ADVERTISEMENT

ಕಾರ್ಗೊ ವಿಮಾನ, ನೈಟ್‌ ಲ್ಯಾಂಡಿಂಗ್‌ ಕನಸು

ಕಲಬುರ್ಗಿ ವಿಮಾನ ನಿಲ್ದಾಣ; ರಾಜ್ಯ ಬಜೆಟ್‌ನಿಂದ ಹೆಚ್ಚಿದ ನಿರೀಕ್ಷೆಗಳು

ಸಂತೋಷ ಈ.ಚಿನಗುಡಿ
Published 6 ಮಾರ್ಚ್ 2021, 2:08 IST
Last Updated 6 ಮಾರ್ಚ್ 2021, 2:08 IST
ಬೆಂಗಳೂರಿಗೆ ಹಾರಿದ ವಿಮಾನ
ಬೆಂಗಳೂರಿಗೆ ಹಾರಿದ ವಿಮಾನ   

ಕಲಬುರ್ಗಿ: ಕಲಬುರ್ಗಿಗೆ ಬಂದು ಹೋಗುತ್ತಿರುವ ವಿಮಾನಗಳು ಭರ್ತಿ‌ ಆಗಿಯೇ ಓಡುತ್ತಿವೆ. ಆದರೆ, ರಾತ್ರಿ ವಿಮಾನ ಇಳಿಸುವ ಹಾಗೂ ಸರಕು ಸಾಗಣೆ ವಿಮಾನ ಹಾರಾಟದ ಬೇಡಿಕೆ ಮಾತ್ರ ಇನ್ನೂ ನನೆಗುದಿಗೆ ಬಿದ್ದಿವೆ.

ದೆಹಲಿ, ಮುಂಬೈ, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಿಮಾನ ಯಾನಿಗಳಿಗೆ ನೈಟ್‌ ಲ್ಯಾಂಡಿಂಗ್‌ ಅನಿವಾರ್ಯವಾಗಿದೆ. ಮುಂಬೈಗೆ ನೇರ ವಿಮಾನ ಸಂಚಾರ ಆರಂಭಿಸಲು ಹೆಚ್ಚಿನ ಬೇಡಿಕೆ ಇದೆ. ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೆಳೆಯೂ ವಿಮಾನ ಇಳಿಸುವ ಸೌಲಭ್ಯ ಕಲ್ಪಿಸಿದರೆ ಮಾತ್ರ ಈ ಊರುಗಳಿಗೆ ವಿಮಾನ ಹಾರಾಟ ಸಾಧ್ಯ ಎಂಬುದು ವಿಮಾನ ಸಂಸ್ಥೆಗಳ ಹೇಳಿಕೆ. ಹಾಗಾಗಿ, ಮುಂಬೈ ಪ್ರಯಾಣಿಕರಿಂದಲೂ ನೈಟ್‌ ಲ್ಯಾಂಡಿಂಗ್‌ ಬೇಡಿಕೆ ಹೆಚ್ಚಾಗಿದೆ.‌

ಈ ಭಾಗದ ಜನ ವ್ಯಾವಹಾರಿಕವಾಗಿ ಮುಂಬೈ ನಗರಕ್ಕೆ ಹೆಚ್ಚು ಓಡಾಡುತ್ತಾರೆ. ಲಾಕ್‌ಡೌನ್‌ಗಿಂತ ಮುಂಚೆ ಪ್ರತಿ ದಿನ 1200 ಜನ ಮುಂಬೈಗೆ ಬಸ್, ರೈಲಿನ ಮೂಲಕ ಸಂಚರಿಸುತ್ತಿದ್ದರು. ‌ಅವರೆಲ್ಲ ವಿಮಾನದ ಮೂಲಕ ಸಂಚರಿಸಿದರೆ ಸಮಯದ ಉಳಿತಾಯ ಆಗಬಹುದು, ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದು ಎಂಬುದು ನಿರೀಕ್ಷೆ.‌

ADVERTISEMENT

ಎ– ಶ್ರೇಣಿ ನೌಕರರು ಮಾತ್ರವಲ್ಲ; ವಿವಿಧ ಕಂಪನಿಗಳು, ಸಿಮೆಂಟ್‌ ಉದ್ಯಮ, ಚೇಂಬರ್ ಆಫ್‌ ಕಾಮರ್ಸ್‌ ಸದಸ್ಯರು, ವ್ಯಾಪಾರಿಗಳು, ವಿಶ್ವವಿದ್ಯಾಲಯ ಉಪನ್ಯಾಸಕರು , ಹೈಟೆಕ್‌ ಆಸ್ಪತ್ರೆಗಳ ವೈದ್ಯರು ಕೂಡ ಬೆಂಗಳೂರು, ದೆಹಲಿ, ಮುಂಬೈನೊಂದಿಗೆ ಒಡನಾಟ ಹೊಂದಿದ್ದಾರೆ. ಅವರಿಗೆಲ್ಲ ಸಮಯ ಉಳಿತಾಯವಾಗುತ್ತದೆ ಎಂಬುದು ಲೆಕ್ಕಾಚಾರ.

