿಫ್ ಅನ್ಸಾರಿ ಸೇರಿದಂತೆ ಕೆಲ ಮುಸ್ಲಿಂ ಮುಖಂಡರು ರಾಮಭಕ್ತರಿಗೆ ತಂಪು ಪಾನೀಯ, ಮಜ್ಜಿಗೆ ವ್ಯವಸ್ಥೆ ಮಾಡುವ ಮೂಲಕ ಸೌಹಾರ್ದತೆ ಸಾರಿದರು.
ಪಟ್ಟಣದ ಹೊರವಲಯದಲ್ಲಿನ ನಿರಗುಡಿ ಮಲ್ಲಿನಾಥ ಮಹಾರಾಜರ ಆಶ್ರಮದಿಂದ ಮೆರವಣಿಗೆ ಆರಂಭಗೊಂಡಿತು. ಮುಂದೆ ಹನುಮನ ಭವ್ಯ ಮೂರ್ತಿ, ಬುದ್ದ, ಬಸವಣ್ಣ, ಡಾ.ಅಂಬೇಡ್ಕರ್ ಅವರ ಭವ್ಯ ಮೂರ್ತಿಗಳು ಹಾಗೂ ರೇಣುಕಾಚಾರ್ಯರು, ಭಗತ್ ಸಿಂಗ್ ಮತ್ತಿತರ ಸ್ವಾತಂತ್ರ್ ಹೋರಾಟಗಾರರು, ನಾಯಕರ ಭಾವಚಿತ್ರಗಳು ರಾರಾಜಿಸಿದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿವೈಎಸ್‌ಪಿ ರವೀಂದ್ರ ಶಿರೂರು, ಸಿಪಿಐ ಮಂಜುನಾಥ ಸೇರಿದಂತೆ ವಿವಿಧ ಠಾಣೆಯ ಪಿಎಸ್‌ಐ ನೇತೃತ್ವದಲ್ಲಿ ಬಿಗಿ ಪೊಲೀಸ್ ಕಟ್ಟೆಚ್ಚರ ಕಂಡು ಬಂತು.
ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿ.ಸಿ. ಟಿವಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾಗಳ ಕಣ್ಗಾವಲು ಕಂಡು ಬಂತು.
ಕಳೆದ ಮಹಾ ಶಿವರಾತ್ರಿ ದಿನ ನಡೆದ ಘರ್ಷಣೆ ಪ್ರಯುಕ್ತ ಪಟ್ಟಣದ ಶ್ರೀರಾಮ ಮಾರುಕಟ್ಟೆ, ಮುಖ್ಯರಸ್ತೆ, ಪ್ರಾರ್ಥನಾ ಮಂದಿರದ ಮುಂದೆ ಪೊಲೀಸ್ ಸರ್ಪಗಾವಲು ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.