ADVERTISEMENT

ಕಲಬುರಗಿ: ನವರಾತ್ರಿ ರಂಗೇರಿಸುವ ದೇವಿ ಮೂರ್ತಿಗಳು

ದಶಕಗಳಿಂದ ಮೂರ್ತಿಗಳ ನಿರ್ಮಾಣದಲ್ಲಿ ತೊಡಗಿರುವ ಕಮಲಾಕರ–ಶರಣು ಸಹೋದರರು

ಬಸೀರ ಅಹ್ಮದ್ ನಗಾರಿ
Published 10 ಅಕ್ಟೋಬರ್ 2023, 6:14 IST
Last Updated 10 ಅಕ್ಟೋಬರ್ 2023, 6:14 IST
<div class="paragraphs"><p>ಕಲಬುರಗಿಯ ಸೂಪರ್‌ ಮಾರ್ಕೆಟ್‌ ರಸ್ತೆಯಲ್ಲಿರುವ ಭಾಸಗಿ ಬಿಲ್ಡಿಂಗ್‌ನಲ್ಲಿ ದೇವಿ ಮೂರ್ತಿಯೊಂದಕ್ಕೆ ಬಣ್ಣ ಬಳಿಯಲು ಮುಂದಾದ ಕಲಾವಿದ ಶರಣು ಕುಂಬಾರ</p></div>

ಕಲಬುರಗಿಯ ಸೂಪರ್‌ ಮಾರ್ಕೆಟ್‌ ರಸ್ತೆಯಲ್ಲಿರುವ ಭಾಸಗಿ ಬಿಲ್ಡಿಂಗ್‌ನಲ್ಲಿ ದೇವಿ ಮೂರ್ತಿಯೊಂದಕ್ಕೆ ಬಣ್ಣ ಬಳಿಯಲು ಮುಂದಾದ ಕಲಾವಿದ ಶರಣು ಕುಂಬಾರ

   

–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್‌

ಕಲಬುರಗಿ: ‘ಅಣ್ಣಾ... ದೇವಿ ಮೂರ್ತಿ ಈ ಸಲ ಸ್ವಲ್ಪ ಭೇಷ್‌ ಮಾಡ್ರಿ...’ ಎಂದು ಚಿತ್ತಾಪುರ ತಾಲ್ಲೂಕಿನ ಮರತೂರು ಗ್ರಾಮದ ಯುವಕ ಸಿದ್ರಾಮಪ್ಪ ಕಲಬುರಗಿ ಸಣ್ಣಧ್ವನಿಯಲ್ಲಿ ವಿನಂತಿಸಿದರು.

ADVERTISEMENT

ಸಿದ್ರಾಮಪ್ಪ ಮಾತುಗಳಿಗೆ ಕಿವಿಗೊಟ್ಟಿದ್ದ ಕಮಲಾಕರ ಕುಂಬಾರ ದೇವಿಯ ಕೈಬೆರಳು ರೂಪಿಸುವಲ್ಲಿ ತಲ್ಲೀನರಾಗಿದ್ದರು. ಕೈಯಲ್ಲಿನ ಕೆಲಸ ಮುಗಿಸಿದ ಅವರು, ‘ನೋಡಿ, ನಾವು–ನೀವು ಅಂದ್ಕೊಂಡ್ಹಂಗ್‌ ಮೂರ್ತಿ ಆಗಲ್ಲ. ಶ್ರದ್ಧೆಯಿಂದ ಕೆಲಸ ಮಾಡೂದಷ್ಟ ನಮ್ಮ ಭಾಗ. ತನಗ್‌ ಹೆಂಗ್‌ ಬೇಕ್‌ ಅನಿಸ್ತದೋ ಹಂಗ್‌ ದೇವಿ ನಮ್ ಕೈಯಿಂದ ರೂಪಾ ಪಡೀತಾಳ’ ಎಂದರು. ಅವರ ಮಾತುಗಳಲ್ಲಿ ವಿನಯ, ಮೊಗದಲ್ಲಿ ಮಂದಹಾಸವಿತ್ತು.

ಕಲಬುರಗಿ ಜಿಲ್ಲೆಯಲ್ಲಿ ನವರಾತ್ರಿಗೆ ಅಂಬಾಭವಾನಿ ದೇವಿಯನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಹೀಗೆ ಜಿಲ್ಲೆಯ ವಿವಿಧೆಡೆ ಪ್ರತಿಷ್ಠಾಪಿಸುವ ದೇವಿ ಮೂರ್ತಿಗಳು ಸಿದ್ಧವಾಗುವುದು ಕಲಾವಿದರಾದ ಕಮಲಾಕರ–ಶರಣು ಕುಂಬಾರ ಸಹೋದರರ ಕೈಯಲ್ಲಿ. ನಗರದ ಸೂಪರ್‌ ಮಾರ್ಕೆಟ್‌ ರಸ್ತೆಯ ಅಂಚೆ ಕಚೇರಿ ಎದುರಿನ ಭಾಸಗಿ ಬಿಲ್ಡಿಂಗ್‌ನಲ್ಲಿ  ನವರಾತ್ರಿ ಸಮೀಪಿಸಿದ ಬೆನ್ನಲ್ಲೇ ದೇವಿ ಮೂರ್ತಿಗಳ ನಿರ್ಮಾಣ ಕಾರ್ಯ ಚುರುಕು ಪಡೆದಿದೆ.