ಸಾಧ್ಯತೆಗಳು ಏನು?: ರಾತ್ರಿ ವಿಮಾನ ಇಳಿಸಲು ಡಿವಿಒಆರ್‌ (ಡಾಪ್ಲರ್‌ ವೆರಿ ಹೈ ಫ್ರಿಕ್ವೆನ್ಸಿ ಓಮ್ನಿ ರೇಂಜ್‌) ಹಾಗೂ ಡಿಎಂಇ (ಡಿಸ್ಟನ್ಸ್‌ ಮೇಜರಿಂಗ್‌ ಇಕ್ಯುಪ್ಮೆಂಟ್‌–ದೂರವನ್ನು ಅಳೆಯುವ ಸಾಧನ) ಎಂಬ ಎರಡು ಸೌಕರ್ಯಗಳು ಬೇಕು. ಈ ಎರಡನ್ನೂ ವಿದೇಶದಿಂದ ಖರೀದಿಸಲಾಗುತ್ತಿದೆ. ರಾತ್ರಿ ವೇಳೆ ರೆಡಾರ್‌ ಸಿಸ್ಟಂ ಜೆತೆಗೆ ಕೆಲಸ ಮಾಡುವ ಈ ಯಂತ್ರಗಳು ವಿಮಾನ ಚಾಲಕರಿಗೆ ಮಾರ್ಗದರ್ಶನ ನೀಡುತ್ತವೆ. ಈ ಸಲಕರಣೆಗೆ ₹ 40 ಕೋಟಿ ವೆಚ್ಚ ತಗುಲಲಿದೆ ಎಂಬುದು ವಿಮಾನ ನಿಲ್ದಾಣ ಮೂಲಗಳ ಮಾಹಿತಿ.

ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸರ್ಕಾರದ ಮಧ್ಯೆ ಈಗಾಗಲೇ ಮಾತುಕತೆ ನಡೆದಿದ್ದು, ಇದೇ ಏಪ್ರೀಲ್‌ ವೇಳೆಗೆ ರಾತ್ರಿ ವಿಮಾನ ಇಳಿಸುವ ಸಾಧ್ಯತೆಗಳು ಇವೆ ಎನ್ನುತ್ತವೆ ಮೂಲಗಳು. ಆಗ ಮುಂಬೈ, ದೆಹಲಿಯ ಸಂಚಾರ ಕೂಡ ಇನ್ನಷ್ಟು ಸುಗಮವಾಗಲಿದೆ. ದೇಶದ 24 ಗಂಟೆ ಕ್ರಿಯಾಶೀಲವಾದ ವಿಮಾನ ನಿಲ್ದಾಣಗಳ ಪಟ್ಟಿಗೆ ಕಲಬುರ್ಗಿಯೂ ಸೇರಲಿದೆ.‌‌‌

ಕಳೆದ ವರ್ಷವೇ ನೈಟ್‌ ಲ್ಯಾಂಡಿಂಗ್‌ನ ಪ್ರಕ್ರಿಯೆಗಳು ಆರಂಭವಾಗಿದ್ದವು. ಅದಕ್ಕೆ ಬೇಕಾದ ಎರಡು ಸಲಕರಣೆಗಳೂ ಈಗಾಗಲೇ ನಿಲ್ದಾಣಕ್ಕೆ ಬಂದಿವೆ. ಲಾಕ್‌ಡೌನ್‌ ಕಾರಣ ಈ ಪ್ರಕ್ರಿಯೆ ವಿಳಂಬವಾಗಿದೆ ಎನ್ನುತ್ತಾರೆ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್‌.

ತೊಗರಿ, ಅಕ್ಕಿ, ದ್ರಾಕ್ಷಿ: ಕಲಬುರ್ಗಿಯ ತೊಗರಿಬೇಳೆ ಹಾಗೂ ವಿಜಯಪುರದ ದ್ರಾಕ್ಷಿಗೆ ದೇಶ ಮಾತ್ರವಲ್ಲ; ವಿದೇಶಗಳಲ್ಲೂ ಸಾಕಷ್ಟು ಬೇಡಿಕೆ ಇದೆ. ಈ ಎರಡು ಬೆಳೆಗಳಿಗಾಗಿಯೇ ಒಂದು ಸರಕು ವಿಮಾನ ಅವಶ್ಯ ಎನ್ನುತ್ತಾರೆ ಪ್ರಗತಿಪರ ರೈತರು ಹಾಗೂ ವ್ಯಾಪಾರಿಗಳು.

