ADVERTISEMENT

ಕಲಬುರಗಿ | ನವರಾತ್ರಿ ಸಂಭ್ರಮಕ್ಕೆ ಮುನ್ನುಡಿ

ಒಂಬತ್ತು ದಿನ ಆದಿ ಶಕ್ತಿಯ ನವವಿಧಗಳಲ್ಲಿ ಪೂಜೆ, ಅಲಂಕಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 22:30 IST
Last Updated 3 ಅಕ್ಟೋಬರ್ 2024, 22:30 IST
ಕಲಬುರಗಿಯ ಹೊರವಲಯದ ಸೈಯದ್‌ ಚಿಂಚೋಳಿ ಕ್ರಾಸ್‌ನ ಗಬರಾದಿ ಲೇಔಟ್‌ನಲ್ಲಿರುವ ವೈಷ್ಣೊದೇವಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ
ಕಲಬುರಗಿಯ ಹೊರವಲಯದ ಸೈಯದ್‌ ಚಿಂಚೋಳಿ ಕ್ರಾಸ್‌ನ ಗಬರಾದಿ ಲೇಔಟ್‌ನಲ್ಲಿರುವ ವೈಷ್ಣೊದೇವಿ ಮಂದಿರದಲ್ಲಿ ನವರಾತ್ರಿ ಅಂಗವಾಗಿ ದೇವಿಯ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿದೆ   

ಕಲಬುರಗಿ: ನವರಾತ್ರಿಯ ಒಂಬತ್ತು ದಿನ ಆದಿ ಶಕ್ತಿಯನ್ನು ನವವಿಧಗಳಲ್ಲಿ ಪೂಜಿಸುವ ಮತ್ತು ಸಮೃದ್ಧಿ ಸಂಕೇತವಾಗಿ ಘಟ (ಕಲಶ) ಸ್ಥಾಪನೆಯ ಪೂಜಾ ಕೈಂಕರ್ಯಗಳು ಗುರುವಾರ ಜರುಗಿದವು.

ದುರ್ಗಾದೇವಿಯ ಆರಾಧನೆಗೆ ನಗರದ ಅಯ್ಯರವಾಡಿಯ ಭವಾನಿ ದೇವಸ್ಥಾನ, ಟ್ಯಾಂಕ್ ಬಂಡ್ ರಸ್ತೆಯ ಯಲ್ಲಮ್ಮ ದೇವಿ ದೇವಸ್ಥಾನ, ಮಕ್ತಂಪುರದ ಹಿಂಗುಲಾಂಬಿಕ ದೇವಿ ದೇವಸ್ಥಾನ, ಶಹಾ ಬಜಾರ್‌ನ ಜಗದಂಬಾ ದೇವಸ್ಥಾನ, ಹಳೆ ಜೇವರ್ಗಿ ರಸ್ತೆಯ ಸಿಂದಗಿ ಅಂಬಾಭವಾನಿ ದೇವಸ್ಥಾನ, ಆಳಂದ ಚೆಕ್‌ಪೋಸ್ಟ್‌ ಸಮೀಪದ ವೈಷ್ಣೋದೇವಿ ದೇವಸ್ಥಾನ ಸೇರಿದಂತೆ ಹಲವೆಡೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ದೇವಸ್ಥಾನ ಮಾತ್ರವಲ್ಲದೆ ಎನ್‌ಜಿಒ ಕಾಲೊನಿ, ಬ್ರಹ್ಮಪುರ, ಗೌಳಿಗರ ಗಲ್ಲಿ, ಮರಾಠಾ ಗಲ್ಲಿ, ಪುಟಾಣಿ ಗಲ್ಲಿ, ಗಾಂಧಿ ನಗರ, ಸೋನಾರ ಗಲ್ಲಿ, ಸೂಪರ್‌ ಮಾರ್ಕೆಟ್‌ನ ಹಲವೆಡೆ ಶಕ್ತಿಮಾತೆಯ ಆರಾಧನೆ ಸಂಭ್ರಮದಿಂದ ಶುರುವಾಯಿತು.

ADVERTISEMENT

ತರುಣ ಸಂಘಗಳು, ಮಹಿಳಾ ಮಂಡಳಿಗಳು, ಗೆಳೆಯರ ಬಳಗಗಳು ಮೂರ್ತಿಗಳನ್ನು ಮೆರವಣಿಗೆಯಲ್ಲಿ ತಂದು, ತಮ್ಮ ಶಕ್ತಾನುಸಾರ ಪ್ರತಿಷ್ಠಾಪನೆ ಮಾಡಿದವು. ದುರ್ಗಾದೇವಿಯನ್ನು ಒಂದೊಂದು ದಿನ ಒಂಬತ್ತು ರೂಪಗಳಲ್ಲಿ ವಿಶೇಷವಾಗಿ ಪೂಜಿಸುವರು.