ಇರುವ ಸಣ್ಣ ಜಾಗದಲ್ಲೇ ಹತ್ತಾರು ಮೂರ್ತಿಗಳು ಅಲ್ಲಿ ಸಾಲುಗಟ್ಟಿವೆ. ಹಲವು ಮೂರ್ತಿಗಳು ಬಣ್ಣಗಳಿಗೆ ಕಾದಿದ್ದರೆ, ಮತ್ತೆ ಕೆಲವು ಹೊಸವು. ಬಣ್ಣದಿಂದ ಅಂದಗೊಳ್ಳಲು ಕಾತರಿಸುತ್ತಿವೆ!

‘ಎರಡ್ಮೂರು ಅಡಿಗಳಿಂದ ಐದೂವರೆ ಅಡಿಗಳಷ್ಟು ಎತ್ತರದ ದೇವಿ ಮೂರ್ತಿಗಳನ್ನು ಸಿದ್ಧಪಡಿಸುತ್ತೇವೆ. ಪ್ರತಿ ವರ್ಷ ದೇವಿಯ 12–15 ಹೊಸ ಮೂರ್ತಿಗಳು ಮಾಡುತ್ತೇವೆ. ಇನ್ನುಳಿದಂತೆ ಹಳೆಯ ಮೂರ್ತಿಗಳಿಗೆ ಹೊಸದಾಗಿ ಬಣ್ಣ ಬಳಿದು ಅಂದಗೊಳಿಸುತ್ತೇವೆ’ ಎಂದು ಮಾತಿಗಿಳಿದರು ಕಮಲಾಕರ.

‘ದೇವಿ ಮೂರ್ತಿಗಳ ಎತ್ತರಕ್ಕೆ ತಕ್ಕಂತೆ ₹5 ಸಾವಿರದಿಂದ ₹15 ಸಾವಿರ ತನಕದ ದರವಿದೆ. ದೇವಿ ಮೂರ್ತಿ ಕೆಲಸ ಮಾಡೋದು ಗಣೇಶ ಮೂರ್ತಿ ಮಾಡಿದಂತಲ್ಲ. ಸಾಕಷ್ಟು ಶ್ರಮ, ತಾಳ್ಮೆ ಬೇಡುತ್ತೆ. ಆರ್ಥಿಕವಾಗಿ ದೊಡ್ಡ ಲಾಭವಲ್ಲ. ಆದರೆ, ಇದರಲ್ಲಿ ನೆಮ್ಮದಿ–ಸಂತೃಪ್ತಿ ಸಿಗುತ್ತದೆ’ ಎಂದರು.

‘ಒಂದು ಮೂರ್ತಿ ಸಿದ್ಧಪಡಿಸಲು ಕನಿಷ್ಠ ಎಂಟು ದಿನ ಬೇಕು. ಮೊದಲಿಗೆ ದೇಹ ರಚನೆ. ತೋಳು, ಮುಖದ ಜೋಡಣೆ ನಡೆಯುತ್ತದೆ. ಬಳಿಕ ಪಾದದಡಿಯ ಮಣೆ ಅಳವಡಿಸಲಾಗುತ್ತದೆ. ನಂತರ ದೇವಿ ಕಾಲುಗಳಿಗೆ ‍ಪಾಯಾ(ಫೌಂಡೇಷನ್‌) ತುಂಬುತ್ತೇವೆ. ನಂತರ ಕೈಗಳನ್ನುಅಳವಡಿಸಿ, ಅದಕ್ಕೆ ಅಂಗೈ, ಬೆರಳು ಜೋಡಿಸಲಾಗುತ್ತದೆ. ಬಳಿಕ ದೇವಿ ಮೂರ್ತಿಗೆ ಅಂತಿಮ ಸ್ಪರ್ಶ ನೀಡಿ, ಬಣ್ಣ ಬಳಿಯುತ್ತೇವೆ’ ಎಂದು ಸಹೋದರರು ಹೇಳುತ್ತಾರೆ.

