ADVERTISEMENT

ಸೂಪರ್‌ ಮಾರ್ಕೆಟ್‌ ಎಂಬ ಕಿಷ್ಕಿಂದೆ

ರಾಹುಲ ಬೆಳಗಲಿ
Published 9 ಜೂನ್ 2019, 19:45 IST
Last Updated 9 ಜೂನ್ 2019, 19:45 IST
ಕಲಬುರ್ಗಿಯ ಕಣ್ಣಿ ಮಾರ್ಕೆಟ್‌ನ ದೃಶ್ಯ
ಕಲಬುರ್ಗಿಯ ಕಣ್ಣಿ ಮಾರ್ಕೆಟ್‌ನ ದೃಶ್ಯ   

ವರ್ಷಗಳಲ್ಲಿ ಊರಿನಲ್ಲಿ ಸಾಕಷ್ಟು ಬದಲಾವಣೆಗಳಾದವು. ಅತ್ಯಾಧುನಿಕ ಮಾದರಿಯ ಮಾಲ್‌ಗಳು ತಲೆಯೆತ್ತಿದವು. ಸಾಲುಸಾಲಾಗಿ ಕಟ್ಟಡಗಳು ನಿರ್ಮಾಣಗೊಂಡವು. ವಿಮಾನ ಕೂಡ ಬರುವಂತಾಯಿತು. ಆದರೆ, ವ್ಯಾಪಾರ ಸ್ಥಳ ಮಾತ್ರ ನಿಂತ ನೀರಿನಂತೆ ಯಥಾಸ್ಥಿತಿ ಇದೆ. ವರ್ಷಗಳ ಹಿಂದೆ ಸೂಪರ್ ಮಾರ್ಕೆಟ್‌ ಹೇಗಿತ್ತೋ, ಹಾಗೆಯೇ ಉಳಿದುಕೊಂಡಿದೆ. ಪರಿವರ್ತನೆಯ ಗಾಳಿ ಕಿಂಚಿತ್ತೂ ಸೋಕಿಲ್ಲ’.

ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ ಬಗ್ಗೆ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಲು ಸೊಪ್ಪು, ತರಕಾರಿ ಅಥವಾ ಹಣ್ಣುಹಂಪಲು ವ್ಯಾಪಾರಿಗಳು ಆಗಬೇಕಿಲ್ಲ. ಹೆಚ್ಚೇನೂ ಬೇಡ, ಮಾರ್ಕೆಟ್‌ ಆವರಣದಲ್ಲಿ 10 ನಿಮಿಷ ಸುತ್ತು ಹಾಕಿದರೆ ಸಾಕು. ಅಲ್ಲಿನ ಸಹಜ ಪರಿಸ್ಥಿತಿ ಅರಿವಿಗೆ ಬರುತ್ತದೆ. ಹೈ–ಕ ಪ್ರದೇಶದ ವಿಭಾಗೀಯ ಕೇಂದ್ರದಲ್ಲಿ ಮಾರ್ಕೆಟ್‌ನತ್ತ ಯಾಕೆ ಈ ಪರಿ ನಿಷ್ಕಾಳಜಿ ಎಂಬ ಪ್ರಶ್ನೆಯೂ ಕಾಡುತ್ತದೆ.

ಒಂದೆಡೆ ತೆರವಾಗದ ತ್ಯಾಜ್ಯದ ರಾಶಿ ಕಂಡು ಬಂದರೆ, ಮತ್ತೊಂದೆಡೆ ಅಲ್ಲಿನ ಕೆಸರಿನಲ್ಲಿ ಓಡಾಡಲಾಗದೇ ಜಾರಿ ಬೀಳುವ ಭೀತಿ ಮೂಡುತ್ತದೆ. ಕಿರಿದಾದ ರಸ್ತೆಯಲ್ಲಿ ಸುಗಮವಾಗಿ ನಡೆಯುವುದಿರಲಿ, ಒಂದು ಕಡೆ ಸರಿಯಾಗಿ ನಿಂತು ಸೊಪ್ಪು, ತರಕಾರಿಗಳನ್ನು ಖರೀದಿಸಲು ಸಹ ಸಾಧ್ಯವಾಗುವುದಿಲ್ಲ. ಜನಟ್ಟಣೆಯಿದ್ದರಂತೂ ನೂಕುನುಗ್ಗಾಟ, ತಳ್ಳಾಟದಲ್ಲೇ ಮಾರ್ಕೆಟ್ ಸುತ್ತು ಪೂರ್ಣಗೊಳ್ಳುತ್ತದೆ.