ದೇಶದ ಒಟ್ಟು ತೊಗರಿ ಉತ್ಪಾದನೆಯಲ್ಲಿ ಶೇಕಡ 17ರಷ್ಟು ಕಲಬುರ್ಗಿ ಜಿಲ್ಲೆಯೊಂದೇ ಬೆಳೆಯುತ್ತದೆ. ಮಹಾರಾಷ್ಟ್ರ ರಾಜ್ಯದಲ್ಲಿ ಇದರ ಪ್ರಮಾಣ ಶೇ 30. ಆದರೆ, ಕಲಬುರ್ಗಿ ಮಣ್ಣಿನಲ್ಲಿ ಬೆಳೆದ ತೊಗರಿಯಷ್ಟು ಗುಣಮಟ್ಟ ಹಾಗೂ ಪೌಷ್ಟಿಕಾಂಶ ಇನ್ನೆಲ್ಲೂ ಇರುವುದಿಲ್ಲ ಎಂಬುದು ಕೃಷಿ ವಿಜ್ಞಾನಿಗಳ ಹೇಳಿಕೆ. ಸಹಜವಾಗಿಯೇ ಇಲ್ಲಿನ ಉತ್ಪನ್ನಕ್ಕೆ ನಾಲ್ಕೂ ದಿಕ್ಕಿನಿಂದ ಬೇಡಿಕೆ ಇದೆ. ಸದ್ಯ ಮಹಾರಾಷ್ಟ್ರ ತೊಗರಿಯನ್ನು ಮುಂಬಯಿ ಸರಕು ಸಾಗಣೆ ವಿಮಾನದ ಮೂಲಕ ಅವರು ವಿದೇಶಕ್ಕೂ ತಲುಪಿಸುತ್ತಿದ್ದಾರೆ. ಅದೇ ರೀತಿಯ ವಹಿವಾಟು ಇಲ್ಲಿಂದಲೂ ಸಾಧ್ಯ ಎನ್ನುವುದು ದಾಲ್‌ಮಿಲ್‌ ಮಾಲೀಕರ ಮಾತು.

ಜಿಲ್ಲೆಯ 3.73 ಲಕ್ಷ ಹೆಕ್ಟೇರ್‌ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್ ಸೇರಿದಂತೆ ಒಟ್ಟು 4.53 ಲಕ್ಷ ಹೆಕ್ಟೇರ್‌ನಲ್ಲಿ ಉತ್ಕೃಷ್ಟ ಮಟ್ಟದ ತೊಗರಿ ಪ್ರತಿ ವರ್ಷ ಬೆಳೆಯಲಾಗುತ್ತದೆ. ಇದನ್ನು ವಿಶ್ವದ ಮೂಲೆಮೂಲೆಗೂ ತಲುಪಿಸಬೇಕಾದರೆ ಕಾರ್ಗೊ ಸಂಚಾರ ಅಗತ್ಯ ಎಂಬುದು ಬೇಡಿಕೆ.‌

ಕಾರ್ಗೊ ವಿಮಾನ ಆರಂಭವಾದರೆ 300ಕ್ಕೂ ಹೆಚ್ಚು ದಾಲ್‌ಮಿಲ್‌ಗಳಿಗೆ, 10 ಸಕ್ಕರೆ ಕಾರ್ಖಾನ, 7 ಸಿಮೆಂಟ್‌ ಕಾರ್ಖಾನೆಗಳಿಗೆ ಅನುಕೂಲವಾಗಲಿದೆ. ಇದು ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ ಎನ್ನುತ್ತಾರೆ ಉದ್ಯಮಿಗಳು.

ಪ್ರಾಧಿಕಾರದ ಪಾತ್ರವೇನು?‌
ಇಲ್ಲಿಯ ವಿಮಾನ ನಿಲ್ದಾಣದಿಂದ ರಾತ್ರಿ ವೇಳೆಯೂ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅಗತ್ಯವಿರುವ ಕಾಮಗಾರಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಆರು ತಿಂಗಳ ಹಿಂದೆಯೇ ಅನುಮತಿ ನೀಡಿದೆ. ಇದಕ್ಕಾಗಿ ₹ 40 ಕೋಟಿ ವೆಚ್ಚದಲ್ಲಿ ಅಗತ್ಯ ವ್ಯವಸ್ಥೆಯ ನಿರ್ಮಾಣ ಕಾಮಗಾರಿ ಮತ್ತು ಉಪಕರಣಗಳ ಖರೀದಿಯನ್ನೂ ಮಾಡಲಾಗಿದೆ.