ಮರು ಬಳಕೆಯ ತೃಪ್ತಿ: ‘ದೇವಿ ಮೂರ್ತಿಗಳನ್ನು ಪಿಒಪಿಯಲ್ಲಿ ಮಾಡುತ್ತೇವೆ. ಈ ಮೂರ್ತಿಗಳನ್ನು ಸಂಘ–ಸಂಸ್ಥೆಗಳು ಪ್ರತಿಷ್ಠಾಪಿಸುತ್ತವೆ. ನಮ್ಮಲ್ಲಿ ಹೊಸ ಮೂರ್ತಿಗಳ ನಿರ್ಮಾಣಕ್ಕಿಂತಲೂ ಹಳೇ ಮೂರ್ತಿಗಳು ಬಣ್ಣಕ್ಕೆ ಬರುವುದೇ ಹೆಚ್ಚು. ಕೆಲವು ಸಂಘಗಳು ದಶಕಗಳಿಂದ ಅವೇ ಮೂರ್ತಿಗಳನ್ನು ಈಗಲೂ ಉಳಿಸಿಕೊಂಡು ವರುಷ–ವರುಷವೂ ಬಳಸುತ್ತಿವೆ’ ಎನ್ನುತ್ತಾರೆ ಕಮಲಾಕರ–ಶರಣು ಸಹೋದರರು.

ಜಲವರ್ಣ ಬಳಕೆ:‌ ದೇವಿ ಮೂರ್ತಿಗೆ ನಾವು ತೈಲವರ್ಣ ಬಳಸುವುದಿಲ್ಲ. ಬದಲಿಗೆ ಜಲವರ್ಣ ಬಳಸುತ್ತೇವೆ. ಇದರಿಂದ ದೇವಿ ಮೂರ್ತಿ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ ಎನ್ನುವುದು ಕಲಾವಿದರ ಅನುಭವ.

ಮಹಾರಾಷ್ಟ್ರದಿಂದ ಸಾಮಗ್ರಿ: ‘ದೇವಿ ಮೂರ್ತಿಗಳ ರಚನೆಗೆ ಕಲಬುರಗಿಯಲ್ಲಿ ಸಾಮಗ್ರಿ ಸಿಗುವುದೇ ಇಲ್ಲ. ಬಣ್ಣ, ತೆಂಗಿನ ನಾರು ಸೇರಿದಂತೆ ಎಲ್ಲ ಸಾಮಗ್ರಿಯನ್ನು ಪುಣೆ, ಇಲ್ಲವೇ ಸೊಲ್ಲಾಪುರದಿಂದಲೇ ತರುವುದು ಅನಿವಾರ್ಯ’ ಎನ್ನುತ್ತಾರೆ ಅವರು.

ನಾಲ್ಕು ದಶಕಗಳ ದೇವಿಮೂರ್ತಿ

‘ಗಾಣಗಾಪುರದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ ನಾಲ್ಕು ದಶಕಕ್ಕೂ ಹಳೆಯದು. ನಾವು ನಿಂಬರಗಾದಲ್ಲಿ ಇದ್ದಾಗ ನಮ್ಮ ಅಣ್ಣ ಅದನ್ನು ಮಾಡಿದ್ದರು. ಅದಕ್ಕೆ ನಾನು ಬಾಲಕನಾಗಿದ್ದಾಗ ಬಣ್ಣ ಹಚ್ಚಿದ ನೆನಪಿದೆ. ಅಂದಿನಿಂದ ಈತನಕವೂ ದೇವಿ ಮೂರ್ತಿ ಮರು ಬಳಕೆಯಾಗುತ್ತಲೇ ಇದೆ. ಈ ವರ್ಷವೂ ದೇವಿ ಮೂರ್ತಿಯನ್ನು ಬಣ್ಣಕ್ಕೆ ತರಲಾಗಿದೆ. ಕಲಬುರಗಿ ಹಳೇ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಕೆಳಸೇತುವೆ ಬಳಿ ಪ್ರತಿಷ್ಠಾಪಿಸುವ ದೇವಿ ಮೂರ್ತಿ 25 ವರ್ಷಗಳಷ್ಟು ಹಿಂದಿನದು. ಪ್ರತಿ ವರ್ಷ ಬಣ್ಣ ಬಳಿದು ಅದೇ ದೇವಿ ಮೂರ್ತಿ ಬಳಕೆಯಾಗುತ್ತಿದೆ’ ಎಂದು ಕಲಾವಿದರಾದ ಕಮಲಾಕರ–ಶರಣು ಸಹೋದರರು ಹೇಳುತ್ತಾರೆ.

ನಾವು ಪ್ರತಿ ವರ್ಷವೂ ಹುಣಚಾರಯ್ಯ ಸಂಘದಿಂದ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನ ಪೂಜಿಸುತ್ತೇವೆ. ಈ ವರ್ಷ ಹೊಸ ಮೂರ್ತಿ ಪ್ರತಿಷ್ಠಾಪಿಸಲಿದ್ದೇವೆ
-ಸಿದ್ರಾಮಪ್ಪ, ಕಲಬುರಗಿ ಮರತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.