ADVERTISEMENT

ಮಕ್ಕಳಲ್ಲಿನ ಮೊಬೈಲ್ ಗೀಳು ಬಿಡಿಸಲು 10 ಅಧ್ಯಯನ ತಂಡ ರಚನೆ: ನಾಗಣ್ಣಗೌಡ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 12:40 IST
Last Updated 9 ಆಗಸ್ಟ್ 2023, 12:40 IST
ಕಲಬುರಗಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಇದ್ದರು
ಕಲಬುರಗಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಮಾತನಾಡಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಇದ್ದರು   

ಕಲಬುರಗಿ: ‘ಮಕ್ಕಳಲ್ಲಿ ಮೊಬೈಲ್ ಬಳಕೆಯ ಗೀಳು ಹೆಚ್ಚುತ್ತಿದ್ದು, ಕೋವಿಡ್‌ಗಿಂತ ಅಪಾಯಕಾರಿ ಆಗುತ್ತಿದೆ. ಮಕ್ಕಳನ್ನು ಇದರಿಂದ ಹೊರತರಲು ವಿವಿಧ ಕ್ಷೇತ್ರಗಳ ತಜ್ಞರನ್ನು ಒಳಗೊಂಡ 10 ಅಧ್ಯಯನ ತಂಡಗಳನ್ನು ರಚಿಸಲಾಗಿದೆ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

‘ಆನ್‌ಲೈನ್ ತರಗತಿಯಿಂದ ಶುರುವಾದ ಮೊಬೈಲ್‌ ಗೀಳಿನಿಂದ ಮಕ್ಕಳು ಹೊರಬಂದಿಲ್ಲ. ವ್ಯಾಪಕ ಮೊಬೈಲ್ ಬಳಕೆಯಿಂದ ಮಾನಸಿಕ ಸ್ಥಿರತೆ ಕಳೆದುಕೊಳ್ಳುತ್ತಿದ್ದು, ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿದೆ. ಹೀಗಾಗಿ, ಮಿತವಾಗಿ ಮೊಬೈಲ್ ಬಳಸುವ ಕ್ರಮಗಳ ಕುರಿತು ಅಧ್ಯಯನ ತಂಡಗಳು 3 ತಿಂಗಳು ರಾಜ್ಯದ 10 ಸಾಂಸ್ಕೃತಿ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿವೆ’ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ತಂಡಗಳಲ್ಲಿ ವೈದ್ಯರು, ಮಕ್ಕಳ, ಪಾಲಕರು, ಮನೋರೋಗ ತಜ್ಞರು, ಆಪ್ತ ಸಮಾಲೋಚಕರು, ಮಕ್ಕಳು ಸೇರಿ ಇತರೆ ಕ್ಷೇತ್ರಗಳ ಪರಿಣಿತರು ಇರುವರು. ಅವರ ಅಧ್ಯಯನ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಪ್ರಸ್ತಾಪ

‘ಈಚೆಗೆ ಬಸ್ ಪ್ರಯಾಣಿಕ ದಟ್ಟಣೆ ಹೆಚ್ಚಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಸರ್ಕಾರ ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಾರಿಗೆ, ಶಿಕ್ಷಣ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ‌ ಚರ್ಚಿಸಿ, ಪ್ರಸ್ತಾಪ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

‘ಶಾಲೆಗೆ ಹೋಗುವ ಮಗು ಬಸ್‌ನಿಂದ ವಂಚಿತ ಆಗದಂತೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ನೋಡಿಕೊಳ್ಳಬೇಕು. ಬಸ್ ಸೇವೆ ಅಲಭ್ಯವಾಗಿದ್ದು ಆಯೋಗದ ಗಮನಕ್ಕೆ ತಂದರೆ ಸ್ವಯಂ ಪ್ರೇರಿತ(ಸುಮೊಟೊ) ಪ್ರಕರಣ ದಾಖಲಿಸಿಕೊಂಡು ಸಂಬಂಧಿಸಿದ ಇಲಾಖೆಗೆ ಶಿಫಾರಸು ಮಾಡುತ್ತೇವೆ’ ಎಂದು ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಎಚ್ಚರಿಸಿದರು.

ಎಮ್ಮೆಗಳಿಗೂ ಹಾಕದಂತಹ ತೊಗರಿ ಬೇಳೆ ಬಳಕೆ

‘ಕಲಬುರಗಿ ತೊಗರಿ ನಾಡೆಂದು ಪ್ರಸಿದ್ಧಿಯಾಗಿದೆ. ಎಮ್ಮೆಗಳಿಗೂ ಹಾಕದಂತಹ ತೊಗರಿ ಬೇಳೆಯನ್ನು ವಸತಿ ನಿಲಯದ ಮಕ್ಕಳಿಗೆ ಕೊಡುತ್ತೀರಿ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಕೆಡಿಪಿ ಸಭೆಯಲ್ಲಿ ‘ಕ್ರೈಸ್’ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ವಸತಿ ನಿಲಯಕ್ಕೆ ಭೇಟಿ ನೀಡಿ ಸಂಗ್ರಹಿಸಿ ತಂದಿದ್ದ ಬೇಳೆಯನ್ನು ಅಧಿಕಾರಿ ಮುಂದಿಟ್ಟು, ‘ಪೂರೈಕೆದಾರರನ್ನು ಕರೆಯಿಸಿ ಗುಣಮಟ್ಟದ ದವಸ ಧಾನ್ಯ ಕಳುಹಿಸಲು ಸೂಚಿಸಿ. ಇಲ್ಲದಿದ್ದರೆ ಅವರ ಗುತ್ತಿಗೆಯನ್ನು ರದ್ದು ಮಾಡಿ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.