ರಾಜ್ಯ ಇತರ ವಿಮಾನ ನಿಲ್ದಾಣಗಳಿಗಿಂತಲೂ ಕಲಬುರ್ಗಿಯ ಏರ್‌ಪೋರ್ಟ್‌ಗೆ ಹೆಚ್ಚಿನ ಉತ್ಸಾಹ ಕಂಡುಬಂದಿದ್ದು, ಪ್ರಾಧಿಕಾರಿಕ್ಕೂ ಖುಷಿ ತಂದಿದೆ. ಹಾಗಾಗಿ, ರಾತ್ರಿ ವಿಮಾನ ಲ್ಯಾಂಡಿಂಗ್‌ ಹಾಗೂ ಟೇಕ್‌ಆಫ್‌ ವ್ಯವಸ್ಥೆಯನ್ನು ಬೇಗ ಆರಂಭಸಿಬೇಕು ಎಂಬುದು ಲೆಕ್ಕಾಚಾರ.

ವರವಾಗಲಿದೆ ವಿಶಾಲವಾದ ರನ್‌–ವೇ
ಇಡೀ ವಿಮಾನ ನಿಲ್ದಾಣಕ್ಕೆ 800 ಎಕರೆ ಜಮೀಮನು ಬಳಸಿಕೊಳ್ಳಲಾಗಿದೆ. ಅತ್ಯಂತ ವಿಶಾಲವಾದ ರನ್‌–ವೇ ಇದರ ಭವಿಷ್ಯವನ್ನು ಇನ್ನಷ್ಟು ಉಜ್ವಲಗೊಳಿಸಿದೆ. ಏಕಕಾಲಕ್ಕೆ ಮೂರು ವಿಮಾನಗಳನ್ನು ಲ್ಯಾಂಡಿಂಗ್‌ ಮಾಡಲು ಈಗಲೂ ವ್ಯವಸ್ಥೆ ಇದೆ.‌

ಬೆಂಗಳೂರಿನ ವಿಮಾನ ನಿಲ್ದಾಣದ ಬಳಿಕ ಎರಡನೇ ಅತಿ ದೊಡ್ಡ ರನ್‌ ವೇ ಹೊಂದಿದ ಖ್ಯಾತಿ ಇದರದು.
ಈಗಾಗಲೇ ಬೆಂಗಳೂರಿಗೆ ಎರಡು, ದೆಹಲಿ, ತಿರುಪತಿ, ಹುಬ್ಬಳ್ಳಿಗೆ ತಲಾ ಒಂದು ವಿಮಾನ ಹಾರಾಡುತ್ತಿದೆ.

ಗಮನಾರ್ಹ ಅಂಶಗಳು
l ಕಾರ್ಗೊ ವಿಮಾನ ಆರಂಭವಾದರೆ ಇನ್‌ಲ್ಯಾಂಡ್‌ ಕಂಟೇನರ್‌ ಡಿಪೊ (ಐಸಿಡಿ) ನಿರ್ಮಾಣ ಮಾಡುವುದು ಅನಿವಾರ್ಯ ಆಗಲಿದೆ.

l ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಈಗ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ‘ರೊಸೆನ್ ಬೌರ್ (ROSENBAUER)‘ ಎಂಬ ₹ 6 ಕೋಟಿ ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆಯಾಗಿದೆ.‌

l ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪಸಿಂಗ್‌ ಖರೋಲಾ ಅವರು, ನಾಗರಿಕ ವಿಮಾನಯಾನದ ಜೊತೆಗೆ ಸರಕು ಸಾಗಣೆಗೂ ಇದು ಹೆಚ್ಚು ಪ್ರಶಸ್ತವಾಗಿದೆ ಎಂದು ಹೇಳಿದ್ದಾರೆ.

l ಉತ್ತರ ಭಾರತದಲ್ಲಿ ಹವಾಮಾನ ವೈಪರೀತ್ಯ ಉಂಟಾದಾಗ ಇಂದಿರಾಗಾಂಧಿ ಉಡಾಣ್ ಅಕಾಡೆಮಿಯು ವಿಮಾನ ಚಾಲನಾ ತರಬೇತಿಯನ್ನು ತಾತ್ಕಾಲಿಕವಾಗಿ ಕಲಬುರ್ಗಿಗೆ ಸ್ಥಳಾಂತರಿಸಿದ್ದು, ಈ ನಿಲ್ದಾಣದ ಸಾಧ್ಯತೆಗಳನ್ನು ಹೆಚ್ಚುವಂತೆ ಮಾಡಿದೆ.

l ಪ್ರಸ್ತುತ ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಮಾತ್ರ ಪೈಲಟ್‌ ತರಬೇತಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರ್ಗಿಯಲ್ಲೂ ಇದನ್ನು ಆರಂಭಿಸಲು ಕೇಂದ್ರ ಆಸಕ್ತಿ ವಹಿಸಿತ್ತು. ಆದರೆ, ರಾಜ್ಯ ಸರ್ಕಾರದ ನಿರಾಸಕ್ತಿ ಕಾರಣ ಪೆಂಡಿಂಗ್‌ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.