ಕಲಬುರ್ಗಿ:‘ಶಾಲಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಶಾಲೆಗಳಲ್ಲಿ ತಿಂಗಳಲ್ಲಿ ಎರಡು ದಿನ ಬ್ಯಾಗ್ ರಹಿತ ದಿನವನ್ನಾಗಿ ಘೋಷಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಲಾ ಬ್ಯಾಗ್ ಮಕ್ಕಳಿಗೆ ಹೊರೆಯಾಗುತ್ತಿದೆ ಎಂದು ಪೋಷಕರು ಹಾಗೂ ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ತಿಂಗಳಲ್ಲಿ ಎರಡು ಶನಿವಾರ ಬ್ಯಾಗ್ ರಹಿತ ದಿನವೆಂದು ಘೋಷಿಸಲು ತೀರ್ಮಾನಿಸಲಾಗಿದೆ. ಅಂದು ಪಾಠಗಳು ಇರುವುದಿಲ್ಲ. ಕ್ರೀಡೆ ಹಾಗೂ ಇತರ ಚಟುವಟಿಕೆಗಳು ನಡೆಯಲಿವೆ. ತಿಂಗಳ ಎಲ್ಲ ಶನಿವಾರಗಳಂದೂ ಬ್ಯಾಗ್ ರಹಿತ ದಿನವನ್ನಾಗಿ ಘೋಷಿಸುವ ಪ್ರಸ್ತಾವಗಳಿದ್ದವು. ಆದರೆ, ಪಠ್ಯಕ್ರಮವನ್ನು ಪೂರ್ಣಗೊಳಿಸುವುದು ವಿಳಂಬವಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದರಿಂದ ತಿಂಗಳಲ್ಲಿ ಎರಡು ದಿನ ಮಾತ್ರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ’ ಎಂದರು.
‘ಮಕ್ಕಳಲ್ಲಿ ಮೊಬೈಲ್ ಗೀಳು ಬಹಳ ಅಪಾಯಕಾರಿ ಪ್ರವೃತ್ತಿಯಾಗಿ ಬೆಳೆಯುತ್ತಿದೆ. ಇದರಿಂದ ಬಳಲುತ್ತಿರುವ ಮಕ್ಕಳಿಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಕೌನ್ಸೆಲಿಂಗ್ ಕೊಡಿಸುವ ಚಿಂತನೆ ಇದೆ. ಶಾಲಾ ಸಮಯದಲ್ಲಿ ಶಿಕ್ಷಕರು ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ಮಾತ್ರ ಮೊಬೈಲ್ ಬಳಸಬಹುದು. ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ’ ಎಂದು ಹೇಳಿದರು.
‘ಮನೆಯಲ್ಲಿಯೂ ಮಕ್ಕಳು ಮೊಬೈಲ್ ಗೀಳು ಬೆಳೆಸಿಕೊಳ್ಳದಂತೆ ಶಿಕ್ಷಣ ಇಲಾಖೆ ಪೋಷಕರಿಗೆ ಮನವಿ ಮಾಡಿಕೊಳ್ಳಲಿದೆ. ಮೊಬೈಲ್ ಕೊಡುವ ಬದಲು ಎಲ್ಲರೂ ಒಟ್ಟಾಗಿ ಮಕ್ಕಳೊಂದಿಗೆ ಇಡೀ ದಿನದ ಬೆಳವಣಿಗೆಗಳ ಬಗ್ಗೆ ಎರಡು ಗಂಟೆ ಮೆಲುಕು ಹಾಕಬಹುದು. ಕೆಲವರು ಟಿ.ವಿ. ಕೇಬಲ್ ತೆಗೆಸುವುದಾಗಿಯೂ ನನ್ನ ಬಳಿ ಹೇಳಿಕೊಂಡಿದ್ದಾರೆ’ ಎಂದು ಸುರೇಶ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.