ADVERTISEMENT

ಕಲಬುರಗಿ | ಮಳೆ ನೀರು ಸಂಗ್ರಹಕ್ಕಿಲ್ಲ ಆಸಕ್ತಿ; ಬೇಕಿದೆ ಜಾಗೃತಿ

ಸೂರಿನ ಮೇಲೆ ಸುರಿಯುವ ಮಳೆ ನೀರಿನ ಸದ್ಬಳಕೆಗೆ ಜನರಿಗಿಲ್ಲ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 5:31 IST
Last Updated 8 ಜುಲೈ 2024, 5:31 IST
<div class="paragraphs"><p><strong>ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ಪ‍ಾಲಿಕೆ ನಿರ್ಮಿಸುತ್ತಿರುವ ಮಳೆ ನೀರು ಸಂಗ್ರಹ ವ್ಯವಸ್ಥೆಯ ಥೀಮ್‌ ಪಾರ್ಕ್‌&nbsp; –ಪ್ರಜಾವಾಣಿ ಚಿತ್ರ</strong></p></div>

ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ಪ‍ಾಲಿಕೆ ನಿರ್ಮಿಸುತ್ತಿರುವ ಮಳೆ ನೀರು ಸಂಗ್ರಹ ವ್ಯವಸ್ಥೆಯ ಥೀಮ್‌ ಪಾರ್ಕ್‌  –ಪ್ರಜಾವಾಣಿ ಚಿತ್ರ

   

ಕಲಬುರಗಿ: ಅದು ಮಧ್ಯಾಹ್ನದ ಹೊತ್ತು. ದಟ್ಟ ಮೋಡ ಕವಿದಿತ್ತು. ಕರುಣೇಶ್ವರ ನಗರದ ಮನೆಯ ಕೊಠಡಿಯೊಂದರಲ್ಲಿ ಕುಳಿತ್ತಿದ್ದ 65 ವರ್ಷ ಹಿರಿಯ ವ್ಯಕ್ತಿ ಜಲ ಸಂಪತ್ತಿನ ಸದ್ಬಳಕೆ ಕುರಿತು ಮಾತನಾಡುತ್ತಿದ್ದರು. ಅಷ್ಟೊತ್ತಿಗೆ ಆಗಸದಲ್ಲಿ ದಟ್ಟೈಸಿದ್ದ ಮೋಡಗಳು ಬಿರುಸಾಗಿ ಮಳೆ ಸುರಿಸಿದವು.

ಆ ಹಿರಿಯ ವ್ಯಕ್ತಿ ಲಗುಬಗೆಯಿಂದ ಕೊಠಡಿಯಿಂದ ಎದ್ದು ಹೊರಬಂದರು. ಪೈಪ್‌ವೊಂದರ ವಾಲ್ವ್‌ ತಿರುಗಿಸಿ, ತೋರಿಸಿದರು. ಅಲ್ಲಿತ್ತು ನೀರಿನ ಭೋರ್ಗರೆತ. ಮತ್ತೆ ವಾಲ್ವ್‌ ಬಂದ್‌ ಮಾಡಿದ ಅವರು ಪಕ್ಕದಲ್ಲೇ ಇದ್ದ 2x2 ಕಪ್ಪುಪರಸಿ ಕಲ್ಲು ತೆಗೆದರು. ಪೈಪ್‌ನಿಂದ ಇಳಿದ ಮಳೆ ನೀರು ನಿಧಾನಕ್ಕೆ ಕಪ್ಪು ಜಲ್ಲಿಕಲ್ಲುಗಳ ನಡುವೆ ಹರಡಿ ಸಂಪ್‌ ಸೇರುವುದನ್ನೂ ಅವರು ತೋರಿಸಿದರು.

