ಕಲಬುರ್ಗಿ: ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ 80 ಗ್ರಾಮಗಳಿಗೆ ಇನ್ನೂ ಬಸ್ ಸೌಕರ್ಯವೇ ಇಲ್ಲ!
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಸಂಸ್ಥೆಯು ಈ ಮಾಹಿತಿ ನೀಡಿದೆ. ಅದರಲ್ಲೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ ಜಿಲ್ಲೆಯಲ್ಲಿ ಅತ್ಯಧಿಕ, ಅಂದರೆ 33 ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ. ಈಶಾನ್ಯ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿ ಇರುವ ಕಲಬುರ್ಗಿ ಜಿಲ್ಲೆಯ ಎಂಟು ಗ್ರಾಮಗಳಿಗೂ ಬಸ್‌ಗಳು ಇನ್ನೂ ಹೋಗುತ್ತಿಲ್ಲ ಎಂದು ವಕೀಲ ಭೀಮನಗೌಡ ಪರಗೊಂಡ ಅವರ ಆರ್‌ಟಿಐ ಅರ್ಜಿಗೆ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ತಿಳಿಸಿದ್ದಾರೆ.
ಸದ್ಯದ ಸಮಸ್ಯೆಗಳೇನು?: 80 ಗ್ರಾಮಗಳಿಗೆ ಬಸ್ ಸೌಕರ್ಯ ಏಕಿಲ್ಲ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ‘ಪ್ರಜಾವಾಣಿ’ಯು ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಹಲವು ಸಂಗತಿಗಳು ಬೆಳಕಿಗೆ ಬಂದವು.
ಬಳ್ಳಾರಿ ಜಿಲ್ಲೆಯ ಕೆಲ ಗ್ರಾಮಗಳಿಗೆ ಸಂಚರಿಸಬೇಕೆಂದರೆ ಆಂಧ್ರಪ್ರದೇಶದ ಹಳ್ಳಿಗಳನ್ನು ಹಾಯ್ದು ಹೋಗಬೇಕು. ಹಾಗಾಗಿ, ಆಂಧ್ರಪ್ರದೇಶ ಸರ್ಕಾರದ ವಿಶೇಷ ಪರ್ಮಿಟ್ ಬೇಕಂತೆ. ಅಲ್ಲದೇ, ಅಂತಹ ಗ್ರಾಮಗಳಲ್ಲಿ ಖಾಸಗಿ ಬಸ್‌ಗಳೇ ಹೆಚ್ಚು ಸಂಖ್ಯೆಯಲ್ಲಿರುವುದರಿಂದ ಸಂಸ್ಥೆಗೆ ಅಂತಹ ವರಮಾನ ಬರುವುದಿಲ್ಲ ಎಂಬ ಉದ್ದೇಶದಿಂದ ಪರ್ಮಿಟ್ ಪಡೆದಿಲ್ಲ ಎಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇನ್ನು ಕೆಲವು ಗ್ರಾಮಗಳು ಹೆದ್ದಾರಿಯ ಪಕ್ಕದಲ್ಲೇ ಇರುವುದರಿಂದ ಆ ಗ್ರಾಮಗಳಿಗೆ ಬಸ್‌ಗಳು ವ್ಹಾಯಾ ಹೋಗುವುದಿಲ್ಲ. ಸುಮಾರು ಒಂದರಿಂದ ಎರಡು ಕಿ.ಮೀ. ದೂರವಿರುವ ಹಳ್ಳಿಗಳ ಜನತೆ ಮುಖ್ಯ ರಸ್ತೆಗೇ ಬಂದು ನಿಂತಿರುತ್ತಾರೆ. ಹೀಗಾಗಿ, ಖುದ್ದಾಗಿ ಆ ಗ್ರಾಮಕ್ಕೆ ಪ್ರತ್ಯೇಕ ಬಸ್ ಓಡಿಸುವ ಅವಶ್ಯಕತೆ ಕಂಡು ಬಂದಿಲ್ಲ ಎಂದು ಅವರು ಸಮಜಾಯಿಷಿ ನೀಡಿದರು.
ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ 2, ಕಲಬುರ್ಗಿ ತಾಲ್ಲೂಕಿನ 2, ಯಡ್ರಾಮಿ ತಾಲ್ಲೂಕಿನ 2, ಆಳಂದ ಹಾಗೂ ಜೇವರ್ಗಿ ತಾಲ್ಲೂಕಿನ ತಲಾ 1 ಗ್ರಾಮಗಳಿಗೆ ಬಸ್ ಸೌಕರ್ಯವಿಲ್ಲ. ಯಾದಗಿರಿ ತಾಲ್ಲೂಕಿನ 1, ಶಹಾಪುರ ತಾಲ್ಲೂಕಿನ 2, ಸುರಪುರ ತಾಲ್ಲೂಕಿನ 2 ಗ್ರಾಮಗಳಿಗೆ ಬಸ್ ಇಲ್ಲ. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ 2, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ತಲಾ 1, ಕಮಲನಗರ ತಾಲ್ಲೂಕಿನ 2 ಗ್ರಾಮಗಳಿಗೆ ಬಸ್ ಸೌಲಭ್ಯವಿಲ್ಲ.
ಹೊಸಪೇಟೆ–5, ಕೂಡ್ಲಿಗಿ–7, ಹೂವಿನ ಹಡಗಲಿ–6, ಸಂಡೂರು–3 ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ 1 ಗ್ರಾಮಕ್ಕೆ ಬಸ್‌ಗಳಿಲ್ಲ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ 2 ಗ್ರಾಮಗಳಿಗೆ ಬಸ್ ಹೋಗುತ್ತಿಲ್ಲ. ರಾಯಚೂರು–4, ಲಿಂಗಸುಗೂರು, ಸಿಂಧನೂರು ಹಾಗೂ ಮಾನ್ವಿ ತಾಲ್ಲೂಕಿನ ತಲಾ 1, ದೇವದುರ್ಗ ತಾಲ್ಲೂಕಿನ 4 ಗ್ರಾಮಗಳಿಗೆ ಸಾರಿಗೆ ಸಂಸ್ಥೆಯ ಬಸ್‌ಗಳು ಹೋಗುತ್ತಿಲ್ಲ.
ವಿಜಯಪುರ ಜಿಲ್ಲೆಯ ಚಡಚಣ–4, ಬಸವನ ಬಾಗೇವಾಡಿ–3, ಮುದ್ದೇಬಿಹಾಳ–2, ಸಿಂದಗಿ–5 ಹಾಗೂ ದೇವರ ಹಿಪ್ಪರಗಿ ತಾಲ್ಲೂಕಿನ ಒಂದು ಗ್ರಾಮಕ್ಕೆ ಇನ್ನೂ ಬಸ್ ಸೌಲಭ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.