ADVERTISEMENT

ಕಲಬುರಗಿ: ಭಯದ ನೆರಳಲ್ಲಿ ಪಾಠ ಕೇಳುವ ಮಕ್ಕಳು

ಕರುಣೇಶ್ವರನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೌಕರ್ಯಗಳ ಕೊರತೆ

ಹನಮಂತ ಕೊಪ್ಪದ
Published 9 ಜನವರಿ 2022, 4:00 IST
Last Updated 9 ಜನವರಿ 2022, 4:00 IST
ಕಲಬುರಗಿಯ ಕರುಣೇಶ್ವರನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಳ ಆವರಣದಲ್ಲಿದ್ದ ಮೇಲ್ಚಾವಣಿ ಕಿತ್ತುಹೋಗಿದೆ
ಕಲಬುರಗಿಯ ಕರುಣೇಶ್ವರನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಳ ಆವರಣದಲ್ಲಿದ್ದ ಮೇಲ್ಚಾವಣಿ ಕಿತ್ತುಹೋಗಿದೆ   

ಕಲಬುರಗಿ: ಕಿತ್ತು ಹೋದ ಟೈಲ್ಸ್‌ಗಳು, ಸುಣ್ಣ ಬಣ್ಣ ಕಾಣದ ಕಟ್ಟಡ, ಸೋರುತ್ತಿರುವ ಮಾಳಿಗೆ, ಇದ್ದೂ ಇಲ್ಲದಂತಾಗಿರುವ ಶೌಚಾಲಯ, ಶಿಥಿಲಗೊಂಡಿರುವಕಟ್ಟಡದ ಮಧ್ಯೆ ಜೀವ ಭಯದಲ್ಲಿ ಪಾಠ ಕೇಳುತ್ತಿರುವ ಮಕ್ಕಳು...

ಇಲ್ಲಿನ ಕರುಣೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರವೇಶಿಸುತ್ತಿದ್ದಂತೆ ಕಂಡು ಬರುವ ದೃಶ್ಯಗಳಿವು.

2002ರಲ್ಲಿ ಆರಂಭವಾಗಿರುವ ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು 24 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರಭಾರಿ ಮುಖ್ಯಶಿಕ್ಷಕಿ, ಶಿಕ್ಷಕಿ ಹಾಗೂ ಅಡುಗೆ ತಯಾರಕಿ ಸೇರಿ ಮೂವರು ಸಿಬ್ಬಂದಿ ಇದ್ದಾರೆ.

ADVERTISEMENT

ಎರಡು ದಶಕಗಳ ಹಿಂದೆ ಲೋಕೋಪಯೋಗಿ ಇಲಾಖೆ ನಿರ್ಮಿಸಿದ್ದ ಶಾಲಾ ಕಟ್ಟಡ ಈಗ ಬಹುತೇಕ ಪಾಳು ಬಿದ್ದಿದೆ. ದಶಕದ ಹಿಂದೆ ಇಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದರು. ಶಾಲೆಯ ದುಸ್ಥಿತಿ ನೋಡಿ ಭಯದಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುವಂತಾಗಿದೆ. ಇದರಿಂದ ದಾಖಲಾತಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಶಾಲೆಯ ಮುಂದೆ ಇದ್ದ ಕೈಪಂಪ್ ಸಹ ಕೆಟ್ಟು ನಿಂತಿದೆ. ಬಿಸಿಯೂಟ ತಯಾರಿಸಲು ಹಾಗೂ ಕುಡಿಯಲು ನೀರನ್ನು ಹೊರಗಡೆಯಿಂದ ತರಬೇಕಾದ ಸ್ಥಿತಿಯಿದೆ. ನೀರಿನ ಕೊರತೆಯಿಂದಾಗಿ ಇಲ್ಲಿರುವ ಎರಡು ಶೌಚಾಲಯಗಳು ಇದ್ದೂ ಇಲ್ಲದಂತಾಗಿದೆ.

ಇದರಿಂದ ಶೌಚಕ್ಕಾಗಿ ಪರದಾಡುವ ಪರಿಸ್ಥಿತಿಯಿದೆ.