ಝಗಮಗಿಸುವ ಅಲಂಕಾರ: ಪ್ರತಿಷ್ಠಾಪನ ಮಂಡಳಿಗಳು ಜಿದ್ದಿಗೆ ಬಿದ್ದಂತೆ ಬೃಹತ್ ಮಂಟಪ, ಝಗಮಗಿಸುವ ಬಣ್ಣ– ಬಣ್ಣದ ವಿದ್ಯುದೀಪಾಲಂಕಾರ, ತಳಿರು ತೋರಣಗಳಿಂದ ಬೀದಿಗಳನ್ನು ಅಲಂಕರಿಸಿದವು. ಒಂಬತ್ತು ದಿನ ನಡೆಯುವ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ನಗರದ ಮೂಲೆಮೂಲೆಯಿಂದ ಜನರು ಬರುತ್ತಾರೆ.

ಪ್ರತಿದಿನ ಫಲ, ತಾಂಬೂಲ, ಪುಷ್ಪ, ವಸ್ತ್ರ, ವಿವಿಧ ದ್ರವ್ಯಗಳ ಅಲಂಕಾರ ನೆರವೇರಿಸಲಾಗುತ್ತದೆ. ಪಂಚಾಮೃತ ಅಭಿಷೇಕ, ಫಲ ಅಲಂಕಾರ, ಮಂಗಳಾರತಿ, ನೈವೇದ್ಯ ಇರುತ್ತದೆ. ರಾತ್ರಿಯೂ ಭಜನೆ– ಪೂಜಾ ಕಾರ್ಯ ನಡೆಯುತ್ತವೆ ಎಂದು ಅರ್ಚಕರೊಬ್ಬರು ತಿಳಿಸಿದರು.

‘ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ನಿತ್ಯ ಮಹಾಪೂಜೆ, ಮಹಾ ಅಭಿಷೇಕ, ಹೋಮ ಹವನ ಮತ್ತು ಮಹಾಪ್ರಸಾದ ನಡೆಯಲಿದೆ. ಸಂಜೆ 7ಕ್ಕೆ ಮಂಗಳಾರತಿ ನೆರವೇರಲಿದೆ’ ಎಂದು ಯಲ್ಲಮ್ಮ ದೇವಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸುರೇಶ ಎಲ್. ಮಹಿಂದ್ರಕರ್ ತಿಳಿಸಿದರು.

ಮರಾಠ, ಭಾವಸಾರ, ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ (ಎಸ್‌ಎಸ್‌ಕೆ) ಸಮಾಜ ಸೇರಿದಂತೆ ಪ್ರಮುಖ ಸಮುದಾಯದ ಮುಖಂಡರು ನವರಾತ್ರಿ ಆಚರಣೆಯಲ್ಲಿ ಪಾಲ್ಗೊಳ್ಳುವರು. ನವರಾತ್ರಿ ಅಂಗವಾಗಿ ಹಲವು ದೇವಸ್ಥಾನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕೋಲಾಟ, ದಾಂಡಿಯಾ, ಗಾರ್ಭಾ ನೃತ್ಯ ಪ್ರದರ್ಶನ ನಡೆಯಲಿವೆ.

ಕಲಬುರಗಿಯ ಮಹಾತ್ಮ ಬಸವೇಶ್ವರ ನಗರದ ಹೊಸ ಬಡಾವಣೆಯಲ್ಲಿರುವ ಘಾಣದೇವತೆ ಮಂದಿರದಲ್ಲಿ ದಸರಾ ಅಂಗವಾಗಿ ಮೂರ್ತಿ ಅಲಂಕಾರ ಮಾಡಿರುವುದು
ಕಲಬುರಗಿಯ ಚನ್ನವೀರನಗರ ಬಡಾವಣೆಯ ಜೈ ಅಂಬಾ ಭವಾನಿ ದೇವಿಯ ಮೂರ್ತಿಗೆ ಅಲಂಕಾರ ಮಾಡಲಾಗಿದೆ
ನವರಾತ್ರಿ ಅಂಗವಾಗಿ ಕಲಬುರಗಿಯ ಟ್ಯಾಂಕ್ ಬಂಡ್ ರಸ್ತೆಯ ಯಲ್ಮಮ್ಮ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ  ಪ್ರಜಾವಾಣಿ ಚಿತ್ರ
ಕಲಬುರಗಿಯ ಅಯ್ಯರವಾಡಿ ಅಂಬಾಭವಾನಿ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ನವರಾತ್ರಿ ಮೊದಲ ದಿನ ಗುರುವಾರ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದರು         :ಪ್ರಜಾವಾಣಿ ಚಿತ್ರ
ಕಲಬುರಗಿಯ ಅಯ್ಯರವಾಡಿ ಅಂಬಾಭವಾನಿ ದೇವಿಗೆ ನವರಾತ್ರಿ ಅಂಗವಾಗಿ ಗುರುವಾರ ವಿಶೇಷ ಅಲಂಕಾರ ಮಾಡಲಾಯಿತು :ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ನವರಾತ್ರಿ ಅಂಗವಾಗಿ ಭಕ್ತರು ಪ್ರತಿಷ್ಠಾಪನೆಗಾಗಿ ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ದರು   :ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಗುರುವಾರ ನವರಾತ್ರಿ ಅಂಗವಾಗಿ ಭಕ್ತರು ಪ್ರತಿಷ್ಠಾಪನೆಗಾಗಿ ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ದರು   :ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಗುರುವಾರ ನವರಾತ್ರಿ ಅಂಗವಾಗಿ ಭಕ್ತರು ಪ್ರತಿಷ್ಠಾಪನೆಗಾಗಿ ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ಒಯ್ದರು  :ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಬೆಲೆ ಏರಿಕೆ ನಡುವೆ ಖರೀದಿ ಭರಾಟೆ