ADVERTISEMENT

ಆ ಹಿರಿಯ ಜೀವದ ಹೆಸರು ಮಲ್ಲಿಕಾರ್ಜುನ ಕೆ.ಪಾಟೀಲ. ವೃತ್ತಿಯಿಂದ ಗುತ್ತಿಗೆದಾರ. ಏಳು ವರ್ಷಗಳ ಹಿಂದೆಯೇ ‘ಸುಸ್ಥಿರ ಭವಿಷ್ಯಕ್ಕಾಗಿ’ ತಮ್ಮ ಮನೆಯಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಆ ನೀರು ಶೇಖರಿಸಲು 35 ಸಾವಿರ ಲೀಟರ್‌ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ಗಳನ್ನೂ ನಿರ್ಮಿಸಿಕೊಂಡಿದ್ದಾರೆ. ಅದೂ ತುಂಬಿದರೆ, ಕೊಳವೆ ಬಾವಿಗೆ ಅಂತರ್ಜಲ ಮರುಪೂರಣ ಮಾಡುತ್ತಾರೆ!

‘ಮನೆ ಕಟ್ಟುವಾಗ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ಷರತ್ತಿತ್ತು. ಆ ಷರತ್ತು ಪಾಲಿಸಲು ಚಿತ್ರದುರ್ಗದ ಮಳೆ ನೀರು ಸಂಗ್ರಹ ತಜ್ಞ ಎನ್‌.ಜೆ.ದೇವರಾಜ ರೆಡ್ಡಿ ನೆರವಾದರು. ಇದೀಗ ಸಂಪ್‌ನಲ್ಲಿ ಸಂಗ್ರಹಿಸಿದ ಮಳೆ ನೀರನ್ನೇ ಫಿಲ್ಟರ್‌ ಮಾಡಿ ಕುಡಿಯಲು, ಅಡುಗೆಗೆ ಬಳಸುತ್ತೇವೆ. ಬಟ್ಟೆ–ಪಾತ್ರೆ ಸೇರಿದಂತೆ ದಿನ ಬಳಕೆಗೂ ಉಪಯೋಗಿಸುತ್ತೇವೆ’ ಎನ್ನುವ ಮಲ್ಲಿಕಾರ್ಜುನ ಅವರು ಈತನಕ ಪಾಲಿಕೆಯ ನಲ್ಲಿ ಸಂಪರ್ಕ ಪಡೆದಿಲ್ಲ. ಈಬಾರಿಯ ಬರಗಾಲದ ಬಿರು ಬೇಸಿಗೆಯಲ್ಲೂ ಅವರ ಕೊಳವೆಬಾವಿಯಲ್ಲಿ ನೀರು ಸ್ವಲ್ಪವೂ ಕಡಿಮೆಯಾಗಿಲ್ಲವಂತೆ.

ಯಾವುದೇ ಕಟ್ಟಡ ನಿರ್ಮಾಣ ಪರವಾನಗಿ ನೀಡುವಾಗ ಕಲಬುರಗಿ ಮಹಾನಗರ ಪಾಲಿಕೆ ಹಲವು ಷರತ್ತುಗಳನ್ನು ವಿಧಿಸುತ್ತದೆ. ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬುದೂ ಒಂದು ಷರತ್ತು. ಆದರೆ, ಅದು ಬರೀ ಕಾಗದದಲ್ಲಷ್ಟೇ ಉಳಿದಿದೆ.

‘2019ರ ಡಿಸೆಂಬರ್‌ನಿಂದ ಈತನಕ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಕೋರಿ ನೋಂದಾಯಿತ ಆರ್ಕಿಟೆಕ್ಟ್‌ಗಳ ಮೂಲಕ 7,400ಕ್ಕೂ ಅರ್ಜಿಗಳು ಸಲ್ಲಿಕೆಯಾಗಿವೆ. ಆ ಪೈಕಿ 5,100ಕ್ಕೂ ಹೆಚ್ಚು ಅರ್ಜಿಗಳಿಗೆ ಪಾಲಿಕೆ ಪರವಾನಗಿ ನೀಡಿದೆ. 2 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂಬುದನ್ನು ಪಾಲಿಕೆ ನೀಡಿದ ಅಂಕಿ–ಅಂಶಗಳು ಹೇಳುತ್ತವೆ. ‘ಅದರಲ್ಲಿ ಎಷ್ಟು ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ’ ಎಂದು ಎಂಬ ಪ್ರಶ್ನೆಗೆ ಪಾಲಿಕೆ ಅಧಿಕಾರಿಗಳ ಬಳಿ ನಿಖರ ಉತ್ತರವಿಲ್ಲ. ಇದು ಕೇವಲ ಕಲಬುರಗಿ ಪಾಲಿಕೆ ಕಥೆಯಲ್ಲ. ಜಿಲ್ಲೆಯ ಬಹುತೇಕ ನಗರ–ಪಟ್ಟಣ ಪಂಚಾಯಿತಿಗಳಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ.

