ADVERTISEMENT

ಕಲಬುರ್ಗಿ: ಜನರ ನೆಮ್ಮದಿ ಕಸಿದ ಕೊಳಚೆ ನೀರು

ಅರಣ್ಯರೋದನವಾದ ವಾರ್ಡ್‌ ನಂ.47ರ ನಿವಾಸಿಗಳ ಗೋಳು

ಹನಮಂತ ಕೊಪ್ಪದ
Published 29 ಜೂನ್ 2021, 19:30 IST
Last Updated 29 ಜೂನ್ 2021, 19:30 IST
ಕಲಬುರ್ಗಿಯ ವಾರ್ಡ್ ನಂ.47ರ ಮನೆಗಳ ಮುಂದೆ ನಿಂತಿರುವ ಕೊಳಚೆ ನೀರು
ಕಲಬುರ್ಗಿಯ ವಾರ್ಡ್ ನಂ.47ರ ಮನೆಗಳ ಮುಂದೆ ನಿಂತಿರುವ ಕೊಳಚೆ ನೀರು   

ಕಲಬುರ್ಗಿ: ಪ್ರತಿ ಸಲ ಮಳೆ ಬಂದಾಗಲೆಲ್ಲ ಈ ವಾರ್ಡ್‌ ನಿವಾಸಿಗಳಿಗೆ ಎಲ್ಲಿಲ್ಲದ ಆತಂಕ. ಈ ಆತಂಕ ಮಳೆ ನೀರಿಗಲ್ಲ. ಆ ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗುವ ಕೊಳಚೆ ನೀರಿಗೆ!

ಇದು ನಗರದ ರಾಜಾಪುರದಲ್ಲಿರುವ ವಾರ್ಡ್‌ ನಂ.47ರಲ್ಲಿ ಕಂಡು ಬರುವ ದುಸ್ಥಿತಿ.

ಈ ವಾರ್ಡ್‌ನಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ವಾಸವಾಗಿರುವವರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಳಿಜಾರು ಪ್ರದೇಶದಲ್ಲಿರುವ ಕಾರಣ ಮಳೆ ಬಂದಾಗಲೆಲ್ಲ ಸುತ್ತಮುತ್ತಲಿನ ಬಡಾವಣೆಗಳ ನೀರು ಈ ವಾರ್ಡ್‌ನಲ್ಲಿರುವ ಸುಮಾರು 40 ಮನೆಗಳ ಮುಂದೆ ನಿಲ್ಲುತ್ತಿದ್ದು, ನಿವಾಸಿಗಳು ನಿತ್ಯ ಹಿಂಸೆ ಅನುಭವಿಸುವಂತಾಗಿದೆ.

ADVERTISEMENT

ಮಳೆ ನೀರಿನ ರಭಸದಿಂದಾಗಿ ಇಲ್ಲಿನ ಸಿಸಿ ರಸ್ತೆ ಹದಗೆಟ್ಟು ಕೆಸರು ಗದ್ದೆಯಾಗಿದೆ. ಎರಡು ತಿಂಗಳ ಹಿಂದೆ ಇಲ್ಲಿರುವ ಒಳಚರಂಡಿ ಪೈಪ್‌ ಒಡೆದ ಪರಿಣಾಮ ಕೊಳಚೆ ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದೆ. ದುರ್ನಾತದಿಂದಾಗಿ ಸದಾ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.

ಕೊಳಚೆ ನೀರಿನ ಹರಿವಿಗೆ ಸಮರ್ಪಕ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ವಾರ್ಡ್‌ನ ಮನೆಗಳ ಮುಂದಿರುವ ಚರಂಡಿಗಳಲ್ಲಿ ಹೂಳು ತುಂಬಿ ಕೊಂಡಿದೆ. ಈ ಚರಂಡಿಗಳು ಸುಮಾರು ಐದಾರು ಅಡಿ ಆಳವಾಗಿದ್ದು, ರಸ್ತೆಯಿಂದ ಮನೆಗಳ ಸಂಪರ್ಕವನ್ನೇ ಕಡಿತಗೊಳಿಸಿವೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಗುಂಡಿ ದಾಟಲು ಸಿಮೆಂಟ್ ಕಂಬಗಳನ್ನು ಅಡ್ಡಲಾಗಿ ಹಾಕಿದ್ದಾರೆ. ಚಿಕ್ಕ ಮಕ್ಕಳು ಇವುಗಳನ್ನು ದಾಟುವಾಗ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ವಾರ್ಡ್‌ನ ಖಾಲಿ ನಿವೇಶನಗಳಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಗಿಡ-ಗಂಟಿಗಳು ಸೊಳ್ಳೆಗಳ ತಾಣಗಳಾಗಿದ್ದು, ಅವುಗಳ ಸುತ್ತಮುತ್ತ ವಾಸಿಸುವ ಜನರು ತೀವ್ರ ಹಿಂಸೆ ಅನುಭವಿಸುತ್ತಿದ್ದಾರೆ. ನಿರ್ವಹಣೆ ಕೊರತೆಯಿಂದ ಅವು ಹುಳ, ಹುಪ್ಪಟ್ಟೆ, ಹಂದಿಗಳ ತಾಣವಾಗಿ ಪರಿಣಮಿಸಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ನಿವಾಸಿಗಳು ಇದ್ದಾರೆ.