ADVERTISEMENT

ಸೂಪರ್‌ ಮಾರ್ಕೆಟ್‌ ಒಳ ಆವರಣದಲ್ಲಿ 433 ವ್ಯಾಪಾರಸ್ಥರಿದ್ದು, ಅವರೆಲ್ಲರೂ ನಿಗದಿತ ಸ್ಥಳದಲ್ಲಿ ಪ್ರತಿ ದಿನವೂ ವಹಿವಾಟು ನಡೆಸುತ್ತಾರೆ. ನಸುಕಿನ 3 ಗಂಟೆಗೆ ಆರಂಭವಾಗುವ ಚಟುವಟಿಕೆಯು ರಾತ್ರಿ 10ರವರೆಗೂ ಮುಂದುವರಿಯುತ್ತದೆ. ಹೊರ ಆವರಣದಲ್ಲೂ ಅಷ್ಟೇ ಪ್ರಮಾಣದಲ್ಲಿ ಬೀದಿ ವ್ಯಾಪಾರಸ್ಥರಿದ್ದು, ಸ್ಥಳಾವಕಾಶ ಸಿಕ್ಕ ಕಡೆಯಲ್ಲೆಲ್ಲ ಕೂತು ಮತ್ತು ನಿಂತು ವ್ಯಾಪಾರ ಮಾಡುತ್ತಾರೆ.

‘ಸೂಪರ್ ಮಾರ್ಕೆಟ್‌ ಅಸಂಖ್ಯಾತ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ದಶಕಗಳಿಂದ ವ್ಯಾಪಾರಸ್ಥರು ಇಲ್ಲಿ ಶ್ರಮಿಸಿ ಜೀವನ ರೂಪಿಸಿಕೊಂಡಿದ್ದರೆ, ಉತ್ತಮ ಗುಣಮಟ್ಟದ ಸೊಪ್ಪು, ತರಕಾರಿ ಮತ್ತು ಹಣ್ಣುಹಂಪಲಿನ ನಿರೀಕ್ಷೆಯಲ್ಲಿ ಗ್ರಾಹಕರು ಇಲ್ಲಿ ಬರುತ್ತಾರೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಇಡೀ ಆವರಣವು ಅವ್ಯವಸ್ಥೆ ತಾಣವಾಗಿ ಮಾರ್ಪಟ್ಟಿದೆ. ಸೌಲಭ್ಯ ಪೂರೈಸಲು ಮತ್ತು ಸಮಸ್ಯೆ ಪರಿಹರಿಸಲು ಕೋರಿದರೂ ಈವರೆಗೆ ಸ್ಪಂದನೆ ಸಿಕ್ಕಿಲ್ಲ’ ಎಂದು ತರಕಾರಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಯ್ಯದ್ ಬಾಗಬಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾರ್ವಜನಿಕರು ಅಥವಾ ವ್ಯಾಪಾರಿಸ್ಥರಿಗೆಂದೇ ಇಲ್ಲಿ ಕುಡಿಯುವ ನೀರಿನ ಸೌಲಭ್ಯ ಇಲ್ಲ. ಶೌಚಾಲಯದ ವ್ಯವಸ್ಥೆಯೂ ಇಲ್ಲ. ಮನೆಯಿಂದ ತರುವ ನೀರು ಮಧ್ಯಾಹ್ನದ ವೇಳೆ ಖಾಲಿಯಾದರೆ, ನೀರನ್ನು ತರಲು ಹೋಟೆಲ್‌ಗೆ ಇಲ್ಲವೇ ಪುನಃ ಮನೆಗೆ ಹೋಗಬೇಕು. ಶೌಚಾಲಯಕ್ಕಾಗಿ ದೂರದವರೆಗೆ ನಡೆದುಕೊಂಡು ಹೋಗಬೇಕು. ಇವುಗಳಲ್ಲದೇ ಇಲ್ಲಿ ತೆರವಾಗದ ತ್ಯಾಜ್ಯದಿಂದ ಬರುವ ದುರ್ನಾತ ಸಹಿಸಿಕೊಳ್ಳಬೇಕು. ಅವುಗಳ ಬದಿಯಲ್ಲೇ ವ್ಯಾಪಾರ ಮಾಡಬೇಕು. ಇದು ಒಂದೆರಡು ದಿನದ್ದಲ್ಲ, ನಿತ್ಯದ ಗೋಳು’ ಎಂದು ಅವರು ವಿವರಿಸಿದರು.

‘ಸೂಪರ್‌ ಮಾರ್ಕೆಟ್‌ನ್ನು ನವೀಕರಣಗೊಳಿಸಿ, ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ವರ್ಷಕ್ಕೆ ಇಂತಿಷ್ಟು ತೆರಿಗೆ ಕಟ್ಟಿಸಿಕೊಳ್ಳುವ ಪಾಲಿಕೆಯವರು ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದಲೂ ನೋಡಬೇಕು. ಸುಸಜ್ಜಿತ ಕಟ್ಟೆ, ಚರಂಡಿ ವ್ಯವಸ್ಥೆ, ಸಿಸಿ ರಸ್ತೆ, ತ್ಯಾಜ್ಯ ತೆರವು, ನೀರು, ದೀಪ ಮತ್ತು ಶೌಚಾಲಯ ಸೌಕರ್ಯ ಒದಗಿಸುವ ಕಡೆಗೂ ವಿಶೇಷ ಆದ್ಯತೆ ನೀಡಬೇಕು. ಇದು ನಮ್ಮ ಬೇಡಿಕೆಯೂ ಹೌದು. ಆಗ ಸೂಪರ್‌ ಮಾರ್ಕೆಟ್‌ ಬಗ್ಗೆ ಇರುವ ಚಿತ್ರಣವೇ ಬದಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.