‘ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಎಲ್ಲರೂ ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಪ್ಲಾನ್‌ನಲ್ಲಿ ತೋರಿಸಿರುತ್ತಾರೆ. ಕೆಲವರು ಕೊಳವೆ ಬಾವಿಗಳಿಗೆ ಅಂತರ್ಜಲ ಮರುಪೂರಣ ಮಾಡಿಸುತ್ತಾರೆ. ಆದರೆ, ಅನುಷ್ಠಾನ ಮಾತ್ರ ತಮ್ಮ ಅಗತ್ಯಕ್ಕೆ ತಕ್ಕಂತೆ ಪ್ಲ್ಯಾನ್‌ ಅನ್ನೇ ಬದಲಿಸುತ್ತಾರೆ. ಕಟ್ಟಡ ಪೂರ್ಣಗೊಂಡರೂ ನಿರ್ಮಾಣ ಮುಕ್ತಾಯ ಪ್ರಮಾಣ ಪತ್ರ ಪಡೆಯಲೂ ಅವರು ಬರಲ್ಲ’ ಎಂದು ಪಾಲಿಕೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಸಾಕಾರಗೊಳ್ಳದ ಥೀಮ್‌ ಪಾರ್ಕ್‌:

ಇನ್ನು, ಮಳೆ ನೀರು ಸಂಗ್ರಹ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪಾಲಿಕೆಯಿಂದ ಕಲಬುರಗಿಯ ಸಾರ್ವಜನಿಕ ಉದ್ಯಾನದಲ್ಲಿ ನಿರ್ಮಿಸುತ್ತಿರುವ ಥೀಮ್‌ ಪಾರ್ಕ್‌ ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಈಗ ಬರೀ ಕಟ್ಟಡ ತಲೆಎತ್ತಿದೆ. ಪ್ಲಾಸ್ಟರಿಂಗ್‌, ಬಣ್ಣ, ಮಳೆ ನೀರು ಸಂಗ್ರಹಿಸುವ ಪ್ರಾತ್ಯಕ್ಷಿಕೆ ಮಾಡಲ್‌ಗಳ ಅಳವಡಿಕೆ ಸೇರಿದಂತೆ ಎಲ್ಲ ಕೆಲಸಗಳೂ ಬಾಕಿ ಇವೆ.

ಇಚ್ಛಾಶಕ್ತಿಯ ಕೊರತೆ

ಚಿಂಚೋಳಿ: ಪಟ್ಟಣದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರಿನ ಸಂಗ್ರಹ ವ್ಯವಸ್ಥೆ ಅಳವಡಿಕೆಗೆ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ. ಸಾರ್ವಜನಿಕರಲ್ಲಿ ಈ ಕುರಿತ ಅರಿವಿನ ಕೊರತೆ ಹಾಗೂ ಹೇರಳವಾದ ಜಲ ಸಂಪನ್ಮೂಲದಿಂದಾಗಿ‌ ಪಟ್ಟಣದಲ್ಲಿ‌ ಮಳೆ ನೀರು‌ ಸಂಗ್ರಹ ವ್ಯವಸ್ಥೆ ಅಳವಡಿಕೆಗೆಜನ ಆಸಕ್ತಿ ತೋರಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಪ್ರಬಲ ಇಚ್ಛಾಶಕ್ತಿ ಅಧಿಕಾರಿಗಳಲ್ಲೂ ಕಾಣುತ್ತಿಲ್ಲ. ‘ಪುರಸಭೆ ಕಚೇರಿ ಹಾಗೂ ವಸತಿ ನಿಲಯ ಕಟ್ಟಡಗಳಲ್ಲಿ‌ ಮಳೆ ನೀರು‌ ಸಂಗ್ರಹ ವ್ಯವಸ್ಥೆ ಪುರಸಭೆ ಅನುದಾನದಲ್ಲಿ ಕೈಗೊಳ್ಳಲಾಗಿದೆ. ಖಾಸಗಿ ಕಟ್ಟಡಗಳಲ್ಲಿ ಈ ವ್ಯವಸ್ಥೆ ಅಳವಡಿಕೆ ಕುರಿತು ಅರಿವು ಮೂಡಿಸಲಾಗುವುದು’ ಎನ್ನುತ್ತಾರೆ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ.