ಉದ್ಯಾನದ ಆವರಣದಲ್ಲಿ ಶಾಲೆ ಇದ್ದೂ, ಉದ್ಯಾನದ ತುಂಬಾ ಗಿಡ ಗಂಟಿ ಬೆಳೆದು ನಿಂತಿರುವುದರಿಂದ ಮಕ್ಕಳಿಗೆ ಆಟವಾಡಲು ಸ್ಥಳವಿಲ್ಲದಂತಾಗಿದೆ.

ಶಾಲೆಯ ಹತ್ತಿರದಲ್ಲೇ ಮೂರ್ನಾಲ್ಕು ಕಾನ್ವೆಂಟ್‌ಗಳಿವೆ. ಬಹುತೇಕ ಜನರು ಈ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಅಗತ್ಯ ಮೂಲಸೌಕರ್ಯ ಒದಗಿಸಿ ದಾಖಲಾತಿ ಹೆಚ್ಚಿಸುವ ಪ್ರಯತ್ನವನ್ನು ಶಿಕ್ಷಣ ಇಲಾಖೆ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.

ಶಾಲೆಯ ಆವರಣ ‘ದುರ್ಬಳಕೆ’
ಈ ಶಾಲೆಯ ಒಳ ಆವರಣದಲ್ಲಿ ಮೇಲ್ಚಾವಣಿ ನಿರ್ಮಿಸಲಾಗಿತ್ತು. ಆದರೆ ಹಲವು ವರ್ಷಗಳ ಹಿಂದೆ ಅದು ಬಿದ್ದಿದೆ. ಇದರಿಂದ ಗೋಡೆ ಹತ್ತಿ ಶಾಲೆಗೆ ಸುಲಭವಾಗಿ ಪ್ರವೇಶ ಮಾಡಬಹುದಾಗಿದೆ.

ನಾಲ್ಕು ಕೊಠಡಿಗಳಲ್ಲಿ ಕೇವಲ ಒಂದು ಕೋಣೆಗೆ ಮಾತ್ರ ಬಾಗಿಲು ಇದೆ (ಕಟ್ಟಡದ ವಿನ್ಯಾಸವೇ ಹಾಗಿದೆ). ಲಾಕ್‌ಡೌನ್ ಮತ್ತು ಶಾಲೆಯ ರಜೆ ದಿನಗಳಲ್ಲಿ ಕೆಲವು ಜನರು ಶಾಲೆಯ ಆವರಣವನ್ನು ಜೂಜು, ಕುಡಿತದಂಥ ಚಟುವಟಿಕೆಗಳಿಗೆ ಬಳಸುತ್ತಿದ್ದರು. ಇದರಿಂದಾಗಿ ದುರ್ನಾತದಿಂದಾಗಿ ಮಕ್ಕಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ಶಿಕ್ಷಕರು.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಯ ಒಳ ಆವರಣದಲ್ಲಿ ಮೇಲ್ಚಾವಣಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಸ್ಥಳವನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಪಾಲಕರ ಆಗ್ರಹ.

*
ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿದ್ದಾರೆ. ಶೀಘ್ರದಲ್ಲೇ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.
-ಮಾಲಾ ಎಸ್.ಕಠಾರಿ, ಪ್ರಭಾರ ಮುಖ್ಯಶಿಕ್ಷಕಿ

*
ಎರಡು ವರ್ಷಗಳ ಹಿಂದೆ ಹಾಜರಾತಿ ಕ್ರಮವಾಗಿ 14 ಮತ್ತು 17 ಇತ್ತು. ಪ್ರಸಕ್ತ ವರ್ಷ 24ಕ್ಕೇರಿದೆ. ಶಾಲೆಗೆ ಸೌಕರ್ಯ ಒದಗಿಸಿದರೆ ದಾಖಲಾತಿ ಹೆಚ್ಚುತ್ತದೆ.
- ಪರಿಮಳ ಎಂ.ಕುಲಕರ್ಣಿ, ಸಹ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.