ನವರಾತ್ರಿಯ ಘಟ (ಕಲಶ) ಸ್ಥಾಪನೆಯ ಹಿಂದಿನ ದಿನವಾದ ಬುಧವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿಯ ಭರಾಟೆ ಕಂಡುಬಂತು. ಘಟ ಸ್ಥಾಪನೆಗೆ ಅಗತ್ಯವಾದ ಪೂಜೆ ಮತ್ತು ಅಲಂಕಾರಕ್ಕೆ ಬೇಕಾದ ಹೂವು ಹಣ್ಣು ಕಬ್ಬು ಬಾಳೆ ಗೊನೆ ವೀಳ್ಯದೆಲೆ ಖರೀದಿಗೆ ಜನರು ಮುಗಿ ಬಿದ್ದರು. ಶುದ್ಧ ಮಣ್ಣಿನ ಪದರಗಳನ್ನು ಹಾಕಿ ಏಳು ಬಗೆಯ ಧಾನ್ಯಗಳನ್ನು ಬಿತ್ತಿ ಕಲಶ ಸ್ಥಾಪನೆ ಮಾಡಲಾಗುತ್ತದೆ. ಹೀಗಾಗಿ ಆರು ಗ್ಲಾಸ್ ಮಣ್ಣು ₹50 100 ವೀಳ್ಯದೆಲೆ ₹50 ಏಳು ಬಗೆಯ ಧಾನ್ಯಗಳ ಪ್ಯಾಕೇಟ್‌ ₹20 ಒಂದು ತೆಂಗಿನ ಕಾಯಿ ₹30 ಒಂದು ಜೋಳದ ತೆನೆ ₹50 ಅವರಿಕೆ ಗಿಡದ ಹೂವು ₹10 ಒಂದು ಜೋಡಿ ಸಣ್ಣ ಮಡಿಕೆ ₹50ಯಂತೆ ಮಾರಾಟವಾದವು. ಕೆ.ಜಿ ಏಲಕ್ಕಿ ಬಾಳೆ ₹160 ಡಜನ್‌ ಪಚ್ಚ ಬಾಳೆ ₹40 ದರ ಇತ್ತು. ಐದು ಪೇರಲ ಹಣ್ಣು ₹50 ಐದು ದಾಳಿಂಬೆ ₹100 ಐದು ಸೇಬು ₹100 ಐದು ಸೀತಾಫಲ ₹50 (ಗಾತ್ರ ಆಧರಿಸಿ) ಒಂದು ಕೆ.ಜಿ. ಸಪೋಟ ₹100 7 ಮೂಸಂಬಿ ₹100 ಒಂದು ಕೆ.ಜಿ. ದ್ರಾಕ್ಷಿ ₹300ಯಂತೆ ಖರೀದಿಯಾದವು. ತಲಾ ಒಂದೊಂದು ಸಿಹಿ ಮತ್ತು ಬೂದು ಕುಂಬಳಕಾಯಿ ₹160ರಿಂದ ₹200 ನಡುವೆ ಮಾರಾಟವಾದವು. ಬಿಡಿ ಚಂಡು ಹೂವುಗಳ ಬೆಲೆ ಕೆ.ಜಿ.ಗೆ ₹80 ಇದ್ದರೆ ಬಿಳಿ ಮತ್ತು ಹಳದಿ ಸೇವಂತಿಗಳ ಹೂವುಗಳ ದರ ₹400 ಇತ್ತು. ಸಣ್ಣ ಗುಲಾಬಿ ಕೆ.ಜಿ.ಗೆ ₹480ಯಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.