ಪ್ರತಿ ಹನಿಯೂ ಮಹತ್ವದ್ದು...

ಕಡು ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಜನ ಮಳೆಗಾಲದಲ್ಲಿ ಸುರಿವ ಮಳೆ ನೀರು ಚರಂಡಿ ಸೇರುವುದನ್ನು ನೋಡಿಯೂ ಸುಮ್ಮನಾಗುತ್ತಾರೆ. ಮಳೆ ಸುರಿದಾಗ ತಾರಸಿಯಿಂದ ಬಿದ್ದು ರಸ್ತೆಗುಂಟ ನೋಡುವ ನೀರಿನ ಪ್ರಮಾಣ ಸಣ್ಣದೇನೂ ಅಲ್ಲ. ಚರಂಡಿ ರಸ್ತೆ ಎಂದೆಲ್ಲ ‘ಕಾಂಕ್ರೀಟ್‌’ ಕವಚ ಹಾಸಿರುವ ನಗರ–ಪಟ್ಟಣ ಪ್ರದೇಶಗಳಲ್ಲಿ ನೀರು ಭೂಮಿಯಲ್ಲಿ ಇಂಗಲು ಸ್ಥಳವೇ ಇಲ್ಲದಂತಾಗಿದೆ. ‘30x40 ಜಾಗದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡರೆ ವಾರ್ಷಿಕ 750 ಮಿಲಿ ಮೀಟರ್‌ ವಾಡಿಕೆ ಮಳೆಯಾಗುವ ಕಲಬುರಗಿಯಲ್ಲಿ ಪ್ರತಿ ವರ್ಷ 70 ಸಾವಿರ ಲೀಟರ್‌ಗೂ ಅಧಿಕ ನೀರು ಸಂಗ್ರಹಿಸಬಹುದು. 20x30 ಜಾಗದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿಕೊಂಡರೆ 35 ಸಾವಿರ ಲೀಟರ್‌ಗೂ ಹೆಚ್ಚು ನೀರು ಸಂಗ್ರಹಿಸಬಹುದು’ ಎನ್ನುತ್ತಾರೆ ಬಿಡಬ್ಲ್ಯುಎಸ್‌ಎಸ್‌ಬಿಯ ನಿವೃತ್ತ ಎಂಜಿನಿಯರ್‌ ಬಿ.ಎಂ.ಮಂಜುನಾಥ. 70 ಸಾವಿರ ಲೀಟರ್‌ ನೀರನ್ನು ಐದು ಜನರ ಕುಟುಂಬವೊಂದರ ಪ್ರತಿಯೊಬ್ಬರೂ ನಿತ್ಯ 135 ಲೀಟರ್‌ನಂತೆ 103 ದಿನ ಬಳಕೆ ಮಾಡಲು ಸಾಕಾಗುತ್ತದೆ ಎಂಬುದು ಗಮನಾರ್ಹ.