ದುರ್ನಾತದಿಂದ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದೇವೆ. ಮನೆ ಬಿಟ್ಟು ಹೊರಬಾರದಂಥ ಸ್ಥಿತಿಯಿದೆ. ಸಮಸ್ಯೆ ನಿವಾರಿಸುವಂತೆ ಹಲವು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಇದುವರೆಗೂ ಇಲ್ಲಿಗೆ ಅಧಿಕಾರಿಗಳು ಇಲ್ಲಿಗೆ ಭೇಟಿ ಕೊಟ್ಟಿಲ್ಲ. ನಮ್ಮ ಗೋಳು ಅರಣ್ಯರೋದನವಾಗಿದೆ ಎನ್ನುತ್ತಾರೆ ವಾರ್ಡ್‌ ನಿವಾಸಿಗಳು.

ವಾರ್ಡ್‌ನಲ್ಲಿರುವ ಒಳಚರಂಡಿ ಹಾಗೂ ಸಿಸಿ ರಸ್ತೆಯನ್ನು ದುರಸ್ತಿ ಮಾಡಬೇಕು. ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರು ಒದಗಿಸಬೇಕು. ಒಂದು ವೇಳೆ ಬೇಡಿಕೆಗಳನ್ನು ಈಡೇರಿಸದಿದ್ದರೆ ವಾರ್ಡ್‌ನ ನಿವಾಸಿಗಳೆಲ್ಲ ಸೇರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.

ಕಸ ವಿಲೇವಾರಿಯದ್ದೇ ಸಮಸ್ಯೆ
ವಾರ್ಡ್‌ನಲ್ಲಿ ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ವಾರದಲ್ಲಿ ಒಂದು ದಿನ ಮಾತ್ರ ಕಸ ತೆಗೆಯಲಾಗುತ್ತಿದೆ ಎನ್ನುತ್ತಾರೆ ಇಲ್ಲಿನ ಮಹಿಳೆಯರು.

ಪಾಲಿಕೆಯ ಪೌರಕಾರ್ಮಿಕರು ಪ್ರತಿನಿತ್ಯ ಮನೆಗಳ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಕಸವು ಚರಂಡಿ ಹಾಗೂ ರಸ್ತೆಗಳಿಗೆ ಹರಡಿಕೊಂಡಿದ್ದು, ಇಡೀ ಪ್ರದೇಶ ದುರ್ನಾತದಿಂದ ಕೂಡಿದೆ. ಎಲ್ಲೆಡೆ ಹರಡಿಕೊಂಡಿರುವ ಕಸ, ಮೂಗಿಗೆ ತಟ್ಟುವ ಗಬ್ಬು ವಾಸನೆಯಿಂದಾಗಿ ಮಹಿಳೆಯರು ಅಂಗಳದಲ್ಲಿ ಕುಳಿತುಕೊಂಡು ಮಾತನಾಡದಂಥ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದರು.

ಶುದ್ಧ ನೀರು ಮರೀಚಿಕೆ
ಇಲ್ಲಿನ ಮನೆಗಳಿಗೆ ಇದುವರೆಗೂ ನಳದ ಸಂಪರ್ಕ ಕಲ್ಪಿಸಿಲ್ಲ. ವಾರ್ಡ್‌ನಲ್ಲಿ ಒಂದೇ ಒಂದು ಬೊರ್‌ವೆಲ್ ಇದ್ದು, ಅಲ್ಲಿ ದೊರೆಯುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಬೊರ್‌ವೆಲ್ ಕೆಟ್ಟು ನಿಂತಾಗ ಅಕ್ಕ ಪಕ್ಕದ ಬಡಾವಣೆಗಳಿಗೆ ಹೋಗಿ ನೀರು ತರಬೇಕಾದ ಪರಿಸ್ಥಿತಿಯಿದೆ. ಶುದ್ಧ ನೀರು ಒದಗಿಸಲು ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ವಾರ್ಡ್‌ ನಿವಾಸಿಗಳು ಮನವಿ ಮಾಡಿದರು.

*
ಎರಡು ತಿಂಗಳ ಹಿಂದೆ ಮ್ಯಾನ್‌ಹೋಲ್ ಒಡೆದಿದ್ದು, ಅಲ್ಲಿನ ಕೊಳಚೆ ನೀರು ಮನೆಗಳ ಮುಂದೆ ನಿಲ್ಲುತ್ತಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ದೊರೆತಿಲ್ಲ.
-ರಾಜು ಎಸ್.ಕಟ್ಟಿಮನಿ, ಅಧ್ಯಕ್ಷ, ಬಾಬು ಜಗಜೀವನರಾಮ್ ತರುಣ ಸಂಘ

*
ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಕಳಿಸಿ ಪರಿಶೀಲನೆ ನಡೆಸಲಾಗುವುದು. ವಾರ್ಡ್ ನಂ.47ರ ನಿವಾಸಿಗಳ ಸಮಸ್ಯೆ ನಿವಾರಣೆ ಕ್ರಮ ಕೈಗೊಳ್ಳುತ್ತೇವೆ‌.
-ಸ್ನೇಹಲ್ ಸುಧಾಕರ ಲೋಖಂಡೆ, ಪಾಲಿಕೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.