ಕಲಬುರಗಿ: ಜಾಗತಿಕವಾಗಿ ಪರಿಸರವನ್ನು ಉಳಿಸುವ ಜವಾಬ್ದಾರಿಯನ್ನು ಇದುವರೆಗೆ ಜನಸಾಮಾನ್ಯರೇ ನಿರ್ವಹಿಸಿದ್ದಾರೆಯೇ ಹೊರತು ಶಿಕ್ಷಣ ತಜ್ಞರು, ಪರಿಸರ ತಜ್ಞರಿಂದ ಆ ಕೆಲಸ ಆಗಿಲ್ಲ. 1980, 1990ರ ದಶಕದಲ್ಲಿ ಆರಂಭವಾದ ಪರಿಸರ ಉಳಿಸಿ, ಚಿಪ್ಕೊ ಚಳವಳಿಗಳಿಗೆ ಸಾಮಾನ್ಯ ಜನರೇ ಚಾಲಕ ಶಕ್ತಿಯಾಗಿದ್ದರು ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಪ್ರತಿಪಾದಿಸಿದರು.
ಇಲ್ಲಿನ ಎಚ್‌ಕೆಇ ಸೊಸೈಟಿಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಇತಿಹಾಸ ವಿಭಾಗ ಸೋಮವಾರ ಆಯೋಜಿಸಿದ್ದ ‘ಪರಿಸರದ ಇತಿಹಾಸ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಪರಿಸರ ಉಳಿವಿಗೆ ಸಂಬಂಧಿಸಿದಂತೆ ನಮ್ಮ ಹಿರಿಯರು ಹೊಂದಿದ ಕಾಳಜಿಯನ್ನು ನಾವು ಅರ್ಥ ಮಾಡಿಕೊಂಡು ಅದರ ಸಂರಕ್ಷಣೆಯತ್ತ ಹೆಜ್ಜೆ ಹಾಕಬೇಕಿದೆ. ಆಧುನಿಕ ಜೀವನ ಶೈಲಿಗೆ ತಕ್ಕಂತೆ ನಮ್ಮ ಮೋಟಾರು ಕಾರುಗಳು ಓಡಾಡಲು ರಸ್ತೆಗಳನ್ನು ನಿರ್ಮಿಸಬೇಕಾಗಿದೆ. ಅದಕ್ಕಾಗಿ ಪರಿಸರ ನಾಶವಾಗುತ್ತದೆ. ಇಂಥದ್ದನ್ನು ತಡೆಗಟ್ಟಲು ವಿಶ್ವಸಂಸ್ಥೆಯು 1972ರಲ್ಲಿ ಸ್ಟಾಕ್ ಹೋಮ್‌ನಲ್ಲಿ ಒಪ್ಪಂದವನ್ನು ಮಾಡಿಕೊಂಡಿದೆ. ಇದರಲ್ಲಿನ ಅಂಶಗಳು ಎಲ್ಲ ದೇಶಗಳು ಅನುಸರಿಸಬೇಕಾದ ಅಗತ್ಯವಿದೆ’ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ, ‘ನಮ್ಮ ಭೂಮಿಯಲ್ಲಿನ ಪರಿಸರವು ಮನುಕುಲ ಹುಟ್ಟುವುದಕ್ಕೂ ಮೊದಲೇ ಅಸ್ತಿತ್ವದಲ್ಲಿತ್ತು. ಪರಿಸರ ನಾಶವನ್ನು ನಿಸರ್ಗವು ಒಂದು ಹಂತದವರೆಗೆ ಸಹಿಸಿಕೊಳ್ಳುತ್ತದೆ. ಆ ನಂತರ ತನ್ನ ಮೇಲಿನ ಆಕ್ರಮಣವನ್ನು ಒಂದು ಭಾರಿ ಮಳೆಯ ಮೂಲಕ ಸ್ವಚ್ಛಗೊಳಿಸುತ್ತದೆ. ಹಾಗಾಗಿ, ಪರಿಸರ ಸಂರಕ್ಷಣೆ ಕುರಿತ ಮನುಷ್ಯರ ಮಾತುಗಳು ವಾಸ್ತವವಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಪರಿಸರ ನಾಶವನ್ನು ತಡೆಯುವ ಶಕ್ತಿ ಪ್ರಕೃತಿಗೇ ಇದೆ’ ಎಂದು ಪ್ರತಿಪಾದಿಸಿದರು.
ಕಮಲಾಪುರದ ಸತ್ಯಸಾಯಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀಕಂಠಮೂರ್ತಿ ಕೆ. ಮಾತನಾಡಿ, ‘ನಿರಂತರವಾಗಿ ಪರಿಸರ ನಾಶವನ್ನು ಮಾಡಿದರೆ ಮನುಕುಲ ಅಳಿದು ಹೋಗುತ್ತದೆ. ರೋಮನ್, ಗ್ರೀಕ್ ಸಾಮ್ರಾಜ್ಯಗಳೂ ಇದೇ ರೀತಿ ಪರಿಸರ ನಾಶದಿಂದ ಅಳಿದು ಹೋಗಿದ್ದವು. ಕಳೆದ 200 ವರ್ಷಗಳಿಂದ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯು ಜಾಗತಿಕ ಹವಾಮಾನದ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಸುಡುವ ಇಂಧನಗಳ ಬಳಕೆಯನ್ನು ಕಡಿಮೆ ಮಾಡಬೇಕು’ ಎಂದು ಸಲಹೆ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಪ್ರೊ. ವಿ. ಅನುರಾಧಾ, ‘ನಮ್ಮ ಪ್ರಾಚೀನ ವೇದ, ಉಪನಿಷತ್ತುಗಳಲ್ಲಿಯೇ ಪರಿಸರದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇಂದಿನ ಅನೇಕ ಶಬ್ದಗಳು ಸಂಸ್ಕೃತ ಮೂಲದಿಂದ ಬಂದವುಗಳಾಗಿವೆ. ಅರಣ್ಯವನ್ನು ಕಾನನ, ಅಡವಿ ಎಂದು ಪ್ರಾಚೀನ ಗ್ರಂಥಗಳಲ್ಲಿ ಹೆಸರಿಸಲಾಗಿದೆ’ ಎಂದರು.
ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಡಾ. ಕಿರಣ ದೇಶಮುಖ, ಪ್ರಾಂಶುಪಾಲ ಪ್ರೊ. ರೋಹಿಣಿಕುಮಾರ್ ಹಿಳ್ಳಿ ಮಾತನಾಡಿದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಸುಮಂಗಲಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಳೆದ ನಾಲ್ಕು ದಶಕಗಳಲ್ಲಿ ಪರಿಸರವನ್ನು ಸಾಕಷ್ಟು ಹಾಳು ಮಾಡಿದ್ದೇವೆ. ಅದರ ಸಂರಕ್ಷಣೆ ಮಾಡದಿದ್ದರೆ ಮುಂದಿನ ಪೀಳಿಗೆಗೆ ಕಷ್ಟದ ದಿನಗಳು ಎದುರಾಗಲಿವೆವಿ. ಅನುರಾಧಾ ಇತಿಹಾಸ ಪ್ರಾಧ್ಯಾಪಕಿ ಮಹಾರಾಣಿ ಕ್ಲಸ್ಟರ್ ವಿ.ವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.