ಅಂತರ್ಜಲದ ಮೇಲೆ ಹೆಚ್ಚಿದ ‘ಒತ್ತಡ’

ನಗರ–ಪಟ್ಟಣ ಪ್ರದೇಶಗಳಲ್ಲಿ ಬಹುತೇಕ ಮನೆಗಳಲ್ಲಿ ಕೊಳವೆಬಾವಿ ಇರುತ್ತವೆ. ಇದರಿಂದ ಅಂತರ್ಜಲ ಬಳಕೆಯೂ ಎಗ್ಗಿಲ್ಲದೇ ನಡೆಯುತ್ತದೆ. ಸಹಜವಾಗಿಯೇ ಅಂತರ್ಜಲಮಟ್ಟವು ಆಳದಿಂದ ಪಾತಾಳಕ್ಕೆ ಕುಸಿಯುತ್ತಲೇ ಹೋಗುತ್ತಿದೆ. 2023ರ ಮೇನಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲಮಟ್ಟವು 34 ಅಡಿಗಳ ಆಳದಲ್ಲಿತ್ತು. 2024ರ ಮೇ ಅಂತ್ಯಕ್ಕೆ ಅದು ಮತ್ತಷ್ಟು ಕುಸಿದು 37.82 ಮೀಟರ್‌ಗಳಿಗೆ ತಲುಪಿದೆ. ಒಟ್ಟು ಸರಾಸರಿ 3.82 ಅಡಿಗಳಷ್ಟು ಕುಸಿತ ಕಂಡಿದೆ. ಜಿಲ್ಲೆಯ ಪೈಕಿ ಅಫಜಲಪುರದಲ್ಲಿ ಗರಿಷ್ಠ  ಸರಾಸರಿ 18 ಅಡಿಗಳಷ್ಟು ಕುಸಿತ ಕಂಡಿದೆ.

‘ಅಂತರ್ಜಲಕ್ಕೆ ಮರುಪೂರಣ ಅತ್ಯಗತ್ಯ’

ಕುಸಿಯುತ್ತಲೇ ಸಾಗುತ್ತಿರುವ ಅಂತರ್ಜಲಮಟ್ಟ ವೃದ್ಧಿಸಲು ಮಳೆ ನೀರು ಏಕೈಕ ಮೂಲವಾಗಿದೆ. ನಗರ– ಪಟ್ಟಣ ಪ್ರದೇಶಗಳಲ್ಲಿ ಮಳೆ ಸುರಿದಾಗ ಹರಿದುಹೋಗುವ ನೀರನ್ನು ಭೂಮಿಯಲ್ಲಿ ಇಂಗಿಸಲು ಒತ್ತು ನೀಡುವ ಅಗತ್ಯವಿದೆ. ಮಳೆ ನೀರನ್ನು ಕೊಳವೆಬಾವಿಗಳಿಗೆ ಮರುಪೂರಣ ಮಾಡಲು ಜನ ಮುಂದಾಗಬೇಕು. ಇದರಿಂದ ಒಂದೆಡೆ ಅಂತರ್ಜಲಮಟ್ಟ ವೃದ್ಧಿಸುತ್ತದೆ. ಮತ್ತೊಂದೆಡೆ ನೀರಿನ ಗುಣಮಟ್ಟವೂ ಸುಧಾರಿಸುತ್ತದೆ. ನೀರು ಅತ್ಯಮೂಲ್ಯ ನೈಸರ್ಗಿಕ ಸಂಪತ್ತು. ಅದನ್ನು ಮಿತವಾಗಿ ಬಳಸುವುದೂ ಬಹುಮುಖ್ಯ’ ಎನ್ನುತ್ತಾರೆ ಕಲಬುರಗಿಯ ಹಿರಿಯ ಭೂವಿಜ್ಞಾನಿ ಆರ್.ಮುಜಿಬುರ್‌ ರೆಹಮಾನ್‌.

ಮಳೆ ನೀರು ಸಂಗ್ರಹ ಜಾಗೃತಿ ಥೀಮ್‌ ಪಾರ್ಕ್‌ ಕೆಲವು ಕಾರಣಗಳಿಂದ ವಿಳಂಬವಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಅದು ನಾಗರಿಕರಿಗೆ ಜಾಗೃತಿ ಮೂಡಿಸಲು ಸಜ್ಜಾಗಲಿದೆ.
ಆರ್‌.ಪಿ.ಜಾಧವ, ಪಾಲಿಕೆ ಆಯುಕ್ತ(ಅಭಿವೃದ್ಧಿ)

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.